ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ರಾಣಿ ವರಿಸಿದ ಬೆಂಗಳೂರಿನ ಶಂಕರ

Rashmi Kasaragodu
Updated On : 26 Apr 2014, 12:21 pm

ಗುಲ್ಬರ್ಗ: ನಗರದ ಆಳಂದ ರಸ್ತೆಯಲ್ಲಿರುವ ರಾಜ್ಯ ಮಹಿಳಾ ನಿಲಯದಲ್ಲಿ ಗುರುವಾರ ರಾಜ್ಯ ಮಹಿಳಾ ನಿಲಯದ ನಿವಾಸಿ ರಾಣಿ ಮತ್ತು ಬೆಂಗಳೂರಿನ ಶಂಕರ ಕುಲಕರ್ಣಿ ಬಾಳ ಸಂಗಾತಿಗಳಾದರು.
ರಾಣಿ ಮತ್ತು ಶಂಕರ ಪರಸ್ಪರ ಹೂಮಾಲೆ ವಿನಿಮಯ ಮಾಡಿಕೊಳ್ಳುವುದರೊಂದಿಗೆ ವಿವಾಹ ಬಂಧಕ್ಕೊಳಪಟ್ಟು ದಾಂಪತ್ಯದ ನವಜೀವನಕ್ಕೆ ಕಾಲಿರಿಸಿದರು. ರಾಜ್ಯ ಮಹಿಳಾ ನಿಲಯದ ಅಧೀಕ್ಷಕಿ ದ್ರೌಪದಿ ಕೆ.ನಾಯಕ್ ಮತ್ತಿತರ ಅಧಿಕಾರಿಗಳು ಮತ್ತು ನಿಲಯದ ಸಿಬ್ಬಂದಿಗಳು ಕುಲಕರ್ಣಿ ಅವರ ಬಂಧು ಬಳಗ ಹಾಗೂ ಇತರ ಸಂಬಂಧಿಕರು ಈ ಸಂದರ್ಭದಲ್ಲಿ ಹಾಜರಿದ್ದು, ನವ ದಂಪತಿಗಳನ್ನು ಹರಸಿದರು.
ಬೀದರ್ ನಗರದ ರಾಣಿಯು 19 ವರ್ಷದವಳಿದ್ದು, ಹನುಮಂತ ಎಂಬುವರ ಪುತ್ರಿ. 2013ರ ನವೆಂಬರ್ 25 ರಂದು ಮಹಿಳಾ ನಿಲಯದಲ್ಲಿ ದಾಖಲಾಗಿದ್ದಾಳೆ. ಬಿ.ಎ. ಪ್ರಥಮ ವರ್ಷದಲ್ಲಿ ಓದುತ್ತಿರುವ ರಾಣಿಯ ಸ್ವ-ಇಚ್ಛೆಯಿಂದ ಶಂಕರ ಕುಲಕರ್ಣಿ ಅವರನ್ನು ಮದುವೆಯಾಗುವುದಾಗಿ ಒಪ್ಪಿಕೊಂಡಿದ್ದರಿಂದ ಅವಳ ಮುಂದಿನ ಭವಿಷ್ಯ ಹಾಗೂ ಪುನರ್ವಸತಿಯ ಹಿತದೃಷ್ಟಿಯಿಂದ ಈ ಮದುವೆ ಮಾಡಲಾಗಿದೆ.
ಶಂಕರರ ತಂದೆ ನಂದಕುಮಾರ ಕುಲಕರ್ಣಿ ಮೂಲತಃ ಗುಲ್ಬರ್ಗದವರು. ಕಳೆದ ಐದು ವರ್ಷದಿಂದ ಬೆಂಗಳೂರಿನ ಜೆ.ಪಿ.ನಗರ ಪುಟ್ಟೇನಹಳ್ಳಿಯಲ್ಲಿಯೇ ವಾಸವಾಗಿದ್ದಾರೆ. ಮೂವತ್ತು ವರ್ಷದ ಶಂಕರ ಇವರ ಒಬ್ಬನೇ ಮಗ. ಬಿ.ಕಾಂ. ವಿದ್ಯಾಭ್ಯಾಸ ಮಾಡಿದರೂ ಬ್ಯಾಂಕ್ ಮತ್ತಿತರ ಹಣಕಾಸು ಸಂಸ್ಥೆಗಳತ್ತ ಆಕರ್ಷಿತರಾಗದೇ ಉತ್ತರ ಕರ್ನಾಟಕದ ಆಹಾರ ತಯಾರಿಕೆಯ ಸ್ವಯಂ ಉದ್ಯೋಗದಲ್ಲಿ ನಿರತರಾಗಿದ್ದಾರೆ. ವಾರ್ಷಿಕ 2 ಲಕ್ಷ ರೂ. ಆದಾಯ ಪಡೆಯುತ್ತಿದ್ದಾರೆ.
ರಾಜ್ಯ ಮಹಿಳಾ ನಿಲಯದಿಂದ ಈವರೆಗೆ ನಡೆದ ಇದು ಹತ್ತನೇ ಮದುವೆಯಾಗಿದೆ. ವಿವಾಹ ಬಂಧಕ್ಕೊಳಗಾದ ಬಳಿಕ ನಿಲಯದ ಎಲ್ಲ ನಿವಾಸಿಗಳು ಸಂತೋಷದಿಂದ ಬಾಳುತ್ತಿದ್ದಾರೆ. ನಿಲಯದ ನಿವಾಸಿಗಳ ಮದುವೆಯ ಬಳಿಕ ಮೂರು ವರ್ಷದವರೆಗೆ ದಂಪತಿಗಳೊಂದಿಗೆ ನಿರಂತರ ಸಂಪರ್ಕವನ್ನಿಟ್ಟುಕೊಂಡು ಸುಖಕರ ದಾಂಪತ್ಯ ಜೀವನದ ಬಗ್ಗೆ ಕಾಲಕಾಲಕ್ಕೆ ಮಾಹಿತಿ ಪಡೆಯಲಾಗುವುದು ಎಂದು ರಾಜ್ಯ ಮಹಿಳಾ ನಿಲಯದ ಅಧೀಕ್ಷಕಿ ದ್ರೌಪದಿ ಕೆ.ನಾಯಕ್ ತಿಳಿಸಿದರು.
ಮದುವೆಯ ಸಣ್ಣ ಪುಟ್ಟ ಖರ್ಚಿಗಾಗಿ 5000 ರು. ಮತ್ತು 3-4 ತಿಂಗಳ ಬಳಿಕ ನಿವಾಸಿ ರಾಣಿಯ ಕೌಟುಂಬಿಕ ಭದ್ರತೆಗಾಗಿ 15,000 ರು. ಬಾಂಡ್ ನೀಡಲಾಗುವುದು ಎಂದು ರಾಜ್ಯ ಮಹಿಳಾ ನಿಲಯದ ಅಧೀಕ್ಷಕರು ತಿಳಿಸಿದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement