ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ತನಿಕೋಡ್ ಶೂಟೌಟ್ ಪ್ರಕರಣ: ಸರ್ಕಾರ ವಿಫಲ

Rashmi Kasaragodu
Updated On : 27 Apr 2014, 3:17 am

ರಾಯಚೂರು: ಶೃಂಗೇರಿ ಬಳಿಯ ತನಿಕೋಡ್ ಚೆಕ್‌ಪೋಸ್ಟ್‌ನಲ್ಲಿ ನಡೆದ ಶೂಟೌಟ್ ಪ್ರಕರಣದ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಪ್ರಕರಣವನ್ನು ಅಲ್ಪಸಂಖ್ಯಾತರ ತುಷ್ಟೀಕರಣಕ್ಕೆ ಬಳಸಲಾಗುತ್ತಿದೆ ಎಂದು ಜಿಲ್ಲಾ ಬಿಜೆಪಿ ಟೀಕಿಸಿದೆ.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮುಖಂಡ ತ್ರಿವಿಕ್ರಮ್ ಜೋಷಿ ಮಾತನಾಡಿ, ತನಿಕೋಡ್ ಚೆಕ್‌ಪೋಸ್ಟ್‌ನಲ್ಲಿ ನಡೆದ ಶೂಟೌಟ್‌ನಲ್ಲಿ ಕಬೀರ್ ಎಂಬ ವ್ಯಕ್ತಿ ಸಾವಿಗೀಡಾಗಿದ್ದರ ಬಗ್ಗೆ ಈಗಾಗಲೇ ತನಿಖೆಗೆ ಆದೇಶಿಸಿದ್ದು, ರಾಜ್ಯ ಸರ್ಕಾರ ತನಿಖಾ ವರದಿಗೆ ಕಾಯದೇ ಮೃತನ ಕುಟುಂಬಕ್ಕೆ ಪರಿಹಾರ ನೀಡಲು ಮುಂದಾಗಿರುವುದು ದುರದೃಷ್ಟಕರ ಸಂಗತಿ ಎಂದು ಖಂಡಿಸಿದರು.
ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಂಗ ತನಿಖಾ ವರದಿಗೆ ಕಾಯದೇ ನಕ್ಸಲ್ ನಿಗ್ರಹ ಪಡೆಯ ಸಿಬ್ಬಂದಿ ವಿರುದ್ಧವೇ ರಾಜ್ಯ ಸರ್ಕಾರ ಕೊಲೆ ಕೇಸ್ ದಾಖಲಿಸಲು ಅನುವು ಮಾಡಿದೆ. ಮೃತ ಕಬೀರ್ ಒಬ್ಬ ಜಾನುವಾರುಗಳ ಕಳ್ಳ ಸಾಗಣೆದಾರ ಎಂಬ ಆರೋಪವಿದೆ. ಆದರೆ ಆತನನ್ನು ಹುತಾತ್ಮ ಎಂಬ ರೀತಿಯಲ್ಲಿ ಬಿಂಬಿಸುವ ಕಾರ್ಯವನ್ನು ಸರ್ಕಾರ ಮತ್ತು ಕೆಲ ಎಡಪಂಥೀಯ ಆಲೋಚನೆ ಹೊಂದಿರುವವರು ಮಾಡುತ್ತಿದ್ದಾರೆಂದು ಟೀಕಿಸಿದರು.
ಸರ್ಕಾರ ವಿಫಲ: ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಗೃಹ ಸಚಿವ ಜಾರ್ಜ್ ಅವರು ಶೂಟೌಟ್ ಪ್ರಕರಣವನ್ನು ನಿಭಾಯಿಸುವಲ್ಲಿ ವಿಫಲರಾಗಿದ್ದಾರೆ. ಅಲ್ಪಸಂಖ್ಯಾತರ ಓಲೈಕೆಯ ಕಾರ್ಯಕ್ಕೆ ಪ್ರಕರಣ ಬಳಸಿಕೊಳ್ಳಲಾಗುತ್ತಿದೆ. ಮೃತ ಕಬೀರ್‌ನ ಕುಟುಂಬಕ್ಕೆ ಸರ್ಕಾರ 10 ಲಕ್ಷ ನೀಡಲು ಮುಂದಾಗಿರುವುದು ಇದಕ್ಕೆ ಸಾಕ್ಷಿಯಾಗಿದೆ ಎಂದು ಆರೋಪಿಸಿದರು. ನಕ್ಸಲ್ ನಿಗ್ರಹ ಪಡೆಯ ಪೇದೆ ನವೀನ್ ನಾಯಕ ಕರ್ತವ್ಯ ಪ್ರಜ್ಞೆಗೆ ಸರ್ಕಾರ ಮೆಚ್ಚುಗೆ ವ್ಯಕ್ತಪಡಿಸದೇ ಅವರ ವಿರುದ್ಧವೇ ಕೊಲೆ ಪ್ರಕರಣ ದಾಖಲಿಸಲು ಅವಕಾಶ ಕಲ್ಪಿಸಿದೆ. ಅಷ್ಟೇ ಅಲ್ಲ, ಪೇದೆಯ ಬಂಧನಕ್ಕೂ ದಾರಿ ಮಾಡಿರುವುದು ಕಾನೂನಿನ ಚೌಕಟ್ಟಿನಲ್ಲಿ ಕೆಲಸ ಮಾಡುವ ಪೊಲೀಸ್ ಮತ್ತು ಭದ್ರತಾ ಸಿಬ್ಬಂದಿಯನ್ನು ಅಧೀರಗೊಳಿಸುವ ಕೃತ್ಯವನ್ನು ರಾಜ್ಯ ಸರ್ಕಾರ ಮಾಡುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಕಾನೂನು ಸುವ್ಯವಸ್ಥೆಗೆ ಅಪಮಾನ: ಅಲ್ಪಸಂಖ್ಯಾತರ ಓಲೈಕೆ ಭರದಲ್ಲಿ ಕಾಂಗ್ರೆಸ್ ಸರ್ಕಾರವು ಕಾನೂನು ವ್ಯವಸ್ಥೆಗೆ ಅಪಮಾನ ಮಾಡುವ ರೀತಿಯಲ್ಲಿ ಕ್ರಮ ಅನುಸರಿಸುತ್ತಿದೆ. ಬೆಳಗಾವಿಯಲ್ಲಿ ರೈತ ವಿಠ್ಠಲ್ ಕಬ್ಬಿಗೆ ಸೂಕ್ತ ಬೆಂಬಲ ಬೆಲೆಗೆ ಆಗ್ರಹಿಸಿ ಆತ್ಮಹತ್ಯೆ ಮಾಡಿಕೊಂಡರೆ ಆ ಪ್ರಕರಣವನ್ನು ಮದ್ಯ ಸೇವಿಸಿ ಸತ್ತ ಎಂದಿದ್ದ ಸಿಎಂ ಸಿದ್ದರಾಮಯ್ಯ, ಸದ್ಯ ಜಾನುವಾರು ಕಳ್ಳ ಸಾಗಣೆದಾರ ಕಬೀರ್ ಶೂಟೌಟ್ ಕೇಸ್‌ಗೆ ಸಂಬಂಧಿಸಿ ಅತೀಯಾದ ಆಸಕ್ತಿ ಪ್ರದರ್ಶಿಸಿ ಪರಿಹಾರ ಕೊಡಿಸಲು ಮುಂದಾಗಿರುವುದು ಅವರ ಸರ್ಕಾರದ ಕಾರ್ಯವೈಖರಿ ಹೊರಹಾಕಿದೆ ಎಂದು ಆರೋಪಿಸಿದರು.
  ಶೂಟೌಟ್‌ಗೆ ಸಂಬಂಧಿಸಿ ವಾಸ್ತವಾಂಶ ಬರುವವರೆಗೆ ಕಾಯದ ಸರ್ಕಾರ ಭದ್ರತಾ ಸಿಬ್ಬಂದಿಯನ್ನೇ ಘಟನೆಗೆ ಹೊಣೆಯಾಗಿಸಿ ಕೊಲೆ ಪ್ರಕರಣ ದಾಖಲಿಸಲು ಅವಕಾಶ ನೀಡಿದ್ದು ಪೊಲೀಸ್ ಮತ್ತು ಭದ್ರತಾ ವ್ಯವಸ್ಥೆ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ ಮಾತ್ರವಲ್ಲ, ಕಾನೂನಿನ ಜಾರಿಯಲ್ಲಿ ಸಿಬ್ಬಂದಿ ಹಿಂದೇಟು ಹಾಕುವಂಥ ಪರಿಸ್ಥಿತಿ ನಿರ್ಮಾಣ ಮಾಡಲಿದೆ ಎಂದು ಎಚ್ಚರಿಸಿದರು.
  ಈ ಸಂದರ್ಭದಲ್ಲಿ ಬಿಜೆಪಿ ಪಕ್ಷದ ಪ್ರಮುಖರಾದ ನರಸಪ್ಪ ಯಕ್ಲಾಸಪುರ, ಬಂಡೇಶ್ ವಲ್ಕಂದಿನ್ನಿ, ಅಶ್ವತ್ಥ್ ರಾಜಪುರೋ ಹಿತ್ ಸೇರಿದಂತೆ ಅನೇಕರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement