ರಾಯಚೂರು: ಎರಡು ಕಡೆ ಮರು ಮತದಾನ 29ಕ್ಕೆ
ರಾಯಚೂರು: ರಾಯಚೂರು ಲೋಕಸಭೆ ಕ್ಷೇತ್ರದ ಯಾದಗಿರಿ ಜಿಲ್ಲೆ ವ್ಯಾಪ್ತಿಯ ಎರಡು ಕಡೆ ಏ. 29ರಂದು ಮರು ಮತದಾನಕ್ಕೆ ಚುನಾವಣೆ ಆಯೋಗ ಸೂಚಿಸಿದೆ.
ಈ ಕುರಿತು ಜಿಲ್ಲಾ ಚುನಾವಣಾಧಿಕಾರಿ ಎಸ್.ಎನ್. ನಾಗರಾಜು ಅವರು 'ಕನ್ನಡಪ್ರಭ'ಕ್ಕೆ ಮಾಹಿತಿ ನೀಡಿ, ಯಾದಗಿರಿ ಜಿಲ್ಲೆಯ ಯಾದಗಿರಿ ವಿಧಾನಸಭೆ ಕ್ಷೇತ್ರದ 112ನೇ ಮತಗಟ್ಟೆ ಮತ್ತು ಶಹಾಪುರ ವಿಧಾನಸಭೆ ಕ್ಷೇತ್ರದ ವ್ಯಾಪ್ತಿಯ 35ನೇ ಮತಗಟ್ಟೆಯಲ್ಲಿ ಇತ್ತೀಚೆಗೆ ನಡೆದ ಮತದಾನದ ವೇಳೆ ಮತಯಂತ್ರದಲ್ಲಿ ದೋಷ ಕಂಡುಬಂದಿತ್ತು. ಈ ಬಗ್ಗೆ ರಾಜ್ಯ ಚುನಾವಣೆ ಆಯೋಗಕ್ಕೆ ಮಾಹಿತಿ ನೀಡಿ ಮಾರ್ಗದರ್ಶನಕ್ಕೆ ಕೋರಲಾಗಿತ್ತು ಎಂದು ತಿಳಿಸಿದರು. ಈ ಹಿನ್ನೆಲೆಯಲ್ಲಿ ಮರು ಮತದಾನಕ್ಕೆ ಆಯೋಗ ಸೂಚಿಸಿದೆ. ಏ.29ರಂದು ಈ ಎರಡೂ ಮತಗಟ್ಟೆಗಳಲ್ಲಿ ಬೆಳಗ್ಗೆ 7ರಿಂದ ಸಂಜೆ 6 ರವರೆಗೆ ಮತದಾನ ನಡೆಯಲಿದೆ ಎಂದು ತಿಳಿಸಿದರು.
ಸಿಇಟಿ: 6 ಕೇಂದ್ರಗಳಲ್ಲಿ ಪರೀಕ್ಷೆ
ರಾಯಚೂರು: ಜಿಲ್ಲೆಯಲ್ಲಿ 2014ನೇ ಸಾಲಿನ ವೃತ್ತಿ ಶಿಕ್ಷಣ ಕೋರ್ಸ್ಗಳಿಗೆ ಪ್ರವೇಶಕ್ಕಾಗಿ ಸಿಇಟಿ ಪರೀಕ್ಷೆಗಳು ಮೇ 1 ಮತ್ತು 2ರಂದು ನಡೆಯಲಿದ್ದು, ನಗರದಲ್ಲಿ ಒಟ್ಟು ಆರು ಕೇಂದ್ರಗಳಲ್ಲಿ ಪರೀಕ್ಷೆ ನಡೆಸಲು ಜಿಲ್ಲಾಡಳಿತ ನಿರ್ಧರಿಸಿದೆ.
ನಗರದಲ್ಲಿ ಶನಿವಾರ ಕರೆದಿದ್ದ ಸಿಇಟಿ ಪರೀಕ್ಷೆಯ ಪೂರ್ವಭಾವಿ ಸಿದ್ಧತೆ ಸಭೆಯಲ್ಲಿ ಈ ಕುರಿತು ಮಾತನಾಡಿದ ಜಿಲ್ಲಾಧಿಕಾರಿ ಸಿಇಟಿ ಪರೀಕ್ಷೆ ಸುಗಮವಾಗಿ ನಡೆಯಲು ಅಗತ್ಯ ಸಿದ್ಧತೆ ಕೈಗೊಳ್ಳುವಂತೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ವಿವಿಧ ಕಾಲೇಜಿನಲ್ಲಿ: ಸಭೆಯಲ್ಲಿ ಮಾತನಾಡಿದ ಶಿಕ್ಷಣ ಇಲಾಖೆಯ ಅಧಿಕಾರಿಗಳು, ನಗರದ ಆರು ಪರೀಕ್ಷೆ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದ್ದು, ಇನ್ಪೇಂಟ್ ಜೀಸಸ್ ಪಿಯು ಕಾಲೇಜಿನಲ್ಲಿ 256 ವಿದ್ಯಾರ್ಥಿಗಳು, ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜಿನಲ್ಲಿ 256 ಹಾಗೂ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನಲ್ಲಿ 272, ಎಎಂಇ ಪದವಿ ಪೂರ್ವ ಕಾಲೇಜುನಲ್ಲಿ 400, ಟ್ಯಾಗೋರ ಸ್ಮಾರಕ ಪದವಿ ಪೂರ್ವ ಕಾಲೇಜಿನಲ್ಲಿ 256, ವಿದ್ಯಾಭಾರತಿ ಪದವಿ ಪೂರ್ವ ಕಾಲೇಜಿನಲ್ಲಿ 256 ಪರೀಕ್ಷಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆಂದು ತಿಳಿಸಿದರು.
ಪರೀಕ್ಷೆ ವೀಕ್ಷಕರ ನೇಮಕ: ಆರು ಪರೀಕ್ಷೆ ಕೇಂದ್ರಗಳಿಗೆ ಆರು ಜನ ಅಧಿಕಾರಿಗಳನ್ನು ವೀಕ್ಷಕರಾಗಿ ನೇಮಿಸಲಾಯಿತು. ಡಿಡಿಪಿಐ, ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ, ಜಿಪಂ ಯೋಜನಾಧಿಕಾರಿ, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ, ಮೀನುಗಾರಿಕೆ ಸಹಾಯಕ ನಿರ್ದೇಶಕರನ್ನು ಜಿಲ್ಲಾಧಿಕಾರಿ ಪರೀಕ್ಷೆಯ ವೀಕ್ಷಕರಾಗಿ ನೇಮಿಸಿದರು.
ಮುಖ್ಯ ಅಧೀಕ್ಷಕರಾಗಿ ಕಾಲೇಜುಗಳ ಪ್ರಾಂಶುಪಾಲರನ್ನು ನೇಮಿಸಲಾಯಿತು. ಜಿಲ್ಲಾ ಖಜಾನೆಯಲ್ಲಿ ಪ್ರಶ್ನೆ ಪತ್ರಿಕೆಗಳನ್ನು ಇರಿಸಿ, ಅವುಗಳನ್ನು ಪರೀಕ್ಷೆಯ ದಿನಗಳಂದು ಪರೀಕ್ಷಾ ಸಮಯಕ್ಕೆ ಮುಂಚಿತವಾಗಿ ಮೂರು ಜನರ ಸಮಿತಿ ಪ್ರಶ್ನೆ ಪತ್ರಿಕೆ ಪಡೆದು ಕೇಂದ್ರಗಳಿಗೆ ತಲುಪಿಸಬೇಕೆಂದು ಜಿಲ್ಲಾಧಿಕಾರಿ ಸೂಚಿಸಿದರು.
ಬಂದೋಬಸ್ತು: ಪ್ರಶ್ನೆ ಪತ್ರಿಕೆಗಳನ್ನು ಸಾಗಿಸುವಾಗ ಅದರ ರಕ್ಷಣೆಗಾಗಿ ಪೊಲೀಸ್ ಇಲಾಖೆಯ ಸೇವೆ ಒದಗಿಸಲು ಹಾಗೂ ಕೇಂದ್ರಗಳಲ್ಲಿ ಸೂಕ್ತ ರಕ್ಷಣೆಗಾಗಿ ಪೊಲೀಸ್ ವ್ಯವಸ್ಥೆ ಮಾಡಲು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳನ್ನು ಸಭೆಯಲ್ಲಿ ಕೋರಲಾಯಿತು. ಬೇಸಿಗೆಯ ಹಿನ್ನೆಲೆ ಪರೀಕ್ಷಾರ್ಥಿಗಳ ಆರೋಗ್ಯದ ಹಿತದೃಷ್ಟಿಯಿಂದ ಆರೋಗ್ಯ ಸೇವೆ ನೀಡಲು ಸೂಕ್ತ ವ್ಯವಸ್ಥೆ ಮಾಡುವಂತೆ ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣಾಧಿಕಾರಿಗಳಿಗೆ ಪತ್ರ ಬರೆಯಲು ಜಿಲ್ಲಾಧಿಕಾರಿ ಸೂಚಿಸಿದರು.
ಜೆಸ್ಕಾಂ: ಜೆಸ್ಕಾಂನವರು ಪರೀಕ್ಷಾ ದಿನಗಳಂದು ಪರೀಕ್ಷಾ ಅವಧಿಯಲ್ಲಿ ತಪ್ಪದೇ ವಿದ್ಯುತ್ ಪೂರೈಕೆ ಮಾಡಲು ವ್ಯವಸ್ಥೆ ಮಾಡಿಕೊಳ್ಳುವಂತೆ ಸೂಚಿಸಲಾಯಿತು. ಕುಡಿಯುವ ನೀರಿಗಾಗಿ ಅನುದಾನವಿದ್ದು, ಪ್ರತಿ ಕೇಂದ್ರದಲ್ಲಿ ಶುದ್ಧ ನೀರನ್ನು ಬಾಟಲ್ಗಳಲ್ಲಿ ತರಿಸಿ ಪರೀಕ್ಷಾರ್ಥಿಗಳಿಗೆ ಅವರ ಸ್ಥಳದಲ್ಲಿಯೇ ಸರಬರಾಜು ಮಾಡಲು ಜಿಲ್ಲಾಧಿಕಾರಿ ಸೂಚಿಸಿದರು. ಸಭೆಯಲ್ಲಿ ಜಿಪಂ ಸಿಇಒ ವಿಜಯ ಜ್ಯೋತ್ಸ್ನಾ, ಅಪರ ಜಿಲ್ಲಾಧಿಕಾರಿ ಪ್ರಕಾಶ ಹಿಟ್ನಾಳ, ಸಿಪಿಐ ಚಂದ್ರಶೇಖರ, ಜಿಲ್ಲಾ ಖಜಾನಾಧಿಕಾರಿ ಶ್ರೀನಿವಾಸರಾವ ಬಾಗಲವಾಡ್, ಜಿಲ್ಲಾ ಮಟ್ಟದ ಅಧಿಕಾರಿಗಳು ಕಾಲೇಜುಗಳ ಪ್ರಾಂಶುಪಾಲರುಗಳು, ಉಪಮುಖ್ಯ ಆಧಿಕ್ಷಕರು ಇತರರು ಉಪಸ್ಥಿತರಿದ್ದರು.