ಟಿಇಟಿ ಪರೀಕ್ಷೆ: ಕನಿಷ್ಠ ಅಂಕದ ಮಿತಿ ಸಡಿಲಿಕೆಗೆ ಒತ್ತಾಯ
ರಾಯಚೂರು: ಕರ್ನಾಟಕ ರಾಜ್ಯ ಶಿಕ್ಷಕರ ಅರ್ಹತಾ ಪರಿಕ್ಷೆಯಲ್ಲಿ ಹೈದ್ರಾಬಾದ್ ಕರ್ನಾಟಕ ಪ್ರದೇಶದ ಅಭ್ಯರ್ಥಿಗಳಿಗೆ ಕನಿಷ್ಟ ಅಂಕಗಳಲ್ಲಿ ವಿಶೇಷ ಸಡಿಲಿಕೆ ನೀಡುವಂತೆ ಹೈದ್ರಾಬಾದ್ ಕರ್ನಾಟಕ ಹೋರಾಟ ಸಮಿತಿ ಒತ್ತಾಯಿಸಿದೆ.
ಈ ಕುರಿತು ಬೆಂಗಳೂರಿನ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರಿಗೆ ಪತ್ರ ಬರೆದಿರುವ ಸಮಿತಿಯ ರಾಜ್ಯ ಉಪಾಧ್ಯಕ್ಷ ಡಾ. ರಜಾಕ್ ಉಸ್ತಾದ್, ಹೈದ್ರಾಬಾದ ಕರ್ನಾಟಕಕ್ಕೆ ಸಂವಿಧಾನದ 371ನೇ ಕಲಂ (ಜೆ) ತಿದ್ದುಪಡಿಯಾಗಿದ್ದು, ಸರ್ಕಾರ ಈಗಾಗಲೇ ವಿಶೇಷ ಮೀಸಲಾತಿ ನಿಗದಿಗೊಳಿಸಿ ಕಾನೂನು ಜಾರಿಗೊಳಿಸಿದೆ ಎಂದು ತಿಳಿಸಿದ್ದಾರೆ.
ರಾಜ್ಯ ಸರ್ಕಾರ 11500 ಶಿಕ್ಷಕರನ್ನು ನೇಮಿಸಿಕೊಳ್ಳುವುದಾಗಿ ಹೇಳಿದ್ದು, ಇಂಥ ಸಂದರ್ಭದಲ್ಲಿ ಇಲಾಖೆಯು ಸಾರ್ವಜನಿಕ ಪ್ರಕಟಣೆ ನೀಡಿ, ಕರ್ನಾಟಕ ರಾಜ್ಯ ಶಿಕ್ಷಕರ ಅರ್ಹತಾ ಪರೀಕ್ಷೆಯನ್ನು ನಡೆಸುವುದಾಗಿ ತರಾತುರಿಯ ಸಿದ್ಧತೆಗೆ ಮುಂದಾಗಿದೆ. ಮಾತ್ರವಲ್ಲ ಅರ್ಹತಾ ಪರೀಕ್ಷೆಯಲ್ಲಿ ಇಂತಿಷ್ಟೇ ಅಂಕ ಪಡೆದರೆ ಮಾತ್ರ ಶಿಕ್ಷಕರ ಹುದ್ದೆಗೆ ಅರ್ಜಿ ಸಲ್ಲಿಸಲು ಅರ್ಹರು ಎಂದು ಹೇಳಿರುವುದು ಹೈ.ಕ.ಭಾಗದ ಅಭ್ಯರ್ಥಿಗಳಿಗೆ ಅನ್ಯಾಯ ಮಾಡುವ ನಿರ್ಧಾರವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಅಸಮಂಜಸ: ಹೈದ್ರಾಬಾದ್ ಕರ್ನಾಟಕ ಭಾಗದ ಅಭ್ಯರ್ಥಿಗಳಿಗೆ ಅನ್ಯಾಯ ಮಾಡುವ ಹುನ್ನಾರವಿದಾಗಿದ್ದು, ಪರೀಕ್ಷೆಯಲ್ಲಿ ಹೈದ್ರಾಬಾದ್ ಕರ್ನಾಕದ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಅರ್ಹತೆ ಪಡೆಯಬಾರದೆನ್ನುವ ಸಂಚು ಇಲಾಖೆ ನಡೆಸಿದೆ. ಸಂವಿಧಾನಾತ್ಮಕವಾಗಿ ಈ ಭಾಗದವರಿಗೆ ದೊರಕಿಸಿರುವ 371ನೇ ಕಲಂ ಮೀಸಲಾತಿಯ ಆಶಯಕ್ಕೆ ವಿರುದ್ಧವಾಗಿ ಇಲಾಖೆ ಇಂಥ ನಿರ್ಧಾರಕ್ಕೆ ಮುಂದಾಗಿರುವುದು ಸಮಂಜಸವಲ್ಲ ಎಂದಿರುವ ಅವರು, ತಕ್ಷಣಕ್ಕೆ ಈ ಅರ್ಹತಾ ಪರೀಕ್ಷೆ ಮುಂದೂಡಬೇಕು. ಅಭ್ಯರ್ಥಿಗಳಿಗೆ ಸಾಕಷ್ಟು ಸಮಯಾವಕಾಶ ನೀಡಿ ಪರೀಕ್ಷೆ ನಡೆಸಬೇಕು. ಅದೇ ರೀತಿ ಈ ಪರೀಕ್ಷೆಯಲ್ಲಿ ಅರ್ಹತೆಯನ್ನು ಪಡೆಯಲು ನಿಗದಿಗೊಳಿಸಿದ ಕನಿಷ್ಠ ಅಂಕಗಳನ್ನು ಹೈದ್ರಾಬಾದ್ ಕರ್ನಾಟಕದ ಅಭ್ಯರ್ಥಿಗಳಿಗೆ ಸಡಿಲಗೊಳಿಸಬೇಕೆಂದು ಒತ್ತಾಯಿಸಿದ್ದಾರೆ.