ನಕಲಿ ಹತ್ತಿ ಬೀಜ ಪತ್ತೆ
ರಾಯಚೂರು: ಮಾನವಿ ತಾಲೂಕಿನ ಜೀನೂರುಕ್ಯಾಂಪಿನಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ನಕಲಿ ಹತ್ತಿ ಬೀಜ ತಯಾರಿಕೆ ದಂಧೆಯನ್ನು ರಾಜ್ಯ ರೈತ ಸಂಘ ಪತ್ತೆ ಹಚ್ಚಿದ್ದು,ತಲಾ ಅರ್ಧ ಕೆಜಿಯ ಒಟ್ಟು 1100 ಚೀಲ ನಕಲಿ ಹತ್ತಿ ಬೀಜವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಆಂಧ್ರಪ್ರದೇಶದ ಐಜಾದ ಬಸಯ್ಯಸ್ವಾಮಿ ಎಂಬಾತ ದಂಧೆಯಲ್ಲಿ ಶಾಮೀಲಾಗಿದ್ದು, ಆತ ದಾಳಿ ನಂತರದಲ್ಲಿ ಪರಾರಿಯಾಗಿದ್ದಾನೆ. ಜೀನೂರು ಕ್ಯಾಂಪಿನ ಮನೆಯೊಂದನ್ನು ಬಾಡಿಗೆ ಪಡೆದು ಅದರಲ್ಲಿ ನಕಲಿ ಹತ್ತಿ ಬೀಜ ತಯಾರಿಸಿ ವಿವಿಧ ಹೆಸರಾಂತ ಕಂಪನಿಗಳ ಲೇಬಲ್ ಅಂಟಿಸಿ ಮಾರಾಟ ಮಾಡುವ ಕೃತ್ಯ ಬಸಯ್ಯಸ್ವಾಮಿ ನಡೆಸುತ್ತಿದ್ದ ಎಂದು ಆರೋಪಿಸಲಾಗಿದೆ.
ಮಾಹಿತಿ ತಿಳಿದು ದಾಳಿ ಮಾಡಿದ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಚಾಮರಸ ಮಾಲಿಪಾಟೀಲ್ ಮತ್ತಿತರರಿಗೆ ಅಕ್ರಮ ದಂಧೆ ಪತ್ತೆಯಾಗಿದೆ. ಮಾನವಿ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. 1100 ಚೀಲ ನಕಲಿ ಹತ್ತಿ ಬೀಜದ ಚೀಟಲಗಳು ಪತ್ತೆಯಾಗಿದ್ದು, ಪೊಲೀಸರು ಬಿತ್ತನೆ ಬೀಜ ಜಪ್ತಿ ಮಾಡಿದ್ದಾರೆ. ಮಾನವಿ ಠಾಣೆಯಲ್ಲಿ ಕೇಸ್ ದಾಖಲಾಗಿದೆ.