ಸಿಡಿಲಿಗೆ ಎಂಟು ಕುರಿ ಬಲಿ
ಲಿಂಗಸ್ಗೂರು: ಬೇಸಿಗೆ ಬಿರು ಬಿಸಿಲಿಗೆ ಹೆಸರಾದ ರಾಯಚೂರು ಜಿಲ್ಲೆ ಅದರಲ್ಲೂ ಕಳೆದ ಎರಡು ದಿನಗಳಿಂದ ಬಿಸಿಲಿನ ತಾಪಮಾನಕ್ಕೆ ತತ್ತರಿಸಿದ ಜನ- ಜಾನುವಾರುಗಳಿಗೆ ಭಾನುವಾರ ಸುರಿದ ಭಾರಿ ಮಳೆ ಹಾಗೂ ಬಿರುಗಾಳಿಗೆ ಲಿಂಗಸ್ಗೂರು ಪಟ್ಟಣ ಸೇರಿ ಸುತ್ತಮುತ್ತಲ ವ್ಯಾಪ್ತಿಯಲ್ಲಿ ತಂಪೆರಗಿದೆ. ಇದೇ ವೇಳೆ ಸಿಡಿಲಿಗೆ 8 ಕುರಿಗಳು ಬಲಿಯಾದ ಘಟನೆ ಜರುಗಿದೆ.
ತಾಲೂಕಿನ ಅಡವಿಬಾವಿ- ರಾಂಪೂರ ಮಾರ್ಗ ಮಧ್ಯದ ಜಮೀನಿನಲ್ಲಿ ಲಕ್ಷ್ಮಪ್ಪ ರಾಂಪೂರ ಎಂಬುವರು ಕುರಿ ಮೇಯಿಸುವ ಸಂದರ್ಭದಲ್ಲಿ ಸಿಡಿಲು ಬಡಿದ ಪರಿಣಾಮ 8 ಕುರಿಗಳು ಸ್ಥಳದಲ್ಲೇ ಸಾವನ್ನಪ್ಪಿವೆ. ಲಿಂಗಸ್ಗೂರು ಪಟ್ಟಣದ 15 ಕಿಮೀ ವ್ಯಾಪ್ತಿಯಲ್ಲಿ ಅಂದಾಜು 2 ಗಂಟೆ ಕಾಲ ಬಿರುಗಾಳಿ ಸಹಿತ ಮಳೆ ಸುರಿದಿದೆ. ಪಟ್ಟಣದ ಗುಲ್ಬರ್ಗ ರಾಜ್ಯ ಹೆದ್ದಾರಿ ಸೇರಿದಂತೆ ವಿವಿಧ ವಾರ್ಡುಗಳಲ್ಲಿ ರಸ್ತೆ ಮೇಲೆಲ್ಲಾ ನೀರು ಹರಿದು ಜನತೆ ಹಾಗೂ ಸಂಚಾರ ತೀವ್ರ ತೊಂದರೆ ಅನುಭವಿಸುವಂತಾಗಿತ್ತು. ಕೆಲವೆಡೆ ಬಿರುಗಾಳಿಗೆ ಗಿಡ- ಮರಗಳ ರೆಂಬೆ- ಕೊಂಬೆಗಳು ನೆಲಕ್ಕುರುಳಿವೆ. ಇದರಿಂದ ಕೆಲಕಾಲ ವಿದ್ಯುತ್ ವ್ಯತ್ಯಯ ಉಂಟಾಗಿತ್ತು.