ಅಂಬೇಡ್ಕರರ ಸಾಮಾಜಿಕ ನ್ಯಾಯ ಅನುಕರಣೀಯ
ಗುಲ್ಬರ್ಗ: ಭಾರತದ ಬೆಳವಣಿಗೆಗೆ ಜಾತಿ ವ್ಯವಸ್ಥೆ ಮಾರಕವಾಗಿದೆ. ಜಾತಿ ವಿನಾಶದಿಂದ ಭಾರತ ಬಲಿಷ್ಠ ರಾಷ್ಟ್ರವಾಗುತ್ತದೆ ಎಂಬ ಡಾ. ಅಂಬೇಡ್ಕರರ ನುಡಿ ಅಕ್ಷರಶಃ ಸತ್ಯವಾಗಿದೆ. ಸಮಾನತೆಯಲ್ಲಿ ಮಾತ್ರ ಬದುಕಿನ ಸುಂದರ ಚಿತ್ರಣ ಕಾಣಲು ಸಾಧ್ಯ ಎಂದು ಎಸ್ಬಿಎಚ್ ಬ್ಯಾಂಕಿನ ನಿವೃತ್ತ ವ್ಯವಸ್ಥಾಪಕ ಚಿದಾನಂದ ಕಡಗಂಚಿ ಅಭಿಪ್ರಾಯಪಟ್ಟರು.
ನಗರದ ಭವಾನಿ ಕೈಗಾರಿಕಾ ತರಬೇತಿ ಕೇಂದ್ರದ ಸಭಾಂಗಣದಲ್ಲಿ ಇಲ್ಲಿನ ವಿಶ್ವಜ್ಯೋತಿ ಪ್ರತಿಷ್ಠಾನ ಹಮ್ಮಿಕೊಂಡಿದ್ದ ಡಾ. ಅಂಬೇಡ್ಕರರ ಸಾಮಾಜಿಕ ನ್ಯಾಯ ಅನುಕರಣೀಯ ಎಂಬ ವಿಶೇಷ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. 'ಸ್ವಯಂ ಪ್ರಕಾಶಿತರಾಗಿ' ಎಂಬ ಮಹಾತ್ಮ ಗೌತಮಬುದ್ಧರ ವಾಣಿ ಸಾರ್ವಕಾಲಿಕ ಸತ್ಯದಿಂದ ಕೂಡಿದೆ. ನಮ್ಮ ಉನ್ನತಿ ಹಾಗೂ ಅವನತಿಗೆ ನಾವೇ ಕಾರಣರು ಎಂಬ ಸತ್ಯವನ್ನು ಇಂದಿನ ಯುವಕರು ಮನಗಂಡು ಆ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿ, ಬದುಕನ್ನು ಸುಂದರಗೊಳಿಸಿಕೊಳ್ಳಬೇಕೆಂದರು.
ರಾಷ್ಟ್ರದ ಅಭಿವೃದ್ಧಿ ಬಗ್ಗೆ ಚಿಂತಿಸಿ: ಉಪನ್ಯಾಸ ನೀಡಿದ ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಸುರೇಶ ಬಡಿಗೇರ, ಜೀವನದಲ್ಲಿನ ಸೋಲುಗಳನ್ನು ಸವಾಲಾಗಿ ಸ್ವೀಕರಿಸಿ, ಅವಮಾನಗಳನ್ನು ಸನ್ಮಾನಗಳನ್ನಾಗಿ ಪರಿವರ್ತಿಸಿಕೊಂಡು ಸತತ ಪ್ರಯತ್ನದಿಂದ ವೈಚಾರಿಕ ನೆಲೆಗಟ್ಟಿನಲ್ಲಿ ಸಾಗಿ ಭಾರತ ದೇಶಕ್ಕೆ ಸುಭದ್ರ ಸಂವಿಧಾನ ರಚಿಸಿದ ಡಾ. ಅಂಬೇಡ್ಕರರು ಭಾರತ ಕಂಡ ಶ್ರೇಷ್ಠ ಸ್ವಾಭಿಮಾನಿ ದೇಶಪ್ರೇಮಿಗಳಾಗಿದ್ದಾರೆ. ಸರ್ವ ಜನಾಂಗದ ಕ್ಷೇಮಕ್ಕಾಗಿ ಕಾರ್ಯಕ್ಷಮತೆ ಮೆರೆದ ಅವರು ಭಾರತದ ಹೆಮ್ಮೆ ಎಂದರು. ಗುವಿವಿ ಉಪ ಗ್ರಂಥಪಾಲಕ ಗಣಪತಿ ಸಿಂಧೆ ಮಾತನಾಡಿ, ಬಡತನ, ಜಾತಿ ಸಾಧಕನಿಗೆ ಅಡ್ಡಿಪಡಿಸಲಾರವು ಎಂಬುದಕ್ಕೆ ಡಾ. ಅಂಬೇಡ್ಕರರ ಜೀವನವೇ ಸಾಕ್ಷಿಯಾಗಿದೆ. ಛಲ, ಉತ್ತಮ ಹಂಬಲದೊಂದಿಗೆ ವಿದ್ಯಾರ್ಥಿಗಳು ಸುಂದರ ಜೀವನವನ್ನು ನಿರ್ಮಿಸಿಕೊಳ್ಳಬೇಕೆಂದರು. ಪ್ರಾಸ್ತಾವಿಕವಾಗಿ ಮಾತನಾಡಿದ ಪ್ರತಿಷ್ಠಾನದ ಸಂಸ್ಥಾಪಕ ವಿಜಯಕುಮಾರ ತೇಗಲತಿಪ್ಪಿ, ಸರ್ವ ಜನಾಂಗದ ಸರ್ವತೋಮುಖ ಅಭಿವೃದ್ಧಿಗಾಗಿ ಶ್ರಮಿಸಿದ ಡಾ. ಅಂಬೇಡ್ಕರರು ಭಾರತ ಮಾತೆಯ ಹೆಮ್ಮೆಯ ಪುತ್ರ. ಅಂಬೇಡ್ಕರರ ವಿಚಾರಗಳು ಅವರ ಸಾಧನೆಯ ಸೂತ್ರಗಳು. ಇವು ಅವರ ಬದುಕನ್ನು ಹಸನುಗೊಳಿಸಿಕೊಳ್ಳಲು ಸಹಕಾರಿಯಾಗುತ್ತವೆ ಎಂದು ಹೇಳಿದರು.