ಉದ್ಯಾನ ವನಗಳಲ್ಲಿ ತ್ಯಾಜ್ಯ ವಿಲೇವಾರಿ
ಶಹಾಪುರ: ಭರದಿಂದ ಬೆಳೆಯುತ್ತಿರುವ ಶಹಾಪುರ ಪಟ್ಟಣ ಉದ್ಯಾನವನಗಳ ಕೊರತೆಯಿಂದ ನಲುಗುತ್ತಾ ಸಾರ್ವಜನಿಕರ ಹಿಡಿಶಾಪಕ್ಕೆ ಗುರಿಯಾಗುತ್ತಿದೆ.
ಆಯಾಸ ಪರಿಹರಿಸಿಕೊಳ್ಳಲು, ಕೆಲ ಹೊತ್ತು ವಿಶ್ರಾಂತಿ ಪಡೆಯಲು ನಗರದಲ್ಲಿ ಉದ್ಯಾನ ವನಗಳ ಕೊರತೆ ಎದ್ದು ಕಾಣುತ್ತಿದೆ. ಇಲ್ಲಿನ ನಾನಾ ಬಡಾವಣೆಗಳ ಉದ್ಯಾನವನಗಳು ಕಸ ಕಡ್ಡಿಗಳ ಜತೆ ಜಾಲಿ ಮುಳ್ಳುಗಳಿಂದ ತುಂಬಿದೆ. ಅದೇ ರೀತಿ ಇವು ತ್ಯಾಜ್ಯ ವಸ್ತುಗಳ ವಿಲೇವಾರಿ ಘಟಕದಂತಾಗಿವೆ. ಪುರಸಭೆಯವರ ನಿರ್ವಹಣೆ ಕೊರತೆಯಿಂದಾಗಿ ಸ್ಥಳೀಯ ನಾನಾ ಬಡಾವಣೆಗಳಲ್ಲಿ ಉದ್ಯಾನಗಳು ಹಾಳಾಗಿ ಹೋಗಿವೆ ಎಂದು ಸಾರ್ವಜನಿಕರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಅತಿಕ್ರಮಣದ ಭರಾಟೆ: ಪುರಸಭೆ ವ್ಯಾಪ್ತಿಯಲ್ಲಿ ಹೆಸರಿಗೆ ವಾರ್ಡಿಗೆ ಒಂದರಂತೆ ಉದ್ಯಾನವನಗಳು ಇರಬೇಕು. ಆದರೆ ಕೆಲವೆಡೆ ಉದ್ಯಾನವನಗಳ ಅತಿಕ್ರಮಣ ಮಾಡಿಕೊಂಡಿರುವುದು ಪುರಸಭೆ ಗಮನಕ್ಕೆ ಬಂದರೂ, ಸೂಕ್ತ ಕ್ರಮಕ್ಕೆ ಮುಂದಾಗದೆ ನಿಷ್ಕಾಳಜಿ ತೋರಿದೆ.
ಸೌಲಭ್ಯ ನೀಡದ ಪುರಸಭೆ: ಮೂಲ ಸೌಕರ್ಯದ ಬಗ್ಗೆ ಮಾತನಾಡುವ ಪುರಸಭೆ ಪಟ್ಟಣದಲ್ಲಿ ಅಳಿದುಳಿದಿರುವ ಉದ್ಯಾನ ವನಗಳ ಸಂರಕ್ಷಣೆಯತ್ತ ಗಮನ ನೀಡಿಲ್ಲ. ಪರಿಣಾಮ ಉದ್ಯಾನ ವನಗಳ ಪರಿಸ್ಥಿತಿ ಅಧ್ವಾನವಾಗಿದೆ. ಇಲ್ಲಿ ಕುಳಿತು ನೆಮ್ಮದಿಯಾಗಿ ಊಟ ಮಾಡಲಾಗುತ್ತಿಲ್ಲ. ಕುಳಿತೇನಂದ್ರೆ ನೆರಳಿಲ್ಲ. ಉಸಿರಾಡಿಸಿದನೆಂದರೆ ಸರಿಯಾದ ಗಾಳಿ ಸಿಕ್ಕುವುದಿಲ್ಲ ಎನ್ನುವುದು ಗ್ರಾಮೀಣ ಜನರ ಆಕ್ರೋಶವಾಗಿದೆ.
ಕೆಲ ಉದ್ಯಾನಗಳಲ್ಲಿ ಮಕ್ಕಳ ಆಟಿಕೆಗಳು ಜಂಗು ಹತ್ತಿವೆ. ಕುಳಿತುಕೊಳ್ಳುವ ಆಸನಗಳು ಮುರಿದಿವೆ. ಗೇಟುಗಳು ಹಾಳಾಗಿವೆ. ಮಳೆ ಬಂತೆಂದರೆ ಹಂದಿ, ನಾಯಿಗಳ ತಾಣವಾಗಿ, ಕೆಸರು ರಾಡಿಯಿಂದಾಗಿ ದುರ್ವಾಸನೆ ಬೀರುತ್ತದೆ. ಇಲ್ಲಿರುವ ವ್ಯವಸ್ಥೆ ನೋಡಿದರೆ ಎಂಥವರಿಗೂ ವಾಕರಿಕೆ ಬರುವಂಥ ಪರಿಸ್ಥಿತಿ ಎದ್ದು ಕಾಣುತ್ತದೆ.
ಹಣ ಪೋಲು: ಅಧಿಕಾರಿಗಳ ನಿರ್ಲಕ್ಷ್ಯದಿಂದ ಪಟ್ಟಣದ ಅನೇಕ ಬಡಾವಣೆಯ ಉದ್ಯಾನವನಗಳು ಜಾಲಿ ಕಂಟಿಗಳಿಂದ ಆವೃತ್ತವಾಗಿವೆ. ನಿಷ್ಪ್ರಯೋಜಕವಾದ ಉದ್ಯಾನದ ನಿರ್ವಹಣೆ ಹೆಸರಲ್ಲಿ ಪ್ರತಿವರ್ಷ ಸಾಕಷ್ಟು ಹಣ ಪೋಲಾಗುತ್ತಿದೆ ಎಂದು ಸಾರ್ವಜನಿಕರ ಆರೋಪಿಸಿದ್ದಾರೆ. ಒಟ್ಟಾರೆ ಬಡಾವಣೆಗಳಲ್ಲಿರುವ ವಿವಿಧ ಉದ್ಯಾನವನಗಳು ಸ್ವಚ್ಛತೆ ಇಲ್ಲದೆ ತಿಪ್ಪೆಗುಂಡಿಗಳಾಗಿವೆ. ಅನೇಕ ಬಾರಿ ಮನವಿ ಮಾಡಿದರೂ, ಯಾವುದೇ ಪ್ರಯೋಜನವಾಗಿಲ್ಲ ಎಂಬುದು ಸಾರ್ವಜನಿಕರ ಅಳಲಾಗಿದೆ. ಇನ್ನಾದರೂ ಅಧಿಕಾರಿಗಳು ಕ್ರಮಕ್ಕೆ ಮುಂದಾಗಿ ಉದ್ಯಾನವನಗಳ ಅಂದ ಹೆಚ್ಚಿಸಬೇಕು. ಜನತೆ ಮನಸ್ಸಿಗೆ ಮುದ ನೀಡುವ ತಾಣವಾಗಿಸುವುದಕ್ಕೆ ಮುಂದಾಬೇಕು ಎಂದು ಒತ್ತಾಯಿಸಿದ್ದಾರೆ.