ಕಾಮಗಾರಿ ವಿಳಂಬ; ಅನುದಾನಕ್ಕೆ ಕೊಕ್ಕೆ
ಕ.ಪ್ರ. ವಾರ್ತೆ ಗುಲ್ಬರ್ಗ ಏ.28
ಸಂವಿಧಾನದ 371ನೇ ಕಲಂಗೆ ತಿದ್ದುಪಡಿ ತಂದು ಹೈ.ಕ. ಪ್ರದೇಶಕ್ಕೆ ವಿಶೇಷ ಸ್ಥಾನಮಾನದನ್ವಯ ಹೊಸ ಪ್ರಾದೇಶಿಕ ಅಭಿವೃದ್ಧಿ ಮಂಡಳಿಯೇನೋ ಅಸ್ತಿತ್ವಕ್ಕೆ ಬಂದಿದೆ. ಆದರೆ, ಈ ಮೊದಲು ಅಸ್ತಿತ್ವದಲ್ಲಿದ್ದ ಎಚ್ಕೆಡಿಬಿಗೆ ಕಳೆದ ಆರ್ಥಿಕ ವರ್ಷದ 4ನೇ ಕಂತಿನ ಅನುದಾನ ಬಿಡುಗಡೆಯಾಗಿಲ್ಲ. ಇದಕ್ಕೆ ಕಾಮಗಾರಿಗಳ ಅನುಷ್ಠಾನದಲ್ಲಾದ ವಿಳಂಬವೇ ಕಾರಣ.
ಕಳೆದ 2013- 14ನೇ ಸಾಲಿನಲ್ಲಿ ಹೈದ್ರಾಬಾದ್ ಕರ್ನಾಟಕ ಅಭಿವೃದ್ಧಿ ಮಂಡಳಿ(ಎಚ್ಕೆಡಿಬಿ)ಗೆ ಬಜೆಟ್‌ನಲ್ಲಿ 65.30 ಕೋಟಿ ಒದಗಿಸಲಾಗಿತ್ತು. ಕಾಮಗಾರಿ ಅನುಷ್ಠಾನದಲ್ಲಿ ಆಗಿರುವ ವಿಳಂಬದಿಂದಾಗಿ 4ನೇ ಕಂತಿನ ರೂಪದಲ್ಲಿ ಬರಬೇಕಾಗಿದ್ದ 16.33 ಕೋಟಿ ಬಿಡುಗಡೆಯಾಗಿಲ್ಲ. ಶಾಸಕರು ಸಕಾಲದಲ್ಲಿ ಕ್ರಿಯಾಯೋಜನೆ ಸಲ್ಲಿಸಿರುವುದು, ಮಂಡಳಿಯಿಂದ ಮೇಲಿಂದ ಮೇಲೆ ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಯದೇ ಇರುವುದರಿಂದ ಮಂಡಳಿಗೆ ಬಂದಿರುವ ಅನುದಾನ ಸಂಪೂರ್ಣ ಬಳಕೆಯಾಗಿಲ್ಲ. ಹೀಗಾಗಿ ಡಿಸೆಂಬರ್‌ನಲ್ಲಿ ಬಿಡುಗಡೆಯಾಗಬೇಕಿದ್ದ ಹಣ ಮಂಡಳಿಗೆ ಬಂದಿಲ್ಲ.
ಬಿಡುಗಡೆ ಎಷ್ಟು?: ಹೈ-ಕ ಪ್ರದೇಶದ ಸರ್ವತೋಮುಖ ಅಭಿವೃದ್ಧಿಗಾಗಿ ರಚಿಸಿರುವ ಈ ಮಂಡಳಿಯ ಕಾಮಗಾರಿಗಳು ನಿಗದಿತ ಅವಧಿಯಲ್ಲಿ ಪೂರ್ಣಗೊಂಡ ಉದಾಹರಣೆಗಳೇ ಇಲ್ಲ. ಕಳೆದ 24 ವರ್ಷಗಳಿಂದಲೂ ಈ ರೀತಿ ಅನುದಾನ ರದ್ದಾಗುತ್ತಲೇ ಬಂದಿದೆ. ಅದೇ ಪರಿಸ್ಥಿತಿಯು ಕಳೆದ ಆರ್ಥಿಕ ವರ್ಷದಲ್ಲಿ ಮುಂದುವರಿದಿದೆ.
ಕಳೆದ ಆರ್ಥಿಕ ವರ್ಷದಲ್ಲಿ ಮಂಡಳಿಗೆ ಮೂರು ಕಂತುಗಳಲ್ಲಿ ಒಟ್ಟು 8.97 ಕೋಟಿ ಬಿಡುಗಡೆ ಮಾಡಲಾಗಿದೆ. ಆದರೆ, ಖರ್ಚಾಗಿರುವ ಅನುದಾನ ಮಾರ್ಚ್ ಅಂತ್ಯದವರೆಗೆ ಕೇವಲ 20.97 ಕೋಟಿ. ಇದನ್ನು ಗಮನಿಸಿದ ಯೋಜನಾ ಇಲಾಖೆಯ ಕೊನೆಯ ಕಂತನ್ನು ಬಿಡುಗಡೆ ಮಾಡುವ ಗೋಜಿಗೆ ಹೋಗಿಲ್ಲ.
ಕಳೆದ 2013ನೇ ಸಾಲಿನ ಏ.1ಕ್ಕೆ ಮಂಡಳಿಯಲ್ಲಿ 20.43 ಕೋಟಿ ಹಣ ಉಳಿದಿತ್ತು. 2013-14ನೇ ಸಾಲಿನ ಬಜೆಟ್‌ನಲ್ಲಿ 65.30 ಕೋಟಿ ಒದಗಿಸಲಾಗಿತ್ತು. ಈ ಪೈಕಿ 49.97 ಕೋಟಿಯನ್ನು ಬಿಡುಗಡೆ ಮಾಡಿತ್ತು. ಅಂದರೆ ಮಂಡಳಿಯಲ್ಲಿ 69.40 ಕೋಟಿ ಲಭ್ಯವಿತ್ತು.
ಬಿಡುಗಡೆ ಮಾಡದಿರಲು ಕಾರಣ?: ಈ ಅನುದಾನ ಬಳಕೆ ಮಾಡುವುದಕ್ಕಾಗಿ 1,412 ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ತೀರ್ಮಾನಿಸಲಾಗಿತ್ತು. ಅದರಲ್ಲಿ 756 ಮುಂದುವರಿದ ಕಾಮಗಾರಿಗಳಿದ್ದರೆ, 656 ಹೊಸ ಕಾಮಗಾರಿಗಳು. ಈ ಕಾಮಗಾರಿಗಳ ಪೈಕಿ ಮಾರ್ಚ್ ಅಂತ್ಯದವರೆಗೆ ಪೂರ್ಣಗೊಂಡಿರುವ ಕಾಮಗಾರಿಗಳ ಸಂಖ್ಯೆ 380. ಖರ್ಚಾಗಿರುವ ಅನುದಾನ 20.97 ಕೋಟಿ ಮಾತ್ರ. ಅಂದರೆ ಮಂಡಳಿಯಲ್ಲಿ 48.43 ಕೋಟಿ ಅನುದಾನ ಲಭ್ಯವಿರುವುದನ್ನು ಗಮನದಲ್ಲಿಟ್ಟುಕೊಂಡ ರಾಜ್ಯ ಸರ್ಕಾರ ಕೊನೆಯ ಕಂತು ಬಿಡುಗಡೆ ಮಾಡಿಲ್ಲ.
ಜನಪ್ರತಿನಿಧಿಗಳ ನಿರ್ಲಕ್ಷ್ಯ: ಮಂಡಳಿಯಿಂದ ರಸ್ತೆ ಮತ್ತು ಸೇತುವೆ, ಆರೋಗ್ಯ, ಶಿಕ್ಷಣ, ಸಣ್ಣ ನೀರಾವರಿ, ಕುಡಿವ ನೀರು, ಸರಬರಾಜು, ವಿದ್ಯುದ್ದೀಕರಣ, ಸಮಾಜ ಕಲ್ಯಾಣ ಹಾಗೂ ಇತರ ಕಟ್ಟಡ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. ಕಾಮಗಾರಿ ಅನುಷ್ಠಾನದಲ್ಲಿ ವಿಳಂಬವಾಗುತ್ತಿರುವುದರಿಂದ ಅಂದಾಜು ವೆಚ್ಚ ಹೆಚ್ಚುತ್ತಲೇ ಸಾಗಿದೆ. ಹೀಗಾಗಿ ಕಾಮಗಾರಿಗಳು ನೆನೆಗುದಿಗೆ ಬಿದ್ದು ಈ ಭಾಗದ ಅಭಿವೃದ್ಧಿಯ ಮೇಲೆ ಪರಿಣಾಮ ಬೀರುತ್ತಿದೆ. ರಾಜ್ಯ ಸರ್ಕಾರ ಮಂಡಳಿಗೆ ಅನುದಾನ ನೀಡಲು ಮುಂದಾಗದಿದ್ದರೂ ಅದು ಸಕಾಲದಲ್ಲಿ ಬಳಕೆಯಾಗುತ್ತಿಲ್ಲ. ಇದಕ್ಕೆ ಜನಪ್ರತಿನಿಧಿಗಳ ನಿರ್ಲಕ್ಷ್ಯವೇ ಕಾರಣ ಎಂಬುದರಲ್ಲಿ ಎರಡು ಮಾತಿಲ್ಲ. ಇದೀಗ ಹೊಸ ಸ್ವರೂಪದೊಂದಿಗೆ ಹೈದ್ರಾಬಾದ್ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಅಸ್ತಿತ್ವಕ್ಕೆ ಬಂದಿದೆ.
ನೂತನ ಮಂಡಳಿಗೆ 150 ಕೋಟಿ ಹಣ: 2013- 14ನೇ ಸಾಲಿಗಾಗಿ ಈ ಮಂಡಳಿಗೆ 150 ಕೋಟಿ ಅನುದಾನ ಒದಗಿಸಲಾಗಿದೆ. ಮಂಡಳಿಯ ಅಧ್ಯಕ್ಷರು ಆಗಿರುವ ಜಿಲ್ಲಾ ಉಸ್ತುವಾರಿ ಮಂತ್ರಿ ಖಮರುಲ್ ಇಸ್ಲಾಂ ನೇತೃತ್ವದಲ್ಲಿ ಮೊದಲ ಸಭೆ ನಡೆಸಿ 150 ಕೋಟಿ ಕ್ರಿಯಾಯೋಜನೆಗೆ ಕಳೆದ ಆರ್ಥಿಕ ವರ್ಷದಲ್ಲಿಯೇ ಅನುಮೋದನೆ ಪಡೆಯಲು ತೀರ್ಮಾನಿಸಲಾಗಿತ್ತು. ಆದರೆ, ಸಕಾಲದಲ್ಲಿ ರಾಜ್ಯಪಾಲರಿಗೆ ಕ್ರಿಯಾಯೋಜನೆ ಸಲ್ಲಿಸಲಾಗಿಲ್ಲ. ಹೀಗಾಗಿ ಹೊಸ ಮಂಡಳಿಯೂ ಸಹ ಹಳೆ ಮಂಡಳಿಯ ಹಾದಿಯಲ್ಲಿಯೇ ನಡೆಯುತ್ತಿರುವುದು ಸ್ಪಷ್ಟವಾಗುತ್ತದೆ.