ಮುದಗಲ್ ಹುಣಿಸೆಹಣ್ಣಿನ ವ್ಯಾಪಾರ ಜೋರು
ಮುದಗಲ್: ಪಟ್ಟಣದ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಬೆಳೆದಿದ್ದ ಹುಣಸೆ ಹಣ್ಣಿನ ಮಾರಾಟ ಸಂತೆಯಲ್ಲಿ ಜೋರಾಗಿಯೇ ಇತ್ತು. ಸೋಮವಾರದ ಸಂತೆಯಲ್ಲಿ ನೂರಾರು ಕ್ವಿಂಟಾಲ್ ಹುಣಿಸೆ ಹಣ್ಣು ಮಾರಾಟಕ್ಕೆ ಬಂದಿತ್ತು. ಬೆಲೆ ಹೆಚ್ಚಿದ್ದರಿಂದ ಮಾರುಕಟ್ಟೆಯಲ್ಲಿ ಸಿಕ್ಕಾಪಟ್ಟೆ ಹುಣಿಸೆಹಣ್ಣು ತಂದಿದ್ದ ರೈತರು, ವ್ಯಾಪಾರಿಗಳು ಉತ್ತಮ ಬೆಲೆಗೆ ಮಾರಾಟ ಮಾಡಿದರು.
ಪ್ರತಿ ಕ್ವಿಂಟಾಲ್‌ಗೆ ರು. 5 ರಿಂದ 7 ಸಾವಿರಗಳವರೆಗೆ ಬೆಲೆ ಹೆಚ್ಚಿದ್ದರಿಂದ ವ್ಯಾಪಾರಿಗಳಲ್ಲಿ, ರೈತರಲ್ಲಿ ಉತ್ಸಾಹ ಮೂಡಿತ್ತು. ಬನ್ನಿಗೋಳ, ಯರದಿಹಾಳ, ಆಮದಿಹಾಳ, ಜನತಾಪುರ ಸೇರಿದಂತೆ ಅನೇಕ ಹಳ್ಳಿಗಳಲ್ಲಿ ಬೆಳೆದ ಹುಣಿಸೆ ಹಣ್ಣು ಮತ್ತು ಕುಷ್ಟಗಿ ತಾಲೂಕಿನಿಂದಲೂ ಹುಣಿಸೆ ಹಣ್ಣು ಮಾರುಕಟ್ಟೆಗೆ ಬಂದಿದೆ ಎಂದು ವ್ಯಾಪಾರಿಗಳು ಹೇಳಿದರು.
ರು. 3 ರಿಂದ 4 ಸಾವಿರಕ್ಕೆ ಕ್ವಿಂಟಾಲ್ ಇದ್ದ ಬೆಲೆ ಏಕಾಏಕಿ 5 ರಿಂದ 7 ಸಾವಿರ ರುಪಾಯಿಗೆ ಹೆಚ್ಚಳವಾಗಿದೆ. ರೈತರ ಜಮೀನುಗಳಲ್ಲಿದ್ದ ಹುಣಿಸೆ ಗಿಡಗಳನ್ನು ಗುತ್ತಿಗೆ ಹಿಡಿದು ವ್ಯಾಪಾರ ಮಾಡುವವರಿಗೂ ಈ ಬಾರಿ ಹುಣಿಸೆ ಹುಳಿ ಬದಲಿಗೆ ಸಿಹಿಯನ್ನೇ ನೀಡಿದೆ ಎನ್ನುತ್ತಾರೆ ವ್ಯಾಪಾರಿಗಳು.