'ಯುವ ಪೀಳಿಗೆಗೆ ಬಸವಣ್ಣ ತತ್ವ ಅಗತ್ಯ'
ಸಿಂಧನೂರು: ಪ್ರಸ್ತುತ ದಿನಗಳಲ್ಲಿ ಯುವ ಪೀಳಿಗೆ ಕೆಟ್ಟ ಹವ್ಯಾಸಕ್ಕೆ ಮಾರುಹೋಗುತ್ತಿದ್ದಾರೆ. ಬಸವಾದಿ ಶರಣರ ವಿಚಾರ ಧಾರೆಗಳನ್ನು ಯುವಕರು ಅಳವಡಿಸಿಕೊಳ್ಳುವುದು ಅಗತ್ಯ. ಆ ಮೂಲಕ ಸಮಾಜ ಬದಲಾವಣೆಗೆ ಕಾರಣರಾಗಬೇಕಾಗಿದೆ ಎಂದು ಪಂಚಮಸಾಲಿ ಸಮಾಜದ ಜಯಮೃತ್ಯುಂಜಯ ಶ್ರೀ ಹೇಳಿದರು.
ನಗರದ ಆರ್ಜಿಎಂ ಶಾಲಾ ಮೈದಾನದಲ್ಲಿ ಬಸವಕೇಂದ್ರ, ಯುವ ಬಸವಕೇಂದ್ರ, ಮಹಿಳಾ ಬಸವಕೇಂದ್ರ, ಬಸವ ಚಾರೀಟೇಬಲ್ ಟ್ರಸ್ಟ್ ಇವರ ಸಂಯುಕ್ತ ಆಶ್ರಯದಲ್ಲಿ ಬಸವ ಜಯಂತಿ ಅಂಗವಾಗಿ ಹಮ್ಮಿಕೊಂಡಿದ್ದ ಶರಣರ ಅನುಭವ ಗೋಷ್ಠಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. 12ನೇ ಶತಮಾನದ ಬಸವಾದಿ ಶರಣರನ್ನು ನಾವು ದೇವರಂತೆ ಪೂಜಿಸುವುದಕ್ಕಿಂತ ಅವರು ನೀಡಿರುವ ವಚನ ಸಾಹಿತ್ಯದ ಮೂಲಕ ನೀಡಿರುವ ತತ್ವಾದರ್ಶಗಳನ್ನು ಜೀವನದಲ್ಲಿ ರೂಢಿಸಿಕೊಳ್ಳಬೇಕಿದೆ ಎಂದರು.
ಸಮಾಜಕ್ಕೆ ಅಪಾರ ಕೊಡುಗೆ: ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಪ್ರತಾಪಗೌಡ ಪಾಟೀಲ್ ಮಾತನಾಡಿ, ದಾರ್ಶನಿಕರಾದ ಬಸವಣ್ಣ, ಬುದ್ಧ, ಅಂಬೇಡ್ಕರ್ ಇತರರು ಸಮಾಜಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಇಂಥವರಿಗೆ ಜಾತಿಯ ಬಣ್ಣ ಹಚ್ಚದೇ ಪ್ರತಿಯೊಬ್ಬರು ಅವರ ಆದರ್ಶಗಳನ್ನು ಮೈಗೂಡಿಸಿಕೊಂಡು ಸಾಗಬೇಕಿದೆ ಎಂದರು.
ಮಹಾನ್ ಮಾನವತಾವಾದಿ: ಮಾಜಿ ಸಂಸದ ಕೆ. ವಿರುಪಾಕ್ಷಪ್ಪ ಮಾತನಾಡಿ, 12ನೇ ಶತಮಾನದಲ್ಲಿ ಇದ್ದ ಗುಲಾಮಗಿರಿ, ಶೋಷಣೆ, ಹಿಂದುಳಿದವರ ಮೇಲಿನ ದಬ್ಬಾಳಿಕೆಯನ್ನು ಬಸವಣ್ಣ ತಮ್ಮ ಕ್ರಾಂತಿಕಾರಿ ವಿಚಾರಧಾರೆಗಳ ಮೂಲಕ ತೊಡೆದು ಹಾಕುವಲ್ಲಿ ಶ್ರಮಿಸಿದ ಮಹಾನ್ ಮಾನವತಾವಾದಿ ಎಂದರು. ಬಿಜೆಪಿ ಮುಖಂಡ ರಾಜಶೇಖರ ಪಾಟೀಲ್, ವೀರಶೈವ ಸಮಾಜದ ಅಧ್ಯಕ್ಷ ಅಶೋಕಗೌಡ ಗದ್ರಟಗಿ, ಪ್ರವಚನದ ಸ್ವಾಗತ ಸಮಿತಿ ಅಧ್ಯಕ್ಷ ನಾಗಭೂಷಣ ನವಲಿ, ಶಿವನಗೌಡ ಗೊರೇಬಾಳ್, ಅಧ್ಯಕ್ಷ ಬಸವರಾಜ ಸಾಹುಕಾರ, ಬಸವಕೇಂದ್ರದ ಅಧ್ಯಕ್ಷ ಗುಂಡಪ್ಪ ಬಳಿಗೇರ, ಮಾಜಿ ಅಧ್ಯಕ್ಷ ಶ್ಯಾಮಣ್ಣ ನಾಯಕ, ಮಹಿಳಾ ಘಟಕಾ ಅಧ್ಯಕ್ಷೆ ಸುಮಂಗಲ ಶಾಂತಪ್ಪ, ಯುವ ಘಟಕ ಅಧ್ಯಕ್ಷ ಚಂದ್ರಶೇಖರ್ ಯರದಿಹಾಳ ಇದ್ದರು. ಪಿ. ವೀರಭದ್ರಪ್ಪ ಕುರುಕುಂದಿ ಪ್ರಸ್ತಾವಿಕ ಮಾತನಾಡಿದರು. ಡಾ. ಶಂಭನಗೌಡ ಕಾರ್ಯಕ್ರಮ ನಿರ್ವಹಿಸಿದರು.