ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಶಾಲೆಗೆ ಕರೆತರೋದೇ ಸವಾಲು

Rashmi Kasaragodu
Updated On : 29 Apr 2014, 12:38 pm

 ಶೇಷಮೂರ್ತಿ ಅವದಾನಿ
ಗುಲ್ಬರ್ಗ: ಶಾಲೆಗಳಿಂದ ಹೊರಗುಳಿದ ಮಕ್ಕಳ ಸಂಖ್ಯೆಯಲ್ಲೂ ಹೈದ್ರಾಬಾದ್ ಕರ್ನಾಟಕ ಭಾಗ ಮೊದಲ ಸ್ಥಾನದಲ್ಲಿದೆ.
ಸಾರ್ವಜನಿಕ ಶಿಕ್ಷಣ ಇಲಾಖೆಯು ಸರ್ವ ಶಿಕ್ಷಣ ಅಭಿಯಾನ ಅಡಿಯಲ್ಲಿ ಪ್ರತಿ ವರ್ಷ ಮಕ್ಕಳ ಸಮೀಕ್ಷೆ ನಡೆಸುತ್ತಲೇ ಇದೆ. ಆದರೆ, ವರ್ಷದಿಂದ ವರ್ಷಕ್ಕೆ ಶಾಲೆಯಿಂದ ಹೊರಗುಳಿಯುವ ಮಕ್ಕಳ ಸಂಖ್ಯೆ ಮಾತ್ರ ಹೆಚ್ಚುತ್ತಲೇ ಸಾಗಿದೆ. ಇದು ಶಿಕ್ಷಣ ಇಲಾಖೆಗೆ ದೊಡ್ಡ ತಲೆನೋವಾಗಿದ್ದರೆ, ಶೈಕ್ಷಣಿಕವಾಗಿ ಹಿಂದುಳಿದ ಈ ಪ್ರದೇಶದ ಶಿಕ್ಷಣ ಪ್ರೇಮಿಗಳ ಅಸಮಾಧಾನಕ್ಕೆ ಕಾರಣವಾಗಿದೆ. ಸರ್ವ ಶಿಕ್ಷಣ ಅಭಿಯಾನದಡಿ ಶಿಕ್ಷಣ ಇಲಾಖೆ ಇತ್ತೀಚೆಗೆ ರಾಜ್ಯಾದ್ಯಂತ ನಡೆಸಿದ ಮಕ್ಕಳ ಸಮೀಕ್ಷೆ ಪ್ರಕಾರ- ರಾಜ್ಯದಲ್ಲಿ ಒಟ್ಟು 1,70,525 ಮಕ್ಕಳು ಶಾಲೆಗಳಿಂದ ದೂರ ಉಳಿದಿದ್ದಾರೆ. ಅವರಲ್ಲಿ ಗುಲ್ಬರ್ಗ, ಬೀದರ್, ರಾಯಚೂರು, ಕೊಪ್ಪಳ, ಬಳ್ಳಾರಿ ಹಾಗೂ ಯಾದಗಿರಿ  ಒಳಗೊಂಡ ಹೈ-ಕ ಪ್ರದೇಶದ 62,222 ಮಕ್ಕಳು ಸೇರಿದ್ದಾರೆ!
ಇವರನ್ನು ಮುಖ್ಯವಾಹಿನಿಗೆ ತರುವುದಕ್ಕಾಗಿ ರಾಜ್ಯ- ಕೇಂದ್ರ ಸರ್ಕಾರ ಕೋಟಿ ಕೋಟಿ ಸುರಿದರೂ ನಿರೀಕ್ಷಿತ ಫಲ ದೊರೆಯುತ್ತಿಲ್ಲ. ಹೀಗಾಗಿ ಶಾಲೆಯಿಂದ ಮಕ್ಕಳು ದೂರ ಉಳಿಯುವುದನ್ನು ತಡೆಗಟ್ಟುವುದು ರಾಜ್ಯ ಸರ್ಕಾರದ ಪಾಲಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ.
ಹೈ.ಕ.ದಲ್ಲೇ ಹೆಚ್ಚು: 1ರಿಂದ 7ನೇ ತರಗತಿಯಲ್ಲಿ ದಾಖಲಾದ ಮಕ್ಕಳು ಹಾಗೂ ಶಾಲೆಯಿಂದ ದೂರುವುಳಿದ ಮಕ್ಕಳ ಸಮೀಕ್ಷೆಯಂತೆ- ಕೇವಲ 3 ತಾಲೂಕುಗಳನ್ನು ಹೊಂದಿರುವ ಯಾದಗಿರಿ ಜಿಲ್ಲೆಯಲ್ಲಿ ದಾಖಲಾದ 1.77 ಲಕ್ಷ ಮಕ್ಕಳ ಪೈಕಿ 11,197 ಮಕ್ಕಳು ಶಾಲೆಯಿಂದ ದೂರವಿದ್ದಾರೆ. ರಾಯಚೂರು ಜಿಲ್ಲೆಯಲ್ಲಿ 2.87 ಲಕ್ಷ ಮಕ್ಕಳ ಪೈಕಿ ಶಾಲೆಯಿಂದ ದೂರ ಉಳಿದಿದ್ದಾರೆ. ಗುಲ್ಬರ್ಗ ಜಿಲ್ಲೆಯಲ್ಲಿ 4.10 ಲಕ್ಷ ಮಕ್ಕಳಲ್ಲಿ 15,468 ಮಕ್ಕಳು ಅರ್ಧಕ್ಕೆ ಶಾಲೆ ಬಿಟ್ಟಿದ್ದಾರೆ. ಕೊಪ್ಪಳ ಜಿಲ್ಲೆಯಲ್ಲಿ ಪ್ರವೇಶ ಪಡೆದಿದ್ದ 1.96 ಲಕ್ಷ ಮಕ್ಕಳಲ್ಲಿ 7,358 ಮಕ್ಕಳು ಶಾಲೆ ಬಿಟ್ಟಿದ್ದಾರೆ. ಬಳ್ಳಾರಿ ಜಿಲ್ಲೆಯಲ್ಲಿ ಪ್ರವೇಶ ಪಡೆದಿದ್ದ 3.37 ಲಕ್ಷ ಮಕ್ಕಳಲ್ಲಿ 10,747 ಮಕ್ಕಳು ಶಾಲೆಯಿಂದ ದೂರ ಸರಿದಿದ್ದಾರೆ. ಹಾಗೆಯೇ ಬೀದರ್ ಜಿಲ್ಲೆಯಲ್ಲಿ ಪ್ರವೇಶ ಪಡೆದ 2.95 ಲಕ್ಷ ಮಕ್ಕಳಲ್ಲಿ 5,324 ಮಕ್ಕಳು ಶಾಲೆಯಿಂದ ಹೊರಗುಳಿದಿದ್ದಾರೆ. ಹೀಗಾಗಿ ಹೈ.ಕ.ದಲ್ಲಿ ಒಟ್ಟು 62,222 ಮಕ್ಕಳು ಶಿಕ್ಷಣ ಅರ್ಧಕ್ಕೆ ಮೊಟಕುಗೊಳಿಸಿದಂತಾಗಿದೆ.
ಕಳವಳಕಾರಿ ಸಂಗತಿ: ಈ ಭಾಗದ ಮಕ್ಕಳು ಶಾಲೆಯಿಂದ ಹೊರಗುಳಿಯಲು ಹಲವು ಕಾರಣಗಳಿವೆ. 5ನೇ ತರಗತಿಯಲ್ಲಿ ತೇರ್ಗಡೆಯಾದ ನಂತರ 6ನೇ ತರಗತಿಗೆ ಪ್ರವೇಶ ಪಡೆದಿರುವ ಬಗ್ಗೆ ಆಯಾ ಶಾಲೆಗಳ ಮುಖ್ಯೋಪಾಧ್ಯಾಯರು ಖಾತರಿಪಡಿಸಿಕೊಳ್ಳಬೇಕು. ಆದರೆ ಅಂತಹ ಯಾವುದೇ ಕೆಲಸಗಳು ನಡೆಯುತ್ತಿಲ್ಲ.   ಶಾಲೆಗಳಿಂದ ಹೊರಗುಳಿದ ಮಕ್ಕಳು ವಿದ್ಯಾಭ್ಯಾಸ ಮುಂದುವರಿಸಲು ಅನುಕೂಲವಾಗುವಂತೆ ಶಿಕ್ಷಣ ಇಲಾಖೆ ಮೂರು ತಿಂಗಳ ವಸತಿರಹಿತ ವಿಶೇಷ ತರಬೇತಿ, ವಲಸೆ ಮಕ್ಕಳಿಗಾಗಿ ಟೆಂಟ್ ಶಾಲೆ ಸೇರಿ ವಿವಿಧ ಕಾರ್ಯಕ್ರಮ  ನಡೆಸಲಾಗುತ್ತಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement