ಸಿಎಂ ಬಳಿಗೆ ಶೀಘ್ರ ರೈತ ಸಂಘ ನಿಯೋಗ
ಕ.ಪ್ರ. ವಾರ್ತೆ ರಾಯಚೂರು ಏ ಏ.28
ತುಂಗಭದ್ರಾ ಎಡದಂಡೆ ಆಧುನೀಕರಣ ಕೈಗೊಳ್ಳಲು ಹಾಗೂ ದಾಳಿಂಬೆ ಬೆಳೆಗಾರರ ಸಮಸ್ಯೆ ಪರಿಹಾರಕ್ಕೆ ಕೋರಿ ಮುಖ್ಯಮಂತ್ರಿಗಳ ಬಳಿ ಚುನಾವಣೆ ಮತಎಣಿಕೆ ನಂತರ ಶೀಘ್ರವೇ ರಾಜ್ಯ ರೈತ ಸಂಘದ ನಿಯೋಗ ತೆರಳಲಿದೆ ಎಂದು ಸಂಘದ ರಾಜ್ಯಾಧ್ಯಕ್ಷ ಚಾಮರಸ ಮಾಲಿಪಾಟೀಲ್ ಹೇಳಿದರು.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಲೋಕಸಭೆ ಚುನಾವಣೆಯ ನೀತಿ ಸಂಹಿತೆ ಹಿನ್ನೆಲೆಯಲ್ಲಿ ತುಂಗಭದ್ರಾ ಎಡದಂಡೆ ಕಾಲುವೆಯ ಆಧುನೀಕರಣ ಪ್ರಸಕ್ತ ವರ್ಷ ಆರಂಭಗೊಂಡಿಲ್ಲ. ಕೂಡಲೇ ಕಾಮಗಾರಿ ಆರಂಭಿಸುವಂತೆ ಒತ್ತಾಯಿಸುವುದಾಗಿ ತಿಳಿಸಿದರು.
ಅದೇ ರೀತಿ ರಾಜ್ಯದಲ್ಲಿ ದಾಳಿಂಬೆ ಬೆಳೆಗಾರರು ದುಂಡಾಣು ರೋಗದಿಂದ ಭಾರೀ ಪ್ರಮಾಣದಲ್ಲಿ ನಷ್ಟಕ್ಕೆ ಸಿಲುಕಿದ್ದು, ಅಂಥ ರೈತರ ಹಿತಕಾಯುವ ಕಾರ್ಯವನ್ನು ಸರ್ಕಾರ ಮಾಡಬೇಕು. ಈ ನಿಟ್ಟಿನಲ್ಲಿ ಸರ್ಕಾರವು ದಾಳಿಂಬೆ ಬೆಳೆಗಾರರ ಎಲ್ಲ ಸಾಲ ಮನ್ನಾ ಮಾಡಬೇಕು. ಹೊಸದಾಗಿ ಕೃಷಿ ಕಾರ್ಯ ಕೈಗೊಳ್ಳಲು ಅಗತ್ಯ ಆರ್ಥಿಕ ನೆರವು ನೀಡಬೇಕೆಂದು ಸಿಎಂ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಲಾಗುತ್ತದೆ ಎಂದು ತಿಳಿಸಿದರು.
ನಕಲಿ ಬಿತ್ತನೆ ಬೀಜ: ರಾಜ್ಯದಲ್ಲಿ ನಕಲಿ ಬಿತ್ತನೆ ಬೀಜ ಮಾರಾಟ ಜಾಲ ಸಕ್ರಿಯವಾಗಿದ್ದು ಪೊಲೀಸ್ ಇಲಾಖೆ ಸಮರ್ಪಕ ಕಾರ್ಯನಿರ್ವಹಿಸಿಲ್ಲ. ಕಳೆದ ಬಾರಿ ನಗರದಲ್ಲಿ ನಕಲಿ ಹತ್ತಿ ಬಿತ್ತನೆ ಬೀಜ ತಯಾರಿಕೆ ಘಟಕದ ಮೇಲೆ ದಾಳಿ ಮಾಡಿದ ವೇಳೆ ಪೊಲೀಸರು ಕೇವಲ 420 ಕಾಯಿದೆ ಅಡಿ ಕೇಸ್ ದಾಖಲಿಸಿದ್ದಾರೆಂದು ಆರೋಪಿಸಿದರು.
ರೈತರಿಗೆ ನಷ್ಟವುಂಟು ಮಾಡುವ ಆರೋಪಿಗಳನ್ನು ಕನಿಷ್ಠ ಗೂಂಡಾ ಕಾಯಿದೆ ವ್ಯಾಪ್ತಿಗೆ ಸೇರಿಸಿ ಗಡಿಪಾರು ಮಾಡಬೇಕೆಂದು ಆಗ್ರಹಿಸಿದ ಅವರು, ಜಿಲ್ಲೆಯಲ್ಲಿ ಸದ್ಯ ರೈತರು ಮುಂಗಾರು ಹಂಗಾಮಿಗೆ ಸಿದ್ಧತೆಯಲ್ಲಿದ್ದು ಈ ವೇಳೆಯೇ ಮಾನವಿ ತಾಲೂಕಿನ ಜೀನೂರು ಕ್ಯಾಂಪಿನಲ್ಲಿ 1100 ಪ್ಯಾಕೆಟ್ಗಳಲ್ಲಿ ನಕಲಿ ಹತ್ತಿ ಬೀಜ ಮಾರಾಟ ದಂಧೆ ಪತ್ತೆಯಾಗಿದೆ. ಇಂಥ ಪ್ರಕರಣಗಳು ಮೇಲಿಂದ ಮೇಲೆ ನಡೆಯುತ್ತಿದ್ದರೂ ರಾಜ್ಯ ಸರ್ಕಾರ ಬಿಗಿ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಟೀಕಿಸಿದರು.
ಮನವಿ: ರಾಜ್ಯದ ರೈತರು ಪ್ರತಿ ಬಾರಿ ಬಿತ್ತನೆ ಬೀಜ ಖರೀದಿಸಿದಾಗ ಅದಕ್ಕೆ ಪ್ರತಿಯಾಗಿ ರಸೀದಿ ಪಡೆದು ಬೆಳೆ ಕೈಗೆ ಬರುವವರೆಗೆ ಕಾಯ್ದಿರಿಸಿಕೊಳ್ಳಲು ಕಾಳಜಿ ಪ್ರದರ್ಶಿಸಬೇಕು. ಅಷ್ಟೇ ಅಲ್ಲ ನಕಲಿ ಬಿತ್ತನೆ ಬೀಜಗಳ ಮಾರಾಟ ಜಾಲದ ಬಗ್ಗೆ ಪೊಲೀಸರಿಗೆ ಮಾಹಿತಿ ಒದಗಿಸುವ ಕಾರ್ಯ ಮಾಡಬೇಕು ಎಂದರು. ಕೃಷಿ ಇಲಾಖೆ ಸಹ ರೈತರಲ್ಲಿ ನಕಲಿ ಬಿತ್ತನೆ ಬೀಜಗಳ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯ ಮಾಡಬೇಕು. ಈ ನಿಟ್ಟಿನಲ್ಲಿ ಕರಪತ್ರಗಳನ್ನು ಮುದ್ರಿಸಿ ರೈತರಿಗೆ ನಕಲಿ ಬಿತ್ತನೆ ಬೀಜಗಳಿಂದಾಗುತ್ತಿರುವ ಹಾನಿ ಬಗ್ಗೆ ಜಾಗೃತಿ ಮೂಡಿಸಬೇಕೆಂದು ಆಗ್ರಹಿಸಿದರು.
ಸರ್ಕಾರ ಕಾಳಜಿ ಪ್ರದರ್ಶಿಸಲಿ: ನಕಲಿ ಬಿತ್ತನೆ ಬೀಜ ಮಾರಾಟ ಜಾಲ ಕಾರ್ಯನಿರ್ವಹಿಸುತ್ತಿದ್ದು, ರಾಜ್ಯ ಸರ್ಕಾರ ಅಕ್ರಮದ ಮೂಲ ಪತ್ತೆಗೆ ಕೂಡಲೇ ಕ್ರಮ ಕೈಗೊಳ್ಳಬೇಕು. ಪ್ರಮುಖ ಆರೋಪಿಗಳಿಗೆ ಶಿಕ್ಷೆ ಕೊಡಿಸುವ ಕಾರ್ಯ ಸರ್ಕಾರ ಮಾಡುವತ್ತ ಕಾಳಜಿ ಪ್ರದರ್ಶಿಸಬೇಕು. ಈ ಹಿಂದೆ ಹಾವೇರಿ ಜಿಲ್ಲೆಯಲ್ಲಿ ಮಹಿಕೋ ಕಂಪನಿಯ ಹತ್ತಿ ಬಿತ್ತನೆ ಬೀಜ ಬಳಸಿ ರೈತರು ಹಾನಿ ಅನುಭವಿಸಿದ ವೇಳೆ ಸರ್ಕಾರ ನಿರ್ಲಕ್ಷ್ಯ ತೋರಿದ್ದರಿಂದಲೇ ರೈತರು ಭಾರೀ ಹಾನಿ ಅನುಭವಿಸಿದ್ದಾರೆ. ಸರ್ಕಾರ ರೈತರಿಗೆ ಆ ಸಂದರ್ಭದಲ್ಲಿ 75 ಸಾವಿರ ಹೆಕ್ಟೇರ್ ಪ್ರದೇಶ ಹಾನಿಯಾಗಿದ್ದರೆ, ಪ್ರತಿ ಹೆಕ್ಟೇರ್ಗೆ 6 ಸಾವಿರ ಮಾತ್ರ ನೀಡಿ ಕೈತೊಳೆದುಕೊಂಡಿತು. ಅಂಥ ಪರಿಸ್ಥಿತಿ ಮರುಕಳಿಸದಂತೆ ಎಚ್ಚರಿಕೆ ವಹಿಸುವುದು ಸರ್ಕಾರದ ಜವಾಬ್ದಾರಿ ಎಂದರು.
ಮೃದು ಧೋರಣೆ ಸರಿಯಲ್ಲ: ರಾಜ್ಯ ಸರ್ಕಾರ ನಕಲಿ ಬಿತ್ತನೆ ಬೀಜ ಮಾರಾಟ ದಂಧೆಗೆ ಸಂಬಂಧಿಸಿ ಅನುಸರಿಸುತ್ತಿರುವ ಮೃದು ಧೋರಣೆಯಿಂದಾಗಿಯೇ ಅಕ್ರಮದಲ್ಲಿ ಪಾಲ್ಗೊಳ್ಳುವವರಿಗೆ ಕಾನೂನಿನ ಭಯವಿಲ್ಲವಾಗಿದೆ. ಈ ಅಕ್ರಮದಲ್ಲಿ ಪ್ರಭಾವಿ ವ್ಯಕ್ತಿಗಳ ಕೈವಾಡವಿರುವ ಸಾಧ್ಯತೆಯಿದೆ ಎಂದು ಆರೋಪಿಸಿದರು.
ಸಂಘದ ಪ್ರಮುಖರಾದ ಲಕ್ಷ್ಮಣಗೌಡ ಕಡಗಂದೊಡ್ಡಿ, ಕೆ.ವೀರೇಶಗೌಡ, ಚಂದೂಸಾಬ್, ಬೂದಯ್ಯಸ್ವಾಮಿ, ಯಂಕಪ್ಪ ಕಾರಬಾರಿ, ಭೀಮೇಶ್ವರರಾವ್, ದೊಡ್ಡಬಸನಗೌಡ ಬಲ್ಲಟಗಿ, ಮಲ್ಲಣ್ಣ ದಿನ್ನಿ ಮತ್ತಿತರರಿದ್ದರು.