ಹಿಜರಾಶಕೆ 1315ರ ತ್ರಿಭಾಷಾ ಶಿಲಾ ಶಾಸನ ಪತ್ತೆ
ಶಹಾಪುರ: ಪಟ್ಟಣದ ಗಂಗಾ ನಗರದ ಬಳಿಯ ಆಸರಾ ಮೊಹಲ್ಲಾದ ಬಾವಿಯ ಖುರಾನ ಬುಡ್ಡಿ ಮುಕ್ತರ ಮನೆಯ ಗೊಡೆಯ ಹಿಂಬಂದಿಯಲ್ಲಿ ಹಿಜರಾಶಕೆ 1315ರ ತ್ರಿಭಾಷಾ ಶಾಸನವನ್ನು ಧರ್ಣಣ್ಣ ಬಡಿಗೇರ ಪತ್ತೆಮಾಡಿದ್ದಾರೆ.
ಡಿ.ಎನ್. ಅಕ್ಕಿಯ ಮಾರ್ಗದರ್ಶನದಲ್ಲಿ ಸುರಪುರ ಬಿಇಡಿ ಕಾಲೇಜಿನ ಇತಿಹಾಸ ಉಪನ್ಯಾಸಕ ಧರ್ಣಣ್ಣ ಕೆ.ಬಡಿಗೇರ ಮತ್ತು ಆರಕ್ಷಕ ರಾಜಗೋಪಾಲ ವಿಭೂತೆ, ಗುರುಲಿಂಗಪ್ಪ ಪಡಶೆಟ್ಟಿ, ಭೀಮಣ್ಣ ಸುರಪುರಕರ್, ಭೀಮಾಶಂಕರ ಬೆನಕನಹಳ್ಳಿ, ವೆಂಕಟೇಶ ಅನವಾರ ಸೇರಿ ಕ್ಷೇತ್ರಾಧ್ಯಯನಕ್ಕೆಂದು ಪುರಾತನ ಕಾಲದ ಬಾವಿಗಳನ್ನು ನೋಡಲು ತೆರಳಿದಾಗ ಈ ಶಿಲಾ ಶಾಸನ ಪತ್ತೆಯಾಗಿದೆ.
ಅರಬ್ಬಿ, ಪಾರ್ಸಿ, ಮತ್ತು ಉರ್ದು ಭಾಷೆ:ಈ ಶಾಸನ ಒಂದೂವರೆ ಅಡಿ ಎತ್ತರವಿದ್ದು, ಒಂದೂವರೆ ಅಡಿ ಅಗಲ ಮತ್ತು ಆರು ಇಂಚು ದಪ್ಪಗಿದೆ. ಕಂದು ಬಣ್ಣದ ಬೆಣಚು ಕಲ್ಲಿನ ಮೇಲೆ ಐದು ಸಾಲಿನ ಶಾಸನವಿದ್ದು, ಅರಬ್ಬಿ, ಪಾರ್ಸಿ, ಮತ್ತು ಉರ್ದು ಈ ಮೂರು ಭಾಷೆಯಲ್ಲಿದೆ.
ಸಾರ್ವಜನಿಕರ ಹಿತಕ್ಕಾಗಿ ತೋಡಿಸಿದ ಬಾವಿ: ಮೊದಲನೆಯ ಸಾಲಿನಲ್ಲಿ ಇಸ್ಲಾಂನ ಪವಿತ್ರ ಸೋತ್ರವಾದ ಬಿಸ್ಮಿಲ್ಲಾ ಇರ್ ರಹಿಮಾನ ನಿರ್ರಹಿಮ್ ಎಂದು ಬರೆದಿದೆ. ಎರಡು ಮತ್ತು ಮೂರನೆ ಸಾಲು ಪಾರಸಿ ಭಾಷೆಯಿದೆ. ನಾಲ್ಕು ಮತ್ತು ಐದನೆ ಸಾಲಿನಲ್ಲಿ ಶೇಖ ಅಬ್ದುಲ್ಲಾ ಹಾಗಿ 1315ರ ಹಿಜಿರಾಶಕೆ ಎಂದು ಉಲ್ಲೇಖಿಸಲಾಗಿದೆ. ಇದನ್ನು ಅಬ್ದುಲ್ ವಾಹಿದ್ ಆಸರ ಮೊಹಲ್ಲ ಓದಿದ್ದಾರೆ. ಇದು ಸಾರ್ವಜನಿಕರ ಹಿತಕ್ಕಾಗಿ, ತೋಡಿಸಿದ ಬಾವಿ ಎಂದು ಉಲ್ಲೇಖವಿರಬಹುದು ಮತ್ತು ದಾನ ಶಾಸನವಾಗಿರಬಹುದಾಗಿದೆ. ನಿಜಾಮರ ಹಾಗೂ ಸುರಪುರದ ಅರಸರ ಕಾಲದಲ್ಲಿ ಸಾರ್ವಜನಿಕರ ಹಿತಕ್ಕಾಗಿ ಹಲವಾರು ಬಾವಿ ಹಾಗು ಕಲ್ಯಾಣಿಗಳು ಕೆರೆಗಳನ್ನು ತೋಡಿಸಲಾಗಿದೆ.
ಪುರಸಭೆ ನಿರ್ಲಕ್ಷ್ಯ:ಪ್ರಸ್ತುತ 10ರಿಂದ 15 ಬಾವಿಗಳು ಪುರಸಭೆಯವರ ನಿರ್ಲಕ್ಷ್ಯದಿಂದಾಗಿ ಕಸ ಹಾಕಿ ಮುಚ್ಚುವ ಸ್ಥಿತಿಯಲ್ಲಿವೆ. ಸದಾ ಬಿಸಿಲಿನ ಬೇಗೆಯಲ್ಲಿರುವ ಜನರಿಗೆ ನೀರಿನ ಅನುಕೂಲಕ್ಕಾಗಿ ಪುರಸಭೆ ಹಾಗು ಸರ್ಕಾರದವರು ಶಹಾಪುರ ಪಟ್ಟಣ ಪ್ರದೇಶದಲ್ಲಿರುವ ಭಾವಿಗಳ ಹೂಳೆತ್ತಿದರೆ ನೀರಿನ ಬವಣೆ ಹೋಗಲಾಡಿಸುವುದರ ಜತೆಗೆ ಸಂಶೋಧಕರು ಮತ್ತು ಇತಿಹಾಸ ಆರಾಧಕರಿಗೆ ಅನುಕೂಲವಾಗಿ ಇತಿಹಾಸದ ಮೇಲೆ ಬೆಳಕು ಚೆಲ್ಲಬಹುದಾಗಿದೆ ಎಂದು ಡಿ.ಕೆ ಬಡಿಗೇರ ಅಭಿಪ್ರಾಯ ಪಟ್ಟಿದ್ದಾರೆ.