ಗಡಿಪಾರಿಗೆ ದಸಂಸ ಒತ್ತಾಯ
ಲಿಂಗಸ್ಗೂರು: ದಲಿತ ಕೇರಿಯಲ್ಲಿ ಹನಿಮೂನ್ ಮತ್ತು ಪಿಕ್‌ನಿಕ್ ಅನುಭವ ಪಡೆಯಲು ರಾಹುಲ್‌ಗಾಂಧಿ ದಲಿತರ ನಿವಾಸಗಳಿಗೆ ಭೇಟಿ ನೀಡುತ್ತಿದ್ದಾರೆಂಬ ಬಾಬಾ ರಾಮದೇವರ ಹೇಳಿಕೆಯನ್ನು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಖಂಡಿಸಿದ್ದು, ಬಾಬಾರನ್ನು ದೇಶದಿಂದ ಗಡಿಪಾರು ಮಾಡಬೇಕೆಂದು ಒತ್ತಾಯಿಸಿ ಸಹಾಯಕ ಆಯುಕ್ತರಿಗೆ ಮಂಗಳವಾರ ಮನವಿ ಸಲ್ಲಿಸಲಾಯಿತು.
ಬಾಬಾ ರಾಮದೇವ ಮೂಲಕ ಬಿಜೆಪಿ ಮತ್ತು ಸಂಘ ಪರಿವಾರ ತನ್ನ ಅಂತರಾಳದ ಮಾತುಗಳನ್ನು ಹೇಳಿಸುತ್ತಿದ್ದು, ಹಿಂದೂ ವರ್ಣಾಶ್ರಮ ಧರ್ಮದಲ್ಲಿನ ಅಸಮಾನತೆ, ಜಾತೀಯತೆ ಕರಾಳ ರೂಪ ಮೋದಿ ಅಲೆಯ ಮೂಲಕ ಜಾರಿಗೆ ತರಲು ಹವಣಿಸುತ್ತಿದೆ. ಇದನ್ನು ದೇಶದ ಜಾತ್ಯತೀತ ವ್ಯವಸ್ಥೆಯಲ್ಲಿ ನಂಬಿಕೆ ಇರುವ ಎಲ್ಲರೂ ತಡೆಯಬೇಕು. ದಲಿತ ಸಮುದಾಯವನ್ನು ನಿಂದಿಸಿ ಸ್ವಾಭಿಮಾನಕ್ಕೆ ಧಕ್ಕೆಯುಂಟು ಮಾಡಿದ ಬಾಬಾರನ್ನು ಬಂಧಿಸಿ ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ದಲಿತರಿಗೆ ಉಳಿಗಾಲವಿಲ್ಲ. ಕೂಡಲೇ ಬಾಬಾ ರಾಮದೇವ ಅವರ ಯೋಗಾಶ್ರವುಗಳನ್ನು ಬಂದ್ ಮಾಡಿ ಆಶ್ರಮದ ಅಕ್ರಮ ಸಂಪತ್ತು ವಶಪಡಿಸಿಕೊಳ್ಳಬೇಕೆಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ. ದಸಂಸ ಜಿಲ್ಲಾ ಸಂಚಾಲಕ ಪ್ರಭುಲಿಂಗ ಮೇಗಳಮನಿ, ಮುಖಂಡರಾದ ಹರೀಶ ರಾಠೋಡ್, ಯಂಕಪ್ಪ ಚಿತ್ತಾಪುರ, ನಾಗರಾಜ ತಿಪ್ಪಣ್ಣ, ನಾಗರಾಜ ಹಾಲಬಾವಿ, ಚನ್ನಬಸವ ಕುಣಿಕಲ್ಲೂರ, ಬಸವರಾಜ ಈಚನಾಳ, ಮಾಳಪ್ಪ ಗುಡಿಜಾವೂರ, ಸೋಮಣ್ಣ ಪಾಚಾಳ, ಹುಲಗಪ್ಪ ಈಚನಾಳ, ಪರಸಪ್ಪ ಗುಡಿಜಾವೂರ ಇದ್ದರು.