ಮೇ 1ರಂದು ರಸ್ತೆ ತಡೆ
ಕ.ಪ್ರ. ವಾರ್ತೆ ರಾಯಚೂರು ಏ.29
ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಕಳೆದ ಕೆಲ ದಿನಗಳಿಂದ ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಿರುವ ಕೃಷಿ ವಿವಿ ಹಂಗಾಮಿ ನೌಕರರು ಆಡಳಿತ ತಮ್ಮ ಬೇಡಿಕೆಗಳತ್ತ ನಿರ್ಲಕ್ಷ್ಯ ತೋರಿದೆ ಎಂದು ಆರೋಪಿಸಿದ್ದು, ಬೇಡಿಕೆ ಏ.30ರೊಳಗೆ ಈಡೇರಿಸದಿದ್ದಲ್ಲಿ ಮೇ 1ರಂದು ಜಿಲ್ಲಾದ್ಯಂತ ರಸ್ತೆ ಸಂಚಾರಕ್ಕೆ ತಡೆಯೊಡ್ಡುವ ಮೂಲಕ ಸಂಘರ್ಷ ದಿನಾಚರಿಸುವುದಾಗಿ ಎಚ್ಚರಿಸಿದೆ.
ನಗರದಲ್ಲಿ ಮಂಗಳವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಕೃಷಿ ವಿವಿ ಹಂಗಾಮಿ ನೌಕರರ ಸಂಘದ ಗೌರವಾಧ್ಯಕ್ಷ ಆರ್. ಮಾನಸಯ್ಯ ಈ ವಿಷಯ ತಿಳಿಸಿ, ಹಂಗಾಮಿ ನೌಕರರು ನಡೆಸುತ್ತಿರುವ ಧರಣಿ 7ನೇ ದಿನ ಪೂರೈಸಿದೆ. ಜಿಲ್ಲಾಧಿಕಾರಿ ಎಸ್.ಎನ್. ನಾಗರಾಜು ಅಧ್ಯಕ್ಷತೆಯಲ್ಲಿ ಕಾರ್ಮಿಕ ಇಲಾಖೆ ಮತ್ತು ಕೃಷಿ ವಿವಿ ಅಧಿಕಾರಿಗಳು ಹಾಗೂ ಸಂಘದ ಪದಾಧಿಕಾರಿಗಳ ಮೊದಲ ಸುತ್ತಿನ ಮಾತುಕತೆ ನಡೆದರೂ ಯಾವುದೇ ನಿರ್ಧಾರಕ್ಕೆ ಬಂದಿಲ್ಲ ಎಂದು ತಿಳಿಸಿದರು.
ಸಭೆಯಲ್ಲಿ ಕಾರ್ಮಿಕ ಇಲಾಖೆ ಅಧಿಕಾರಿ ಆರತಿ, ಕೃಷಿ ವಿವಿಯ ರಿಜಿಸ್ಟ್ರಾರ್ ಜಿನಾಗೌಡರ್, ಶಂಕರಗೌಡ, ವಾಸುದೇವ್ ಹಾಗೂ ಸಂಘದ ಪದಾಧಿಕಾರಿಗಳು ಸಭೆಯಲ್ಲಿದ್ದರು. ಆದರೆ ಅಧಿಕಾರಿಗಳು ಹಂಗಾಮಿ ನೌಕರರ ಹಿಂದಿನ ಸೇವೆ ಪರಿಗಣಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಪ್ರಸ್ತುತ ನೀಡಬಹುದಾದ ಸೌಲಭ್ಯಗಳ ಕುರಿತು ಮಾತ್ರ ಸಭೆಯಲ್ಲಿ ಚರ್ಚಿಸಲು ಮುಂದಾಗಿದ್ದು ಸಂಘಕ್ಕೆ ಸಮ್ಮತಿಯಿಲ್ಲ ಎಂದು ತಿಳಿಸಿದರು.
ಕೃಷಿ ವಿವಿ ಕಾರ್ಮಿಕ ಕಾನೂನುಗಳನ್ನು ಜಾರಿಗೊಳಿಸಿಲ್ಲ. ಸೇವಾ ಹಿರಿತನ ಹಾಗೂ ಹೊರಗುತ್ತಿಗೆ ಪದ್ಧತಿಯನ್ನು ರದ್ದುಗೊಳಿಸಬೇಕು ಎನ್ನುವ ಸಂಘದ ಬೇಡಿಕೆಯನ್ನು ಬಲವಾಗಿ ಸಮರ್ಥಿಸಿಕೊಂಡಿದೆ. ಮತ್ತೊಂದು ಸುತ್ತಿನ ಸಭೆ ನಡೆಯುವ ಸಾಧ್ಯತೆಯಿದ್ದು, ಏ.30ರೊಳಗೆ ಸಂಘದ ಬೇಡಿಕೆಗಳಿಗೆ ಕೃಷಿ ವಿವಿ ಅಧಿಕಾರಿಗಳಿಂದ ಸಕಾರಾತ್ಮಕ ಪ್ರತಿಕ್ರಿಯೆ ದೊರೆಯದಿದ್ದಲ್ಲಿ ಹೋರಾಟ ಚುರುಕುಗೊಳಿಸಲಾಗುತ್ತದೆ ಎಂದು ಎಚ್ಚರಿಸಿದರು.
ಹೋರಾಟದ ಮುಂದಿನ ಭಾಗವಾಗಿ ಜಿಲ್ಲಾದ್ಯಂತ ಎಲ್ಲಾ ತಾಲೂಕುಗಳಲ್ಲಿ ರಸ್ತೆ ಸಂಚಾರಕ್ಕೆ ತಡೆಯೊಡ್ಡುವ ಮೂಲಕ ಕಾರ್ಮಿಕರ ದಿನಾಚರಣೆ ಆಚರಿಸಲು ನಿರ್ಧರಿಸಲಾಗಿದೆ. ಸಂಘದ ಹೋರಾಟಕ್ಕೆ ಈಗಾಗಲೇ ನೀರಾವರಿ ಇಲಾಖೆ ಕಾರ್ಮಿಕರು, ಕಟ್ಟಡ ಕಾರ್ಮಿಕರು, ಗಣಿ ಕಾರ್ಮಿಕರು, ಹಮಾಲಿ ಕಾರ್ಮಿಕರು, ಆಟೋ ಚಾಲಕರು ಸೇರಿ ನಗರದ ವಿವಿಧ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ ಎಂದು ಹೇಳಿದರು.
ಈ ಎಲ್ಲ ಸಂಘಟನೆಗಳೂ ಮೇ 1ರಂದು ನಡೆಯಲಿರುವ ಹೋರಾಟದಲ್ಲಿ ಪಾಲ್ಗೊಳ್ಳಲಿವೆ. ರಸ್ತೆ ಸಂಚಾರಕ್ಕೆ ತಡೆಯೊಡ್ಡಲಿವೆ ಎಂದು ತಿಳಿಸಿದ ಅವರು ಕೃಷಿ ವಿವಿಯ ಕಾರ್ಮಿಕ ವಿರೋಧಿ ನೀತಿಯನ್ನು ಖಂಡಿಸಿದರು.
ಟಿಯುಸಿಐ ಸಂಘಟನೆ ರಾಜ್ಯಾಧ್ಯಕ್ಷ ಡಿ.ಎಚ್. ಪೂಜಾರ್, ಸಿಪಿಎಂಎಲ್ ರಾಜ್ಯ ಕಾರ್ಯದರ್ಶಿ ಚಿನ್ನಪ್ಪ ಕೊಟ್ರಕಿ, ಕರ್ನಾಟಕ ರೈತ ಸಂಘದ ಜಿಲ್ಲಾಧ್ಯಕ್ಷ ನಾಗಲಿಂಗಸ್ವಾಮಿ, ಕೃಷಿ ವಿವಿ ಹಂಗಾಮಿ ನೌಕರರ ಸಂಘದ ಅಧ್ಯಕ್ಷ ಬಸವರಾಜ ಯಾದವ್, ಮುಖಂಡರಾದ ಭೀಮಪ್ಪ ದಾದಸ್, ರವಿ ದಾದಸ್, ಪ್ರಭುರಾಯ ಸೇರಿ ಅನೇಕರಿದ್ದರು.