ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಶಿವಸೇನೆ, ಎಂಇಎಸ್ ಪುಂಡಾಟಿಕೆ; ಆಕ್ರೋಶ

Mainashree
Updated On : 3 Aug 2014, 10:38 am

ಕ.ಪ್ರ. ವಾರ್ತೆ ್ಣ ರಾಯಚೂರು ್ಣ ಆ.2
ಬೆಳಗಾವಿಯಲ್ಲಿ ಶಿವಸೇನೆ ಹಾಗೂ ಎಂಇಎಸ್ ಕಾರ್ಯಕರ್ತರು ಪುಂಡಾಟಿಕೆ ನಡೆಸಿ ಕನ್ನಡದ ಧ್ವಜ ಮತ್ತು ಕನ್ನಡಾಂಬೆ ಪ್ರತಿಕೃತಿ ದಹಿಸಿದ ಘಟನೆ ಖಂಡಿಸಿ ಹಾಗೂ ಕಾರ್ಯಕರ್ತರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ನಗರದಲ್ಲಿ ಶನಿವಾರ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಯುವ ಸೇನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ಹೋರಾಟಗಾರರು ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿ, ಕೋಮುಗಲಭೆ ಹಾಗೂ ಶಾಂತಿಭಂಗ ಉಂಟುಮಾಡುತ್ತಿರುವ ಎಂಇಎಸ್ ಹಾಗೂ ಶಿವಸೇನೆ ಕಾರ್ಯಕರ್ತರ ಗೂಂಡಾ ವರ್ತನೆಗೆ ಕಡಿವಾಣ ಹಾಕುವತ್ತ ಸರ್ಕಾರ ಕೂಡಲೇ ಅವರ ವಿರುದ್ಧ ಪ್ರಕರಣ ದಾಖಲಿಸುವಂತೆ ಆಗ್ರಹಿಸಿದರು.
ಕನ್ನಡಿಗರಿಗೆ ಅಪಮಾನ: ಬೆಳಗಾವಿ ಜಿಲ್ಲೆಯ ಯಳ್ಳೂರು ಮಹಾರಾಷ್ಟ್ರ ರಾಜ್ಯಕ್ಕೆ ಸೇರಿದೆ ಎಂಬ ರೀತಿಯ ನಾಮಫಲಕ ಪ್ರದರ್ಶಿಸಿದ್ದ ಎಂಇಎಸ್ ಮತ್ತು ಶಿವಸೇನೆ ಕಾರ್ಯಕರ್ತರು ನಂತರ ಅದನ್ನು ಕೋರ್ಟ್ ಸೂಚನೆ ಹಿನ್ನೆಲೆ ತೆರವುಗೊಳಿಸಿದ್ದಕ್ಕೆ ಪುಂಡಾಟಿಕೆಗೆ ಮುಂದಾಗಿರುವುದು ಸರಿಯಲ್ಲ. ಎರಡೂ ಸಂಘಟನೆಗಳ ಕಾರ್ಯಕರ್ತರು ಗೂಂಡಾಗಳ ರೀತಿಯಲ್ಲಿ ವರ್ತಿಸುತ್ತಿದ್ದು, ಕರ್ನಾಟಕದಲ್ಲಿಯೇ ಇದ್ದು ಕನ್ನಡ ಧ್ವಜ ಹಾಗೂ ಕನ್ನಡಾಂಬೆಯ ಶವಸಂಸ್ಕಾರ ಮಾಡಿ, ಕೋಮುಗಲಭೆ ಹಾಗೂ ಶಾಂತಿಭಂಗ ಉಂಟು ಮಾಡುವ ಮೂಲಕ ಕನ್ನಡಿಗರಿಗೆ ಅಪಮಾನ ಮಾಡಿದ್ದಾರೆಂದು ಟೀಕಿಸಿದರು. ಕನ್ನಡಿಗರ ಮೇಲೆ ಎರಡೂ ಸಂಘಟನೆಗಳ ಕಾರ್ಯಕರ್ತರು ಗೂಂಡಾಗಳಂತೆ ದಾಳಿ ಮಾಡುತ್ತಿರುವುದು ಸರ್ಕಾರದ ಹೇಡಿತನ ಪ್ರದರ್ಶಿಸಿದೆ.
ಸಿಎಂ ಸಿದ್ದರಾಮಯ್ಯ ಅವರು ಇಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ಕಾನೂನು ಕ್ರಮ ಕೈಗೊಳ್ಳಬೇಕಾದ ಸರ್ಕಾರ ಮೌನಕ್ಕೆ ಶರಣಾಗಿದೆ ಎಂದು ದೂರಿದರು.
ಅನಗತ್ಯ ಗೊಂದಲ: ಈ ಹಿಂದೆಯೂ ಈ ಎರಡೂ ಸಂಘಟನೆಗಳು ಕನ್ನಡಿಗರು ಮತ್ತು ಕರ್ನಾಟಕದ ಗಡಿ ವಿಚಾರಕ್ಕೆ ಸಂಬಂಧಿಸಿ ಅನಗತ್ಯ ಗೊಂದಲ ಎಬ್ಬಿಸಿದ್ದು, ಅಂಥ ಸಂದರ್ಭದಲ್ಲಿ ಕನ್ನಡಪರ ಸಂಘಟನೆಗಳು ನಿರಂತರ ಹೋರಾಡುತ್ತಲೇ ಬಂದಿವೆ. ಆದರೆ ಕರ್ನಾಟಕ ಸರ್ಕಾರ ಮಾತ್ರ ಕಠಿಣ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಟೀಕಿಸಿದರು.
ಕೂಡಲೇ ಸರ್ಕಾರ ಎಚ್ಚೆತ್ತುಕೊಂಡು ಮಹಾರಾಷ್ಟ್ರ ಸರ್ಕಾರ ಜತೆಗೆ ಚರ್ಚಿಸಿ ಬೆಳಗಾವಿಯಲ್ಲಿ ಶಾಂತಿ ಕಾಪಾಡಲು ಮುಂದಾಗಬೇಕು. ಶಾಂತಿಗೆ ಭಂಗ ತರುತ್ತಿರುವ ಎಂಇಎಸ್ ಹಾಗೂ ಶಿವಸೇನೆ ಕಾರ್ಯಕರ್ತರನ್ನು ಕೂಡಲೇ ಬಂಧಿಸಿ ಕಠಿಣ ಕಾನೂನು ಶಿಕ್ಷೆಗೊಳಪಡಿಸುವಂತೆ ಹೋರಾಟಗಾರರು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷ ನಂದಾ ಕಟ್ಟಿಮನಿ, ಮುಖಂಡರಾದ ಚಂದ್ರಶೇಖರ, ತಿಪ್ಪೇಶ, ರಾಘು, ಅನಿಲಕುಮಾರ, ಸೋಮಕುಮಾರ, ಕಾಶೀನಾಥ, ಸಚಿನ್, ವೆಂಕಿ ಸೇರಿ ಅನೇಕರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement