ಚುನಾವಣೆ: ತೊಂದರೆ ಪರಿಶೀಲನೆಗೆ ಮನವಿ
ಲಿಂಗಸ್ಗೂರು: ಬರುವ ಲೋಕಸಭಾ ಚುನಾವಣೆಗೆ ಸರ್ಕಾರಿ ನೌಕರರ ತೊಂದರೆಗಳ ಬಗ್ಗೆ ಪರಿಶೀಲಿಸಿ ಕರ್ತವ್ಯಕ್ಕೆ ನಿಯೋಜಿಸಬೇಕೆಂದು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಭೀಮಪ್ಪ ನಾಯಕ ಮುಖ್ಯ ಚುನಾವಣಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ.
ಲೋಕಸಭಾ ಚುನಾವಣೆಗೆ ಜಿಲ್ಲಾ ಚುನಾವಣಾಧಿಕಾರಿಗಳು, ತಹಸೀಲ್ದಾರರು, ಆಯಾ ಇಲಾಖೆ ಅಧಿಕಾರಿಗಳಿಗೆ ಪತ್ರ ಬರೆಯದೆ ಹೆಚ್ಆರ್ಎಂಎಸ್ನಲ್ಲಿ ದಾಖಲಾದ ಸರ್ಕಾರಿ ಇಲಾಖೆ ನೌಕರರನ್ನು ಕರ್ತವ್ಯಕ್ಕೆ ನೇಮಕ ಮಾಡಲಾಗುತ್ತಿದೆ. ಇದರಿಂದ ವೈದ್ಯಕೀಯ ರಜೆ ಮೇಲೆ ಹೋದ ನೌಕರರು, ಅನಾರೋಗ್ಯ ಪೀಡಿತರು, ಅಂಗವಿಕಲ, ಗರ್ಭಿಣಿ, ಬಾಣಂತಿಯರು ಹಾಗೂ ಹಸುಗೂಸು ಹೊಂದಿದ ಮಹಿಳೆಯರ ವಿವರ ಗೊತ್ತಾಗದೆ ಚುನಾವಣೆ ನಿರ್ವಹಣೆಯಲ್ಲಿ ನೌಕರರು ತೀವ್ರ ತೊಂದರೆಯಾಗುತ್ತದೆ.
ಜಿಲ್ಲಾ ಚುನಾವಣಾಧಿಕಾರಿಗಳು ಒಂದು ಬಾರಿ ನೌಕರರನ್ನು ಚುನಾವಣೆ ಕರ್ತವ್ಯಕ್ಕೆ ನಿಯೋಜಿಸಿದರೆ ರದ್ಧುಪಡಿಸಲು ಬರುವುದಿಲ್ಲವೆಂದು ತಾಲೂಕಿನ ಚುನಾವಣಾಧಿಕಾರಿಗಳು ಹೇಳುತ್ತಾರೆ. ಕಾರಣ ಜಿಲ್ಲಾಧಿಕಾರಿನೇರವಾಗಿ ಆಯಾ ಇಲಾಖೆ ಮುಖ್ಯಸ್ಥರಿಗೆ ವೈಯಕ್ತಿಕ ಪತ್ರ ಬರೆದು ಆರೋಗ್ಯವಂತ ನೌಕರರ ಯಾದಿ ತರಿಸಿಕೊಂಡು ಕರ್ತವ್ಯಕ್ಕೆ ನಿಯೋಜಿಸಬೇಕು. ಪಾರದರ್ಶಕವಾಗಿ ಚುನಾವಣಾ ಕರ್ತವ್ಯ ನಿರ್ವಹಿಸಲು ಆಯಾ ಇಲಾಖೆಯ ಪದನಿಮಿತ್ತ ಅಧಿಕಾರಿ ಹುದ್ದೆಗಳ ಪ್ರಕಾರ ನೌಕರರನ್ನು ಚುನಾವಣೆ ಕರ್ತವ್ಯಕ್ಕೆ ನಿಯೋಜಿಸಬೇಕು. ಕರ್ತವ್ಯ ನಿರ್ವಹಿಸಿದ ನೌಕರರಿಗೆ ಭತ್ಯೆ ಹಾಗೂ ಮತ ಹಾಕಲು ಸೂಕ್ತ ವ್ಯವಸ್ಥೆ ಕಲ್ಪಿಸಬೇಕೆಂದು ಭೀಮಪ್ಪ ನಾಯಕ ಒತ್ತಾಯಿಸಿದ್ದಾರೆ.