ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ನಗರಸಭೆಯಲ್ಲಿ ಬಹುಕೋಟಿ ಹಗರಣ; ಕತ್ತೆಯೊಂದಿಗೆ ಸತ್ಯಾಗ್ರಹ

Mainashree
Updated On : 4 Feb 2014, 11:18 am

ಕ.ಪ್ರ. ವಾರ್ತೆ   ರಾಯಚೂರು   ಫೆ.3
ನಗರಸಭೆಯ ಬಹುಕೋಟಿ ಹಗರಣಗಳಲ್ಲಿ ಪಾಲುದಾರ ಅಧಿಕಾರಿಗಳ ವಿರುದ್ಧ ಸಚಿವರು, ಮುಖ್ಯಮಂತ್ರಿಗಳಿಗೆ ದೂರು ಸಲ್ಲಿಸಿ ಬೇಸತ್ತ ಪ್ರಗತಿಪರ ಸಂಘಟನೆಯವರು, ಸಿಟ್ಟು ಮತ್ತು ಸಹನೆಗೆ ಹೆಸರಾದ ಪ್ರಾಣಿ ಕತ್ತೆಯೊಂದಿಗೆ ವಿನೂತನ ರೀತಿಯಲ್ಲಿ ಅನಿರ್ದಿಷ್ಟ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರಗತಿಪರ ಸಂಘಟನೆಗಳ ಒಕ್ಕೂಟದವರು ಸೋಮವಾರದಿಂದ ಕತ್ತೆಯೊಂದಿಗೆ ಅನಿರ್ದಿಷ್ಟ ಉಪವಾಸ ಸತ್ಯಾಗ್ರಹ ಆರಂಭಿಸಿದ್ದು, ನಗರಸಭೆಯಲ್ಲಿ ವಿವಿಧ ಯೋಜನೆಗಳ ಜಾರಿಯಲ್ಲಿ ಬಹುಕೋಟಿ ರು. ಅಧಿಕಾರಿಗಳ ಪಾಲಾಗಿದೆ. ಆದರೆ ಕ್ರಮ ಮಾತ್ರ ಜರುಗುತ್ತಿಲ್ಲ ಎಂದು ಆರೋಪಿಸಿ ಹೋರಾಟ ಆರಂಭಿಸಿದ್ದಾರೆ.
ಕಾಮಗಾರಿ ನಡೆಯದಿದ್ರೂ 54 ಲಕ್ಷ ಪಾವತಿ: ನಗರಕ್ಕೆ ನಿರಂತರ ಕುಡಿಯುವ ನೀರೊದಗಿಸುವ ಉದ್ದೇಶದಿಂದ ಜಾರಿಗೆ ತರಲಾದ ತಡೆರಹಿತ ವಿದ್ಯುತ್ ಮಾರ್ಗ ಅಳವಡಿಕೆ ಕಾಮಗಾರಿಯ ಜಾರಿಯಲ್ಲಿ ಕಾಮಗಾರಿ ನಡೆಯದಿದ್ದರೂ ನಗರಸಭೆಯ ಪೌರಾಯುಕ್ತರಾಗಿದ್ದವರು 54 ಲಕ್ಷ ಪಾವತಿಸುವ ಮೂಲಕ ಅಕ್ರಮ ಎಸಗಿದ್ದು, ಈ ಬಗ್ಗೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಒತ್ತಾಯಿಸಿದರು.
ಅಕ್ರಮ ಸಾಬೀತಾದ್ರೂ ಕ್ರಮವಿಲ್ಲ: ಹಾಗೆಯೇ ಕಾಮಗಾರಿ ಮುಗಿಸುವ ಮೊದಲೇ 54 ಲಕ್ಷ ಪಡೆದ ಕರೀಂ ನಗರದ ವೆಂಕಟೇಶ್ವರ ಏಜೆನ್ಸಿ ಮಾಲೀಕರಿಂದ ಹಣ ವಸೂಲು ಮಾಡುವಂತೆ ಆಗ್ರಹಿಸಿದ ಹೋರಾಟಗಾರರು, ನಗರಸಭೆಯ ಶೇ. 22.75ರ ಅನುದಾನದ ಬಳಕೆಯಲ್ಲಿಯೂ ಅಧಿಕಾರಿಗಳು ಅಕ್ರಮ ಎಸಗಿದ್ದಾರೆ. ಈ ಬಗ್ಗೆ ಸಂಘಟನೆಗಳು ಪುರಾವೆ ಸಹಿತ ಸಾಬೀತು ಮಾಡಿದರೂ ಕಠಿಣ ಕ್ರಮ ಮಾತ್ರ ಕೈಗೊಂಡಿಲ್ಲ. ಅನುದಾನ ದುರ್ಬಳಕೆಯಲ್ಲಿ ಶಾಮೀಲಾದ ಈ ಹಿಂದಿನ ಪೌರಾಯುಕ್ತ ತಿಪ್ಪೇಶ್ ಮತ್ತು ಎಇಇ ಮಲ್ಲಿಕಾರ್ಜುನ ಗೋಪಿಶೆಟ್ಟಿ ಅವರನ್ನು ಸೇವೆಯಿಂದ ವಜಾಗೊಳಿಸಬೇಕು ಎಂದು ಒತ್ತಾಯಿಸಿದರು.
ನಗರದಲ್ಲಿ ನಿಯಮಬಾಹಿರವಾಗಿ ನಿರ್ಮಾಣಗೊಂಡ ಬಹುಮಹಡಿ ಕಟ್ಟಡಗಳನ್ನು ನೆಲಸಮಗೊಳಿಸಿ ಅದಕ್ಕೆ ಕಾರಣರಾದವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು. ನಗರಸಭೆಯಲ್ಲಿ ತೆರಿಗೆ ವಿನಾಯಿತಿಗೆ ಸಂಬಂಧಿಸಿದಂತೆ ಖೊಟ್ಟಿ ದಾಖಲೆಗಳನ್ನು ಸೃಷ್ಟಿಸಿ ನಗರಸಭೆಗ ಕೋಟ್ಯಂತರ ರು. ತೆರಿಗೆ ವಂಚಿಸಿರುವ ನವೋದಯ ಶಿಕ್ಷಣ ಸಂಸ್ಥೆ ಸೇರಿದಂತೆ ಇನ್ನಿತರೆ ಅಂಥ ಸಂಸ್ಥೆಗಳಿಂದ ಬಾಕಿ ತೆರಿಗೆ ವಸೂಲು ಮಾಡಬೇಕು ಎಂದು ಆಗ್ರಹಿಸಿದರು.
ಬೇನಾಮಿ ಏಜೆನ್ಸಿ: ಶೇ.22.75ರ ಅನುದಾನದಲ್ಲಿ 15 ಲಕ್ಷ ಮೊತ್ತದ ಕಳಪೆ ಕಂಪ್ಯೂಟರ್ ಸಾಮಗ್ರಿ ಸರಬರಾಜು ಮಾಡಿದ ಬೇನಾಮಿ ಮಿಸ್ಬಾ ಏಜೆನ್ಸಿ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು. ಅನುದಾನ ವಾಪಸು ಪಡೆಯಬೇಕೆಂದು ಒತ್ತಾಯಿಸಿದರು.
ಕಳೆದ ಮೂರು ವರ್ಷಗಳಿಂದ ಪ್ರಗತಿಪರ ಸಂಘಟನೆಯ ಕಾರ್ಯಕರ್ತರು ಈ ಎಲ್ಲ ಬೇಡಿಕೆಗಳನ್ನು ಮುಂದಿರಿಸಿಕೊಂಡು ಹೋರಾಟ ನಡೆಸಿ ಮುಖ್ಯಮಂತ್ರಿ ಸೇರಿದಂತೆ ಜಿಲ್ಲೆಗೆ ಭೇಟಿ ನೀಡುವ ಎಲ್ಲ ಜನಪ್ರತಿನಿಧಿಗಳಿಗೂ ದೂರು ಸಲ್ಲಿಸಿದ್ದರೂ ಕ್ರಮ ಮಾತ್ರ ಕೈಗೊಂಡಿಲ್ಲ ಎಂದು ದೂರಿದರು.
ನಗರದ ಜನತೆಯನ್ನು ಜನಪ್ರತಿನಿಧಿಗಳು ತಾಳ್ಮೆ ಪರೀಕ್ಷಿಸುವ ಕಾರ್ಯ ಮಾಡಿದ್ದಾರೆ. ಸಂಘಟನೆಗಳು ಮಾಡಿದ ಆರೋಪ ಸಾಬೀತಾಗಿದ್ದರೂ ಅಧಿಕಾರಿಗಳ ಮೇಲಿನ ಕ್ರಮ ಕೈಗೊಳ್ಳುವಲ್ಲಿ ಆಗುತ್ತಿರುವ ವಿಳಂಬದ ಹಿನ್ನೆಲೆಯಲ್ಲಿ ಅನಿರ್ದಿಷ್ಟ ಉಪವಾಸ ಸತ್ಯಾಗ್ರಹ ಕೈಗೊಳ್ಳಲಾಗುತ್ತಿದ್ದು, ಎಲ್ಲ ಅಕ್ರಮಗಳ ಪ್ರಕರಣಗಳಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಾಗುವವರೆಗೆ ಹೋರಾಟ ಮುಂದುವರಿಯಲಿದೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಸಂಘಟನೆಗಳ ಪ್ರಮುಖರಾದ ಅಂಬಣ್ಣ ಅರೋಲಿಕರ್, ಜೆ.ಬಿ.ರಾಜು, ಅಶೋಕಕುಮಾರ್ ಜೈನ್, ಶಿವುಕುಮಾರ್ ಯಾದವ್, ರಾಜುಪಟ್ಟಿ, ಅಮರೇಶ್, ಕೆ.ಪಿ. ಅನಿಲಕುಮಾರ್, ಜನಾರ್ದನ ಹಳ್ಳಿಬೆಂಚಿ ಸೇರಿದಂತೆ ಅನೇಕರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement