ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ನೆಲಕಚ್ಚಿದ ನಗರಸಭೆ ಕಾರ್ಯವೈಖರಿ

Mainashree
Updated On : 4 Feb 2014, 11:18 am

ಕ.ಪ್ರ. ವಾರ್ತೆ   ರಾಯಚೂರು   ಫೆ.3
ನಗರಸಭೆ ಕಾರ್ಯವೈಖರಿಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ರಾಜ್ಯ ಉಪ ಲೋಕಾಯುಕ್ತ ನ್ಯಾ. ಎಸ್.ಬಿ. ಮಜಗೆ ಅವರು, ನಗರದ ಸ್ವಚ್ಛತೆಯಲ್ಲಿ ಸ್ಥಳೀಯ ಆಡಳಿತ ಸಂಪೂರ್ಣ ಎಡವಿದೆ. ಈ ಬಗ್ಗೆ ಸರ್ಕಾರದ ಗಮನಸೆಳೆದು ಕ್ರಮಕ್ಕೆ  ಸೂಚಿಸುವುದಾಗಿ ತಿಳಿಸಿದರು.
ನಗರದ ಮಡ್ಡಿಪೇಟೆ, ಜಲಾಲ್‌ನಗರ, ಗದ್ವಾಲ್ ರಸ್ತೆ ಸೇರಿದಂತೆ ವಿವಿಧ ಬಡಾವಣೆಗಳಿಗೆ ಭೇಟಿ ನೀಡಿದ ನಂತರ ಸೋಮವಾರ ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಮಾತನಾಡಿ, ನಗರಸಭೆಯು ಸ್ವಚ್ಛತೆಯ ಕಾರ್ಯವನ್ನೇ ಮರೆತಂತಿದೆ ಎಂದು ತೀವ್ರ ಅಸಂತೃಪ್ತಿ ವ್ಯಕ್ತಪಡಿಸಿದರು.
ಶೌಚಾಲಯ ವ್ಯವಸ್ಥೆಯಿಲ್ಲ: ನಾಗರಿಕರು ತೀರಾ ಕೆಟ್ಟ ಪರಿಸರದಲ್ಲಿ ಜೀವನ ನಡೆಸುತ್ತಿರುವುದು ಕಂಡುಬಂದಿದೆ. ಮಹಿಳೆಯರು, ಪುರುಷರೆನ್ನದೆ ಎಲ್ಲರಿಗೂ ನಗರದ ವಿವಿಧ ಬಡಾವಣೆಗಳಲ್ಲಿ ಶೌಚಾಲಯ ವ್ಯವಸ್ಥೆಯಿಲ್ಲದಿರುವುದು ನಾಗರಿಕರಿಂದ ತಿಳಿದಿದೆ. ನಗರಸಭೆ ಪೌರಾಯುಕ್ತರು ಮತ್ತು ಅಧಿಕಾರಿಗಳಿಗೆ ಈ ಬಗ್ಗೆ ಎಚ್ಚರಿಕೆ ನೀಡಲಾಗಿದೆ ಎಂದು ಹೇಳಿದರು.
ನಗರದಲ್ಲಿ ಸ್ವಚ್ಛತೆ ಕಾರ್ಯ ನಿರ್ವಹಣೆಯಲ್ಲಿ ನಗರಸಭೆ ವಿಫಲವಾಗಿದೆ. ಈ ಬಗ್ಗೆಯೂ ಪೌರಾಯುಕ್ತರಿಗೆ ಎಚ್ಚರಿಕೆ ನೀಡಿದ್ದು, ಕಾಲಮಿತಿಯಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಿ ಕಾರ್ಯಪ್ರವೃತ್ತವಾಗಲು ಆದೇಶಿಸಲಾಗಿದೆ ಎಂದು ತಿಳಿಸಿದ ಅವರು, ರಿಮ್ಸ್ ಬೋಧಕ ಆಸ್ಪತ್ರೆಯಲ್ಲಿ ಸ್ವಚ್ಛತೆ ಕೊರತೆ ಕಂಡುಬಂದಿದೆ ಎಂದು ಹೇಳಿದರು.
ಸಹಿಸಲಾಗದಷ್ಟು ವಾಸನೆ: ಆಸ್ಪತ್ರೆಯಲ್ಲಿ ರೋಗಿಗಳಿಂದ ಅಷ್ಟಾಗಿ ಯಾವುದೇ ರೀತಿಯ ದೂರುಗಳು ಕೇಳಿಬರಲಿಲ್ಲವಾದರೂ, ಆಸ್ಪತ್ರೆಯಲ್ಲಿ ಸೌಲಭ್ಯಗಳ ಕೊರತೆಯಿದೆ ಎಂಬುದು ಗಮನಕ್ಕೆ ಬಂದಿದೆ. ಅದರಲ್ಲೂ ಬಾಣಂತಿಯರು ಬಳಸುವ ಶೌಚಾಲಯಗಳ ಪರಿಸ್ಥಿತಿ ಶೋಚನೀಯವಾಗಿದೆ. ಅಲ್ಲಿ ಸ್ವಚ್ಛತೆ ಕೈಗೊಂಡಿಲ್ಲ. ನಿಜಕ್ಕೂ ಸಹಿಸಲಸಾಧ್ಯದ ಪರಿಸ್ಥಿತಿ ಅಲ್ಲಿ ಕಂಡಿದ್ದಾಗಿ ತಿಳಿಸಿದರು.
ಸ್ವಯಂ ಪ್ರೇರಣೆಯಿಂದ ಹಾಗೂ ದೂರುಗಳನ್ನು ಆಧರಿಸಿ ಪರಿಶೀಲಿಸಲು ಜಿಲ್ಲೆಗೆ ಭೇಟಿ ನೀಡಿದ್ದು, ಮೂರು ದಿನಗಳ ಕಾಲ ಜಿಲ್ಲಾದ್ಯಂತ ಸಂಚರಿಸಿ ಪರಿಶೀಲಿಸಲಾಗುವುದು ಎಂದ ಅವರು, ಅಸಮರ್ಪಕ ಕಾರ್ಯನಿರ್ವಹಣೆ ಮಾಡುವ ಅಧಿಕಾರಿಗಳ ವಿರುದ್ಧ ಸರ್ಕಾರಕ್ಕೆ ಕ್ರಮಕ್ಕೆ ಸೂಚಿಸುವ ಅಧಿಕಾರ ಲೋಕಾಯುಕ್ತಕ್ಕಿದೆ ಎಂದು ಹೇಳಿದರು.
ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಶಿಫಾರಸು: ಜಿಲ್ಲೆಯಲ್ಲಿನ ಸಮಸ್ಯೆಗಳ ಬಗ್ಗೆ ದೂರುಗಳ ಆಧಾರದಲ್ಲಿ ವರದಿ ಸಿದ್ಧಪಡಿಸಿ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಸರ್ಕಾರಕ್ಕೆ ಶಿಫಾರಸು ಮಾಡಲಾಗುತ್ತದೆ. ಸರ್ಕಾರ ಕೈಗೊಳ್ಳುವ ನಿರ್ಣಯದಂತೆ ಲೋಕಾಯುಕ್ತರು ಮುಂದೆ ಕ್ರಮ ಜರುಗಿಸಲಿದ್ದಾರೆಂದು ತಿಳಿಸಿದರು. ಜಿಲ್ಲಾ ಲೋಕಾಯುಕ್ತ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement