ಮೂರ್ತಿ ಪ್ರತಿಷ್ಠಾಪನೆ
ದೇವದುರ್ಗ: ನಾಡಿನ ಸಂಸ್ಕೃತಿ ರಕ್ಷಣೆಗೆ ಸಮಾಜದಲ್ಲಿನ ಎಲ್ಲರೂ ಮುಂದಾಗುವಂತೆ ದೇವರಗುಂಡಗುರ್ತಿಯ ಸಂಸ್ಥಾನದ ಶಿವಲಿಂಗ ಶ್ರೀ ಕರೆ ನೀಡಿದರು.
ತಾಲೂಕಿನ ದೇವರಗುಂಡಗುರ್ತಿ ಗ್ರಾಮದಲ್ಲಿ ಸೋಮವಾರ ಮೈಲಾರಲಿಂಗೇಶ್ವರ ದೇವಸ್ಥಾನದಲ್ಲಿ ಆಯೋಜಿಸಿದ್ದ ಮೂರ್ತಿ ಪ್ರತಿಷ್ಠಾಪನೆ ಹಾಗೂ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಮಾತನಾಡಿ, ಆಧುನಿಕ ಯುಗದಲ್ಲಿ ಪರಂಪರೆ, ಸಂಸ್ಕೃತಿಗಳಿಂದ ಜನರು ದೂರವಾಗುತ್ತಿದ್ದಾರೆಂದು ಕಳವಳ ವ್ಯಕ್ತಪಡಿಸಿದರು. ಸಮಾರಂಭದ ಸಾನ್ನಿಧ್ಯವನ್ನು ರಾಯಚೂರಿನ ಶಾಂತಮಲ್ಲಯ್ಯ ಶ್ರೀ ವಹಿಸಿದ್ದರು. ಗಬ್ಬೂರಿನ ಬೂದಿಬಸವೇಶ್ವರ ಶ್ರೀ, ಮೈಲಾಪುರದ ಶರಣಪ್ಪ ತಾತಾ, ಸೂಲೂರ ಮಠದ ರೇಣುಕಾನಂದ ಮಹಾನಂದ ಶ್ರೀ, ಮುಂಡರಗಿಯ ಶಿವಣ್ಣ ಹಾಗೂ ಸಿದ್ದಣ್ಣ ತಾತಾ, ಗುರುವಿನ ಸಿದ್ದಯ್ಯ ತಾತಾ, ಖಂಡಪ್ಪ ತಾತಾ ದೇವರಗುಡ್ಡ, ಜಂಬಣ್ಣ ತಾತಾ ಇದ್ದರು.
'ಶ್ರೀಮಠಕ್ಕೆ 10 ಲಕ್ಷ ಅನುದಾನ'
ದೇವದುರ್ಗ: ತಾಲೂಕಿನ ದೇವರ ಗುಂಡಗುರ್ತಿ ಗ್ರಾಮದ ಮೈಲಾರಲಿಂಗೇಶ್ವರ ಸಂಸ್ಥಾನ ಮಠಕ್ಕೆ 10 ಲಕ್ಷ ಅನುದಾನ ನೀಡುವುದಾಗಿ ಮಾಜಿ ಸಚಿವ ವಿ. ಸೋಮಣ್ಣ ಭರವಸೆ ನೀಡಿದರು. ಗುಂಡಗುರ್ತಿ ಗ್ರಾಮದ ಮೈಲಾರಲಿಂಗೇಶ್ವರ ದೇವಸ್ಥಾನದಲ್ಲಿ ಏರ್ಪಡಿಸಿದ್ದ ಮೂರ್ತಿ ಪ್ರತಿಷ್ಠಾಪನೆ ಹಾಗೂ 101 ಜೋಡಿ ಸಾಮೂಹಿಕ ವಿವಾಹ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಹಿಂದುಳಿದ ತಾಲೂಕಿನಲ್ಲಿ ಸಾಮೂಹಿಕ ವಿವಾಹ ಆಯೋಜನೆ ಮೂಲಕ ಸಮಾಜದಲ್ಲಿನ ಬಡವರಿಗೆ ಶ್ರೀಮಠವು ನೆರವಾಗುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.