ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ವಸತಿ ಸಚಿವ ಅಂಬರೀಷ್ ಕೈಬಿಡಲು ಆಗ್ರಹಿಸಿ ಪ್ರತಿಭಟನೆ

Mainashree
Updated On : 4 Feb 2014, 11:19 am

ರಾಯಚೂರು: ಕೊಳಚೆ ಪ್ರದೇಶಗಳ ಅಭಿವೃದ್ಧಿ ಸೇರಿದಂತೆ ವಿವಿಧ ವಸತಿ ಯೋಜನೆಗಳ ಜಾರಿಯಲ್ಲಿ ವಿಫಲರಾಗಿರುವ ವಸತಿ ಸಚಿವ ಅಂಬರೀಷ್ ಅವರನ್ನು ಸಂಪುಟದಿಂದ ಕೈಬಿಡುವಂತೆ ರಾಯಚೂರು ಸ್ಲಂ ನಿವಾಸಿಗಳ ಕ್ರಿಯಾ ವೇದಿಕೆ ಒತ್ತಾಯಿಸಿ ನಗರದಲ್ಲಿ ಪ್ರತಿಭಟನೆ ನಡೆಸಿತು.
ನಗರದ ಜಿಲ್ಲಾಧಿಕಾರಿ ಕಚೇರಿಯ ಬಳಿ ಸೋಮವಾರ ಪ್ರತಿಭಟನೆ ನಡೆಸಿದ ಸಂಘಟನೆಯ ಕಾರ್ಯಕರ್ತರು, ರಾಜ್ಯದಲ್ಲಿ ದಿನವೂ ಕೊಳಚೆ ಪ್ರದೇಶದ ನಿವಾಸಿಗಳನ್ನು ಒಕ್ಕಲೆಬ್ಬಿಸಲಾಗುತ್ತಿದೆ. ಬೆಂಗಳೂರಿನ ಇಡಬ್ಲುಎಸ್ ಮತ್ತು ವಿನೋಬಾನಗರ ಕೊಳಚೆ ಪ್ರದೇಶ, ಹುಬ್ಬಳ್ಳಿಯ ಬೆಂಗೇರಿ, ಕೇಶ್ವಾಪುರ, ಯಾದಗಿರಿಯ ಮೌನೇಶ್ವರ ಸ್ಲಂ ಪ್ರದೇಶ ಸೇರಿ ವಿವಿಧೆಡೆ ನಿವಾಸಿಗಳನ್ನು ಒಕ್ಕಲೆಬ್ಬಿಸುವ ಕಾರ್ಯ ಆಡಳಿತ ಮಾಡುತ್ತಿವೆ ಎಂದು ಆರೋಪಿಸಿದರು.
ನಗರದಲ್ಲಿ ನಿವೇಶನ ಲಭ್ಯವಿಲ್ಲ: ಕೊಳಚೆ ಪ್ರದೇಶಗಳ ಘೋಷಣೆ ಎನ್ನುವ ಪ್ರಕ್ರಿಯೆ ರಾಜ್ಯದಲ್ಲಿ ಸಂಪೂರ್ಣ ಸ್ಥಗಿತಗೊಂಡಿದೆ. ಕೇಂದ್ರದ ರಾಜೀವ್ ಆವಾಸ್ ಯೋಜನೆಯಡಿ ಮನೆ ನಿರ್ಮಿಸಲು ನಗರದಲ್ಲಿ ನಿವೇಶನ ಲಭ್ಯವಿಲ್ಲ. ನಗರದ ಆಶ್ರಯ ಸಮಿತಿಗಳು ನಿಷ್ಕ್ರಿಯವಾಗಿವೆ. ನಮ್ಮ ಮನೆ ನಮ್ಮ ಯೋಜನೆ ಮತ್ತು ವಾಜಪೇಯಿ ವಸತಿ ಯೋಜನೆಗಳು ನಿರ್ದಿಷ್ಟ ಮಾರ್ಗಸೂಚಿಯಿಲ್ಲದೇ ಕಡತಗಳಲ್ಲಿ ಸೇರಿಹೋಗಿವೆ ಎಂದು ಟೀಕಿಸಿದರು.
ವಸತಿ ಸೌಲಭ್ಯವಿಲ್ಲ: ರಾಜ್ಯದಲ್ಲಿ ಸುಮಾರು 3.5 ಲಕ್ಷ ಮೇಲ್ಪಟ್ಟು ಜನರು ಬೀದಿಬದಿಯಲ್ಲಿ ವಾಸವಾಗಿದ್ದಾರೆ. ಆದರೂ ವಸತಿ ಸಚಿವ ಬಡವರಿಗೆ ಹಾಗೂ ವಸತಿಹೀನರಿಗೆ ವಸತಿ ಸೌಲಭ್ಯ ದೊರಕಿಸುವಲ್ಲಿ ವಿಫಲರಾಗಿದ್ದಾರೆ. ಸಾಧನೆ ಶೂನ್ಯವಾಗಿದ್ದರೂ ಕೇಂದ್ರ ಸರ್ಕಾರ ವಸತಿ ಯೋಜನೆಗಳ ಜಾರಿಗೆ ಸಂಬಂಧಿಸಿ ಪ್ರಶಸ್ತಿ ನೀಡಿದ್ದು ಹಾಸ್ಯಾಸ್ಪದವಾಗಿದೆ ಎಂದು ಆರೋಪಿಸಿದರು.
ಕೊಳಗೇರಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರೂ ಆಗಿರುವ ಅಂಬರೀಷ್ ಅವರು, ಇದುವರೆಗೆ ಬೆಂಗಳೂರಿನ ಮಂಡಳಿ ಕಚೇರಿ ಹಾಗೂ ವಿಧಾನಸೌಧಕ್ಕೂ ಕಾಲಿರಿಸುತ್ತಿಲ್ಲ. ರಾಜ್ಯದ ಸ್ಲಂ ನಿವಾಸಿಗಳು ತಮ್ಮ ಅಹವಾಲು ಹೇಳಿಕೊಳ್ಳಲು ಸಚಿವರು ದೊರೆಯುತ್ತಿಲ್ಲ. ಈ ಹಿನ್ನೆಲೆಯಲ್ಲಿ ಕೂಡಲೇ ವಸತಿ ಸಚಿವರನ್ನು ಸಂಪುಟದಿಂದ ಕೈಬಿಡುವಂತೆ ಸಿಎಂ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸಂಘಟನೆಯ ಅಧ್ಯಕ್ಷ ಚಂದ್ರಶೇಖರ್ ಯಕ್ಲಾಸಪುರ, ಪ್ರಧಾನ ಕಾರ್ಯದರ್ಶಿ ಜನಾರ್ದನ ಹಳ್ಳಿಬೆಂಚಿ ಮತ್ತಿತರರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement