ಸುದ್ದಿ ಸಂಕ್ಷೇಪ
ಮಾನವೀಯತೆ ಬದುಕು ಅವಶ್ಯ: ಖಾದ್ರಿ
ಮುದಗಲ್: ಮಾನವ ಹಣ, ಆಸ್ತಿಗಾಗಿ ಅನೇಕ ವಾಮವಾರ್ಗ ಅನುಸರಿಸುತ್ತಿರುವುದರಿಂದ ಸಮಾಜದಲ್ಲಿ ಕೆಡುಕು ಹೆಚ್ಚುತ್ತಿದೆ ಎಂದು ಹೈದ್ರಾಬಾದ್ನ ಜಾಮಿಯಾ ನಿಜಾಮಿಯಾದ ಮೌಲಾನಾ ಸೈಯದ್ಶಾಹ್ ಅಜೀಜುಲ್ಲಾಹ್ ಖಾದ್ರಿಸಾಬ ಹೇಳಿದರು. ಪಟ್ಟಣದ ಪಪಂ ಆವರಣದಲ್ಲಿ ಅಂಜುಮನ್ ಫಲಾಹುಲ್ ಮುಸ್ಲೀಮಿನ್ ಕಮಿಟಿ ಹಮ್ಮಿಕೊಂಡಿದ್ದ ಧಾರ್ಮಿಕ ಪ್ರವಚನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿ, ಮನುಷ್ಯ ತನ್ನ ಉನ್ನತಿಗಾಗಿ ಅನೇಕ ದುಷ್ಕೃತ್ಯಗಳಿಗೆ ಕೈ ಹಾಕುತ್ತಿದ್ದು ಸಮಾಜದಲ್ಲಿ ಶಾಂತಿ- ನೆಮ್ಮದಿ ಇಲ್ಲದಂತಾಗಿದೆ. ಎಲ್ಲರೂ ಶಾಂತಿ- ಸೌಹಾರ್ದತೆಯಿಂದ ಬಾಳಬೇಕಾದರೆ ಮನುಷ್ಯನಲ್ಲಿ ಮೊದಲು ಮಾನವಿಯತೆ ಬರಬೇಕು ಎಂದರು. ಪ್ರವಚನ ಕಾರ್ಯಕ್ರಮದಲ್ಲಿ ರಾಯಚೂರಿನ ಮೌಲಾನಾ ಜಾಫರಖಾನ, ಮುಖಂಡರಾದ ಮಹಾಂತೇಶ ಪಾಟೀಲ್, ಗುರುಬಸಪ್ಪ ಸಜ್ಜನ್ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಮಿಟಿಯ ಅಧ್ಯಕ್ಷ ಸೈಯದ್ ಷಾಹ ಯಾಸೀನ್ ಖಾದ್ರಿ ವಹಿಸಿದ್ದರು. ಸಮಾಜದ ಮುಖಂಡರಾದ ರಿಯಾಜ್ ಖಾದ್ರಿ, ಪಾಶಾ ಹುಸೇನಿ, ಕರಿಂಮುಲ್ಲಾ ಹುಸೇನಿ, ಫಕ್ರುದ್ದೀನ್ ಹಸನ್ ಬೇಗ್ ಉಸ್ತಾದ್, ಪಪಂ ಅಧ್ಯಕ್ಷ ರಜ್ಜಬ ಅಲಿ, ಸ್ಥಾಯಿ ಸಮಿತಿ ಅಧ್ಯಕ್ಷ ಹೇಮಂತ ನಾಗಲಾಪುರ, ಸದಸ್ಯರಾದ ಮಾಸುಂ ಷರೀಪ್, ಬಂದೇನವಾಜ್ ಬಡಿಗೇರ, ಖಾಜಾಪಾಶಾ ಗಾಡಿವಾನ್, ಜೆಡಿಎಸ್ ಬ್ಲಾಕ್ ಅಧ್ಯಕ್ಷ ಅಮೀರಬೇಗ್ ಉಸ್ತಾದ, ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಮುನ್ವರಖಾನ್ ಸೇರಿದಂತೆ ಅನೇಕರು ಮೇದಿಕೆ ಮೇಲಿದ್ದರು. ಕಾರ್ಯಕ್ರಮವನ್ನು ಮೌಲಾನಾ ಮೈಬೂಬ ಅಲಿ ನಿರೂಪಿಸಿದರು.
ಅಪರಿಚಿತ ಶವ ಪತ್ತೆ
ರಾಯಚೂರು: ಮಾನವಿ ತಾಲೂಕಿನ ಹಿರೇಕೊಟ್ನೆಕಲ್ ಗ್ರಾಮದ ಬಳಿ ಎಡದಂಡೆ ಕಾಲುವೆಯ 76ನೇ ಉಪ ಕಾಲುವೆಯಲ್ಲಿ ಅಪರಿಚಿತ ವ್ಯಕ್ತಿ ಶವ ಪತ್ತೆಯಾಗಿದೆ. ಮೃತನು 28 ವರ್ಷದವನಿದ್ದು ಕಾಲುವೆಯಲ್ಲಿ ನೀರಿನ ಹರಿವು ಕಡಿತಗೊಳಿಸಿದ ವೇಳೆ ಶವ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಮಾನವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಲಹ; ವ್ಯಕ್ತಿ ಕೊಲೆ
ರಾಯಚೂರು: ನಗರದ ತಿಮ್ಮಾಪುರ ಪೇಟೆಯ ಖಾದರಗುಂಡ ಪ್ರದೇಶದಲ್ಲಿ ಕೌಟುಂಬಿಕ ಕಲಹದ ಹಿನ್ನೆಲೆ ವ್ಯಕ್ತಿಯೊಬ್ಬನ ಮೇಲೆ ಹಲ್ಲೆ ಮಾಡಿ ಕೊಲೆಗೈದಿರುವ ಘಟನೆ ನಡೆದಿದೆ. ಮೃತನನ್ನು ಸೈಯದ್ ಸಲೀಂ ಎಂದು ಗುರುತಿಸಲಾಗಿದೆ. ಈತನನ್ನು ಮಹೆಬೂಬ್ ಎಂಬಾತ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಕಟ್ಟಿಗೆಯಿಂದ ಹಲ್ಲೆ ಮಾಡಿದ್ದು, ಅದರಿಂದ ತೀವ್ರ ಗಾಯಗೊಂಡ ಸಲೀಂ ಸಾವನ್ನಪ್ಪಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ನೇತಾಜಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.