ಮಸ್ಕಿಯಲ್ಲಿ 11, 12ರಂದು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ
ಕ.ಪ್ರ. ವಾರ್ತೆ, ರಾಯಚೂರು, ಫೆ.5
ರಾಯಚೂರು ಜಿಲ್ಲಾ 8ನೇ ಕನ್ನಡ ಸಾಹಿತ್ಯ ಸಮ್ಮೇಳನವು ಫೆ.11 ಮತ್ತು ಫೆ.12ರಂದು ಲಿಂಗಸ್ಗೂರು ತಾಲೂಕಿನ ಮಸ್ಕಿ ಪಟ್ಟಣದಲ್ಲಿ ನಡೆಯಲಿದೆ.
ನಗರದಲ್ಲಿ ಬುಧವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ ಹಾಗೂ ಶಾಸಕ ಪ್ರತಾಪಗೌಡ ಪಾಟೀಲ್ ಅವರು, ಮಸ್ಕಿ ಪಟ್ಟಣದ ಭ್ರಮರಾಂಬಾ ದೇವಸ್ಥಾನದ ಹತ್ತಿರ ಸಮ್ಮೇಳನಕ್ಕೆ ಫೆ.11ರಂದು ಬೆಳಗ್ಗೆ 7ಕ್ಕೆ ಧ್ವಜಾರೋಹಣ ನೆರವೇರಿಸುವ ಮೂಲಕ ಚಾಲನೆ ನೀಡಲಾಗುತ್ತದೆ. ಈಗಾಗಲೇ ಸಮ್ಮೇಳನಾಧ್ಯಕ್ಷರಾಗಿ ಡಾ. ಸ್ವಾಮಿರಾವ್ ಕುಲಕರ್ಣಿ ಅವರನ್ನು ಆಯ್ಕೆ ಮಾಡಿ ಅಧಿಕೃತವಾಗಿ ಆಹ್ವಾನ ನೀಡಲಾಗಿದೆ ಎಂದು ಹೇಳಿದರು.
ಫೆ.11ರಂದು ಬೆಳಗ್ಗೆ 7ಕ್ಕೆ ಶಾಸಕ ಪ್ರತಾಪಗೌಡ ಪಾಟೀಲ್ ರಾಷ್ಟ್ರಧ್ವಜವನ್ನು ಹಾಗೂ ಜಿಲ್ಲಾ ಕಸಾಪ ಅಧ್ಯಕ್ಷ ಮಹಾಂತೇಶ್ ಮಸ್ಕಿ ಪರಿಷತ್ತಿನ ಧ್ವಜಾರೋಹಣ ಕಾರ್ಯಕ್ರಮ ನೆರವೇರಿಸಲಿದ್ದಾರೆ. ನಂತರ ಬೆಳಗ್ಗೆ 8.45ಕ್ಕೆ ಸಮ್ಮೇಳನಾಧ್ಯಕ್ಷರ ಭವ್ಯ ಮೆರವಣಿಗೆ ನಡೆಯಲಿದೆ ಎಂದು ತಿಳಿಸಿದರು.
ಉದ್ಘಾಟನೆಗೆ ನಾ. ಡಿಸೋಜಾ: ಬೆಳಗ್ಗೆ 11ಕ್ಕೆ ಸಮ್ಮೇಳನದ ಉದ್ಘಾಟನೆ ಸಮಾರಂಭ ಜರುಗಲಿದ್ದು, ಸಮ್ಮೇಳನವನ್ನು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ನಾ. ಡಿಸೋಜಾ ನೆರವೇರಿಸುವರು. ಕಸಾಪ ಅಧ್ಯಕ್ಷ ಪುಂಡಲೀಕ ಹಾಲಂಬಿ ಆಶಯ ನುಡಿಗಳನ್ನಾಡಲಿದ್ದು, ನಿಕಟಪೂರ್ವ ಸಮ್ಮೇಳನಾಧ್ಯಕ್ಷ ನಿವೃತ್ತ ನ್ಯಾ. ಶಿವರಾಜ್ ಪಾಟೀಲ್, ಸಮ್ಮೇಳನಾಧ್ಯಕ್ಷ ಡಾ. ಸ್ವಾಮಿರಾವ್ ಕುಲಕರ್ಣಿ ಪಾಲ್ಗೊಳ್ಳಲಿದ್ದಾರೆಂದು ತಿಳಿಸಿದರು.
ಸಮ್ಮೇಳನದ ಉದ್ಘಾಟನೆ ಸಮಾರಂಭದಲ್ಲಿ ಡಾ. ಬಸವಲಿಂಗ ಸೊಪ್ಪಿಮಠ ಅವರ ಕಾಳಾಮುಖ ಚತುರಾಚಾರ್ಯರು ಮತ್ತು ಇತರೆ ಸಂಶೋಧನಾ ಲೇಖನಗಳು ಎಂಬ ಕೃತಿಯನ್ನು ಜಿಲ್ಲಾ ಉಸ್ತುವಾರಿ ಸಚಿವ ಡಾ. ಶರಣಪ್ರಕಾಶ ಪಾಟೀಲ್ ಬಿಡುಗಡೆಗೊಳಿಸಲಿದ್ದಾರೆಂದು ಹೇಳಿದರು.
ಪುಸ್ತಕ ಮಳಿಗೆಯನ್ನು ಕನ್ನಡ ಮತ್ತು ಸಂಸ್ಕೃತಿ ಸಚಿವೆ ಉಮಾಶ್ರೀ, ಚಿತ್ರಕಲಾ ಪ್ರದರ್ಶನವನ್ನು ಸಂಸದ ಶಿವರಾಮೇಗೌಡ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಂಸದ ಸಣ್ಣ ಫಕೀರಪ್ಪ ನೆರವೇರಿಸಲಿದ್ದಾರೆ. ಪುಸ್ತಕ ಹಾಗೂ ಸ್ಮರಣ ಸಂಚಿಕೆಯನ್ನು ಜಿಲ್ಲೆಯ ಎಲ್ಲ ಶಾಸಕರು ಬಿಡುಗಡೆಗೊಳಿಸಲಿದ್ದಾರೆಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಜಿಲ್ಲೆಯ ಹಾಲಿ ಹಾಗೂ ಮಾಜಿ ಶಾಸಕರು, ಗಣ್ಯರು ಭಾಗವಹಿಸಲಿದ್ದು, ಸಮ್ಮೇಳನಾಧ್ಯಕ್ಷರ ಸಾಹಿತ್ಯ ಕುರಿತು ಮಧ್ಯಾಹ್ನ 2.15ಕ್ಕೆ ಮೊದಲ ಗೋಷ್ಠಿ ನಡೆಯಲಿದೆ. ಗೋಷ್ಠಿಯಲ್ಲಿ ಡಾ. ಶೀಲಾದಾಸ್ ಅವರು ಸಾಹಿತ್ಯ ಕುರಿತು ವಿಷಯ ಮಂಡಿಸಲಿದ್ದಾರೆ. ಮಧ್ಯಾಹ್ನ 3.45ಕ್ಕೆ ನಡೆಯುವ ಎರಡನೇ ಗೋಷ್ಠಿಯಲ್ಲಿ ಜೀವಸೆಲೆಗಳು ಎಂಬ ವಿಷಯದ ಕುರಿತು ಚಂದ್ರಶೇಖರ್ ಬಾಳೆ, ಎಂ.ಆರ್. ನಾಗರಾಜ್, ಮಾಲತೇಶ್ ಕುಲಕರ್ಣಿ ವಿಷಯ ಮಂಡಿಸಲಿದ್ದಾರೆಂದು ಹೇಳಿದರು.
ಅದೇ ದಿನ ಸಂಜೆ 5.45ಕ್ಕೆ ನಡೆಯಲಿರುವ ಗಜಲ್ ಗೋಷ್ಠಿಯಲ್ಲಿ ವಿವಿಧೆಡೆಯಿಂದ ಆಗಮಿಸುವ ಕವಿಗಳು ಪಾಲ್ಗೊಳ್ಳಲಿದ್ದಾರೆ. ನಂತರ ಸಂಜೆ 6.45ಕ್ಕೆ ನಡೆಯುವ ಸನ್ಮಾನ ಕಾರ್ಯಕ್ರಮದಲ್ಲಿ ಡಾ.ಬಸವಪ್ರಭು ಮಾನ್ವಿ, ಹನುಮನಗೌಡ ಬೆಳಗುರ್ಕಿ, ವಿರೂಪಾಕ್ಷಪ್ಪ ಜಾಲಹಳ್ಳಿ, ಜೆ. ಸುರೇಶ್, ಎಚ್.ಜಿ. ಹಂಪಣ್ಣ, ಮಾಯಾದೇವಿ ಚರಂತಿಮಠ, ಪಂ. ನರಸಿಂಹಲು ವಡವಾಟಿ, ಅಮರೇಗೌಡ ಪಾಟೀಲ್ ಮಟ್ಟೂರು, ಮನೋಹರ ಮಸ್ಕಿ, ಡಾ. ಮುದ್ದುಮೋಹನ್ ಅವರನ್ನು ಸನ್ಮಾನಿಸಲಾಗುತ್ತದೆ ಎಂದು ತಿಳಿಸಿದರು.
ಫೆ.12ರಂದು ಬೆಳಗ್ಗೆ 9.45ಕ್ಕೆ ಕಾವ್ಯಾನಂದರ ವಚನೋದ್ಯಾನ ಕುರಿತು ಪ್ರೊ. ಎಸ್.ಎಸ್. ಹರ್ಲಾಪುರ ಉಪನ್ಯಾಸ ನೀಡಲಿದ್ದಾರೆ. ಬೆಳಗ್ಗೆ 11ಕ್ಕೆ ಬಿಜಾಪುರದ ಸಿದ್ದೇಶ್ವರ ಸ್ವಾಮೀಜಿ ಅವರಿಂದ ವಿಶೇಷ ಉಪನ್ಯಾಸ ನಡೆಯಲಿದೆ. ಜಿಲ್ಲೆಯ ಸಾಹಿತ್ಯ ಕುರಿತು ಬೆಳಗ್ಗೆ 11.45ಕ್ಕೆ ಮೂರನೇ ಗೋಷ್ಠಿ ನಡೆಯಲಿದ್ದು, ಡಾ. ದಸ್ತಗೀರಸಾಬ್ ದಿನ್ನಿ, ಕಲಿಗಣನಾಥ ಗುಡದೂರು, ಡಾ. ಬಸವರಾಜ ಕೋಡಗುಂಟಿ ವಿಷಯ ಮಂಡಿಸಲಿದ್ದಾರೆಂದು ತಿಳಿಸಿದರು.
ನಾಲ್ಕನೇ ಗೋಷ್ಠಿಯಲ್ಲಿ ಮಧ್ಯಾಹ್ನ 2ಕ್ಕೆ ಮಸ್ಕಿಯ ಚರಿತ್ರೆ ಮತ್ತು ಸಂಸ್ಕೃತಿ ಎಂಬ ವಿಷಯದ ಕುರಿತು ಡಾ. ಅಮರೇಶ್ ಯತಗಲ್, ಡಾ. ಕೆ. ಶಶಿಕಾಂತ್ ವಿಷಯ ಮಂಡಿಸಲಿದ್ದು, ಮಧ್ಯಾಹ್ನ 3ಕ್ಕೆ ಕವಿಗೋಷ್ಠಿ ನಡೆಯಲಿದೆ. ನಂತರ ಸಂಜೆ 4.30ಕ್ಕೆ ಬಹಿರಂಗ ಅಧಿವೇಶನ ನಡೆಯಲಿದ್ದು ನಿರ್ಣಯಗಳ ಮಂಡನೆ ನಡೆಯಲಿದೆ ಎಂದು ಹೇಳಿದರು.
ಸಮ್ಮೇಳನದ ಸಮಾರೋಪ ಸಮಾರಂಭವು ಅದೇ ದಿನ ಸಂಜೆ 5.30ಕ್ಕೆ ನಡೆಯಲಿದ್ದು, ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದರು.
ಜಿಲ್ಲಾ ಕಸಾಪ ಅಧ್ಯಕ್ಷ ಮಹಾಂತೇಶ್ ಮಸ್ಕಿ ಮಾತನಾಡಿ, ಸಮ್ಮೇಳನಕ್ಕೆ ಈಗಾಗಲೇ ಸಕಲ ಸಿದ್ಧತೆಗಳು ಜಾರಿಯಲ್ಲಿದ್ದು ಕೇಂದ್ರ ಪರಿಷತ್ತಿನಿಂದ ಜಿಲ್ಲಾ ಸಮ್ಮೇಳನಕ್ಕೆ 4.50 ಲಕ್ಷ ಲಭ್ಯವಾಗಿದ್ದು, ಇನ್ನುಳಿದಂತೆ ಜಿಲ್ಲೆಯ ಶಾಸಕರು, ಸಂಸದರು, ಗಣ್ಯರು ಹಾಗೂ ಉದ್ಯಮಿಗಳು ಸೇರಿದಂತೆ ಒಟ್ಟು 12 ಲಕ್ಷ ವೆಚ್ಚವಾಗಲಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಜಿಲ್ಲಾ ಕಸಾಪದ ಪದಾಧಿಕಾರಿಗಳಿದ್ದರು.