ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಅಕ್ರಮ ತಡೆಗೆ ಒತ್ತಾಯ

Mainashree
Updated On : 7 Feb 2014, 10:46 am

ಕ.ಪ್ರ. ವಾರ್ತೆ  ರಾಯಚೂರು  ಫೆ.6
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಂಟಿಯಾಗಿ ಜಾರಿಗೆ ತಂದಿರುವ ರಾಜೀವ್ ಆವಾಸ್ ಯೋಜನೆಯಡಿ ಫಲಾನುಭವಿಗಳ ಗುರುತಿಸುವ ಕಾರ್ಯದಲ್ಲಿ ನಿಯಮಗಳನ್ನು ಉಲ್ಲಂಘಿಸಲಾಗುತ್ತಿದೆ. ನಗರಸಭೆಯ ಸದಸ್ಯರಿಗೆ ಹಿಂದೆ ಜಾರಿಯಲ್ಲಿದ್ದ ವಸತಿ ಯೋಜನೆಗಳ ಮಾದರಿ ಅರ್ಜಿ ನೀಡಿ ಸಮೀಕ್ಷೆ ಕೈಗೊಳ್ಳಲಾಗುತ್ತಿದೆ ಎಂದು ಸ್ಲಂ ಜನಾಂದೋಲನ ಕರ್ನಾಟಕ ಸಂಘಟನೆಯ ರಾಜ್ಯ ಸಂಚಾಲಕ ನರಸಿಂಹಮೂರ್ತಿ ಆರೋಪಿಸಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ದೇಶದಲ್ಲಿ ಜಂಟಿಯಾಗಿ ರಾಜೀವ್ ಆವಾಸ್ ಯೋಜನೆ ಜಾರಿಗೆ ತರುತ್ತಿವೆ. ಇದಕ್ಕಾಗಿ ಕೇಂದ್ರವು 33 ಸಾವಿರ ಕೋಟಿ ಹಾಗೂ ರಾಜ್ಯ ಸರ್ಕಾರವು 7,750 ಕೋಟಿ ವೆಚ್ಚ ಮಾಡುತ್ತಿವೆ. ಈ ಮೂಲಕ ಕೊಳಚೆ ಪ್ರದೇಶದಲ್ಲಿ ವಾಸವಾಗಿರುವವರಿಗೆ ವಸತಿ ಸೌಲಭ್ಯ ಕಲ್ಪಿಸುವುದು ಉದ್ದೇಶ ಎಂದು ತಿಳಿಸಿದರು.
ಸಮೀಕ್ಷೆಗೆ ಹಳೆ ಅರ್ಜಿ ಬಳಕೆ: ಈ ಯೋಜನೆ ಜಾರಿ ನಿಟ್ಟಿನಲ್ಲಿ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯ ಸಹಾಯಕ ಎಂಜಿನಿಯರ್ ಮತ್ತು ನಗರಸಭೆ ಪೌರಾಯುಕ್ತರು, ಆಶಾಕಿರಣ ಸಂಸ್ಥೆ ಮಾಹಿತಿಯಂತೆ ಜಂಟಿ ಸಮೀಕ್ಷೆ ನಡೆಸಬೇಕಿದೆ. ಈ ಸಮೀಕ್ಷೆಯ ವರದಿಯಲ್ಲಿ ಕೇಂದ್ರ ಸರ್ಕಾರಕ್ಕೆ ಕಳಿಸಬೇಕಿದೆ. ಆದರೆ ನಗರದಲ್ಲಿ ನಗರಸಭೆಯ ಸದಸ್ಯರಿಗೆ ಈ ಮೊದಲು ಜಾರಿಯಲ್ಲಿದ್ದ ವಿವಿಧ ವಸತಿ ಯೋಜನೆಗಳ ಮಾದರಿ ಅರ್ಜಿಗಳನ್ನು ನೀಡುವ ಮೂಲಕ ಸಮೀಕ್ಷೆ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ನಗರಸಭೆಯ ಸದಸ್ಯರು ಕೊಳಚೆ ಪ್ರದೇಶದ ನಿವಾಸಿಗಳ ಬದಲಿಗೆ ತಮ್ಮ ಬೆಂಬಲಿಗರಿಗೆ ಯೋಜನೆಯ ಸೌಲಭ್ಯ ದೊರಕಿಸುವ ಕಾರ್ಯ ಮಾಡುತ್ತಿದ್ದಾರೆಂದು ದೂರಿದ ಅವರು, ದೊಡ್ಡ ಹಾಗೂ ಮಹಾತ್ವಾಕಾಂಕ್ಷೆ ಯೋಜನೆಯ ಜಾರಿಯಲ್ಲಿ ನಗರಸಭೆ ಅಧಿಕಾರಿಗಳು ಅಕ್ರಮ ಎಸಗುತ್ತಿದ್ದರೂ ಜಿಲ್ಲಾಧಿಕಾರಿಗಳು ಈ ನಿಟ್ಟಿನಲ್ಲಿ ಗಮನಹರಿಸುತ್ತಿಲ್ಲ ಎಂದು ಆರೋಪಿಸಿದರು.
ಅಕ್ರಮಕ್ಕೆ ಕಡಿವಾಣ ಹಾಕಿ: ಕೂಡಲೇ ಜಿಲ್ಲಾಧಿಕಾರಿಗಳು ಎಚ್ಚೆತ್ತು ನಗರಸಭೆಯಲ್ಲಿ ರಾಜೀವ್ ಆವಾಸ್ ಯೋಜನೆ ಜಾರಿಯಲ್ಲಿ ನಡೆಯುತ್ತಿರುವ ಅಕ್ರಮಕ್ಕೆ ಕಡಿವಾಣ ಹಾಕುವ ಕಾರ್ಯ ಮಾಡಬೇಕು. ಅಧಿಕಾರಿಗಳ ಸಭೆ ನಡೆಸಿ ಕೊಳಗೇರಿ ನಿವಾಸಿಗಳಿಗೆ ಯಾವುದೇ ರೀತಿಯ ಅನ್ಯಾಯವಾಗದಂತೆ ಹಾಗೂ ಎಲ್ಲರಿಗೂ ಯೋಜನೆಯ ಲಾಭ ದೊರಕಿಸಿಕೊಡುವ ಕಾರ್ಯ ಮಾಡಲು ಸೂಚಿಸುವಂತೆ ಒತ್ತಾಯಿಸಿದರು.
ಜಿಲ್ಲಾಧಿಕಾರಿಗಳು ಕೂಡಲೇ ಮಧ್ಯಪ್ರವೇಶಿಸಿ ನಗರಸಭೆಯ ಸದಸ್ಯರಿಂದ ನಡೆಸಲಾಗುತ್ತಿರುವ ಕೊಳೆಗೇರಿ ನಿವಾಸಿಗಳ ಕುರಿತು ಸಮೀಕ್ಷೆಗೆ ತಡೆಹಾಕಬೇಕು. ಕೇಂದ್ರ- ರಾಜ್ಯ ಸರ್ಕಾರಗಳ ನಿರ್ದೇಶನದಂತೆಯೇ ಸಮೀಕ್ಷೆಗೆ ತೊಡಗುವಂತಾಗಬೇಕು. ಈ ನಿಟ್ಟಿನಲ್ಲಿ ನಿರ್ಲಕ್ಷ್ಯ ತೋರಿರುವ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯ ಎಇಇ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಜಿಲ್ಲಾಧಿಕಾರಿಗಳು ಕಾಳಜಿ ವಹಿಸಲಿ: ರಾಜೀವ್ ಆವಾಸ್ ಯೋಜನೆಯ ಮಾರ್ಗಸೂಚಿಯಂತೆಯೇ ಸಮೀಕ್ಷೆ ನಡೆಸಬೇಕು. ನಗರಸಭೆ, ಆಶಾಕಿರಣ ಸಂಸ್ಥೆ ಜತೆಗೂಡಿ ಸಮೀಕ್ಷೆ ಕೈಗೊಂಡು ಅರ್ಹ ಫಲಾನುಭವಿಗಳನ್ನು ಗುರುತಿಸಿ ಯೋಜನೆಯ ಲಾಭ ದೊರಕಿಸಿಕೊಡುವ ಕಾರ್ಯ ಜಿಲ್ಲಾಧಿಕಾರಿಗಳು ಕೂಡಲೇ ಮಾಡುವಂತೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ರಾಯಚೂರು ಸ್ಲಂ ನಿವಾಸಿಗಳ ಕ್ರಿಯಾ ವೇದಿಕೆಯ ಪ್ರಮುಖರಾದ ಜನಾರ್ದನ ಹಳ್ಳಿಬೆಂಚಿ, ಚಂದ್ರಶೇಖರ್ ಯಕ್ಲಾಸಪುರ, ತಾಯಣ್ಣ ಹೊಸೂರು, ಎನ್.ಕೆ.ನಾಗರಾಜ್ ಸೇರಿ ಅನೇಕರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement