ದೇವದುರ್ಗ ಸಾಹಿತ್ಯ ಸಮ್ಮೇಳನಕ್ಕೆ ಆಯ್ಕೆ
ದೇವದುರ್ಗ: ತಾಲೂಕು 2ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷರಾಗಿ ಶಾಸಕ ಎ. ವೆಂಕಟೇಶ ನಾಯಕ ಹಾಗೂ ಕೋಶಾಧ್ಯಕ್ಷರಾಗಿ ಜಿ.ಪಂ. ಮಾಜಿ ಸದಸ್ಯ ಎಚ್. ಬಸವರಾಜ್ ನೇಮಕಗೊಂಡಿದ್ದಾರೆ. ಈಚೆಗೆ ಪಟ್ಟಣದಲ್ಲಿ ನಡೆದ ಸಮ್ಮೇಳನದ ಪೂರ್ವಭಾವಿ ಸಭೆಯಲ್ಲಿ ಕನ್ನಡ ಸಾಹಿತ್ಯ ಸಮ್ಮೇಳವನ್ನು ತಾಲೂಕಿನ ಜಾಲಹಳ್ಳಿ ಗ್ರಾಮದಲ್ಲಿ ಮಾ. 2ರಂದು ಆಯೋಜಿಸಲು ನಿರ್ಧರಿಸಲಾಯಿತು. ಮಹಿಳಾ, ಶಿಕ್ಷಣ, ದಲಿತ ಚಳವಳಿ ಹೋರಾಟ, ಕಲೆ,ಸಾಹಿತ್ಯ ಸಂಸ್ಕೃತಿ ಇತಿಹಾಸ, ಬಿಂಬಿಸುವ ಲೇಖನಗಳಿಗೆ ಅವಕಾಶ ನೀಡಲು ತೀರ್ಮಾನಿಸಲಾಯಿತು. ತಾಲೂಕು ಕಸಾಪ ಅಧ್ಯಕ್ಷ ನರಸಿಂಗರಾವ್ ಸರಕೀಲ್,ಪ್ರಕಾಶ ಅಬಕಾರಿ, ಶಿವರಾಜ ಅಕ್ಕಿಕಲ್, ಪ್ರಾಣೇಶ ಶೆಟ್ಟಿ, ಎ. ರಂಗಣ್ಣ ಪಾಟೀಲ್, ಬಸವರಾಜ ಮಡಿವಾಳ, ಎಚ್. ದಂಡಪ್ಪ, ಶಿಕ್ಷಕ ಸಂಘದ ಅಧ್ಯಕ್ಷ ಗುರುಲಿಂಗಯ್ಯ, ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಮಲ್ಲಯ್ಯ, ನೌಕರರ ಸಂಘದ ಅಧ್ಯಕ್ಷ ಹನುಮಂತ್ರಯ ಶಾಖೆ, ಸಾಹಿತಿಗಳಾದ ಅಮರೇಶ ಬಲ್ಲಿದವ್, ಮುನಿಯಪ್ಪ ನಾಗೋಲಿ, ಭೀಮೋಜಿ ಜಗತಾಪ್, ಶಂಕರರಾವ್ ಉಭಾಳೆ ಇದ್ದರು.
ನೀರಾವರಿ ಕಚೇರಿಗೆ ಮುತ್ತಿಗೆ
ಸಿಂಧನೂರು: ತುಂಗಭದ್ರಾ ಎಡದಂಡೆ ನಾಲೆಯ 36ನೇ ಕಾಲುವೆಯ ಕೆಳಭಾಗಕ್ಕೆ ಸಮರ್ಪಕ ನೀರು ಪೂರೈಕೆಯಾಗದೆ ಇರುವುದಕ್ಕೆ ರೊಚ್ಚಿಗೆದ್ದ ರೈತರು ನೀರಾವರಿ ಇಲಾಖೆ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು. ನಗರದ ಪಿಡಬ್ಲ್ಯೂಡಿ ಕ್ಯಾಂಪಿನ ನೀರಾವರಿ ಇಲಾಖೆ ಕಚೇರಿಗೆ ನುಗ್ಗಿದ ರೈತರು, ಸಮರ್ಪಕ ನೀರು ಪೂರೈಕೆಗಾಗಿ ಘೋಷಣೆ ಕೂಗಿದರು. ಒಟ್ಟು 45 ಸಾವಿರ ಎಕರೆ ಭೂಮಿ ಇದ್ದು, ಈಗಾಗಲೇ ಬತ್ತ ನಾಟಿ ಮಾಡಲಾಗಿದೆ. ನಿಗದಿಯಂತೆ 215 ಕ್ಯೂಸೆಕ್ ನೀರು ಪೂರೈಕೆ ಮಾಡುವಲ್ಲಿ ಅಧಿಕಾರಿಗಳು ವಿಫಲವಾಗಿದ್ದಾರೆ. ಮೂರು ವರ್ಷಗಳಿಂದಲೂ ಬೇಸಿಗೆಯಲ್ಲಿ ಗೋಳು ತಪ್ಪಿಲ್ಲ. ಅಧಿಕಾರಿಗಳ ಬೇಜವಾಬ್ದಾರಿಯೇ ಕಾರಣವಾಗಿದೆ. ಮೇಲ್ಭಾಗದ ಪ್ರಭಾವಿ ರೈತರ ಒತ್ತಡಕ್ಕೆ ಮಣಿದಿರುವ ಅಧಿಕಾರಿಗಳು ಹಣದ ಆಮಿಷಕ್ಕೆ ಒಳಗಾಗಿದ್ದಾರೆ. ಕೆಳಭಾಗದ ರೈತರು ಸಂಕಷ್ಟಕ್ಕೆ ಸಿಲುಕುವಂತಾಗಿದೆ ಎಂದು ರೈತರು ಆರೋಪಿಸಿದರು. ಸಾಯಿರಾಂ ಕೃಷ್ಣ, ಬಾಷಾಸಾಬ ಸಾಲಗುಂದಾ, ಚಂದ್ರಗೌಡ ಬೂದಿಹಾಳ, ಶಾಮಿದಸಾಬ, ಭೀಮಪ್ಪ, ಗಾಂಧಿರಾವ್, ಹುಸೇನಪ್ಪ ಇದ್ದರು.