ಸೇವೆ ಕಾಯಂಗೆ ಆಗ್ರಹ
ಕ.ಪ್ರ. ವಾರ್ತೆ ರಾಯಚೂರು ಫೆ.6
ರಾಜ್ಯದ ಒಳಚರಂಡಿ ವಿಭಾಗದಲ್ಲಿ ಕಳೆದ 20 ವರ್ಷಗಳಿಂದ ದುಡಿಯುತ್ತಿರುವ ಪೌರ ಸಫಾಯಿ ಕಾರ್ಮಿಕರ ಸೇವೆಯನ್ನು ಕಾಯಂಗೊಳಿಸುವಂತೆ ರಾಷ್ಟ್ರೀಯ ಸಫಾಯಿ ಮಜ್ದೂರ್ ಕಾಂಗ್ರೆಸ್‌ನ ಸಂಚಾಲಕ ಭಾಸ್ಕರಬಾಬು ಒತ್ತಾಯಿಸಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯ ಸರ್ಕಾರದ ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿಗಳು 2007ರ ಜು.18ರಂದು ಕೈಗೊಂಡ ನಿರ್ಣಯದಂತೆ ಹಾಗೂ ಸುಪ್ರೀಂಕೋರ್ಟಿನ ನಿರ್ದೇಶನದಂತೆ ಕಳೆದ 20 ವರ್ಷಗಳಿಂದ ಯುಜಿಡಿ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಯ ಸೇವೆ ಕಾಯಂಗೊಳಿಸುವಂತೆ ಆಗ್ರಹಿಸಿದರು.
ಸರ್ಕಾರದ ನಿರ್ಲಕ್ಷ್ಯ ಸರಿಯಲ್ಲ: ಸಫಾಯಿ ಕರ್ಮಚಾರಿಗಳು ಸಮಾಜದಲ್ಲಿಯೇ ಅತೀ ಹಿಂದುಳಿದವರಾಗಿದ್ದು, ಆರ್ಥಿಕ, ರಾಜಕೀಯ ಹಾಗೂ ಶೈಕ್ಷಣಿಕ ಸೇರಿ ಎಲ್ಲ ರಂಗಗಳಲ್ಲಿಯೂ ತೀರಾ ಹಿಂದುಳಿದಿದ್ದಾರೆ. ತಮ್ಮ ಮೂಲ ಕಸುಬನ್ನೇ ವೃತ್ತಿಯಾಗಿಸಿಕೊಂಡು ಬದುಕು ಕಳೆಯುತ್ತಿದ್ದಾರೆ. ಅಂಥವರಿಗೆ ಸರ್ಕಾರ ಸೌಲಭ್ಯ ಒದಗಿಸುವಲ್ಲಿ ನಿರ್ಲಕ್ಷ್ಯ ತೋರುತ್ತಿದೆ ಎಂದು ದೂರಿದರು.
ಈ ಹಿನ್ನೆಲೆಯಲ್ಲಿ ಕೂಡಲೇ ದಿನಗೂಲಿಯಲ್ಲಿ ನಗರಸಭೆಯ ಒಳಚರಂಡಿ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕರನ್ನು ತಕ್ಷಣವೇ ಕಾಯಂಗೊಳಿಸಬೇಕು. ಜನಸಂಖ್ಯೆಗೆ ಅನುಗುಣವಾಗಿ ಪೌರಕಾರ್ಮಿಕರನ್ನು ನೇಮಿಸಿಕೊಳ್ಳಬೇಕು. ನಿಯಮದಂತೆ ಪ್ರತಿ 500 ಜನರಿಗೆ ಒಬ್ಬ ಸಫಾಯಿ ಕಾರ್ಮಿಕನಿರಬೇಕು. ಆದರೆ ನಗರಸಭೆಯಲ್ಲಿ ಇಂಥ ನಿಯಮ ಜಾರಿಯಲ್ಲಿಲ್ಲ ಎಂದು ಟೀಕಿಸಿದರು.
ರಾಜಕೀಯ ಮಾನ್ಯತೆ ಕೊಡಿ: ಹೈ.ಕ. ವಿಭಾಗಕ್ಕೆ ಸೇರಿದ ಸಫಾಯಿ ಕಾರ್ಮಿಕ ಮುಖಂಡರನ್ನು ರಾಜ್ಯದ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷರಾಗಿ ನೇಮಿಸಬೇಕು. ಸಫಾಯಿ ಕರ್ಮಚಾರಿ ಅವಲಂಬಿತರಿಗೆ ನ್ಯಾಯಬೆಲೆ ಅಂಗಡಿಗಳನ್ನು ಮಂಜೂರು ಮಾಡಬೇಕು. ಸಫಾಯಿ ಕರ್ಮಚಾರಿ ಜನಾಂಗಕ್ಕೆ ಸೇರಿದವರನ್ನು ರಾಜಕೀಯ ಕ್ಷೇತ್ರದಲ್ಲಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಎಂಎಲ್ಸಿ ಸ್ಥಾನಕ್ಕೆ ಆಯ್ಕೆ ಮಾಡುವಂತೆ ಒತ್ತಾಯಿಸಿದರು.
ದಿ. ಸಾಲಪ್ಪನವರ ಸಮಿತಿಯು ಸಫಾಯಿ ಕರ್ಮಚಾರಿಗಳಿಗೆ ಸಂಬಂಧಿಸಿದಂತೆ ನೀಡಿರುವ ವರದಿಯನ್ನು ಕೂಡಲೇ ಜಾರಿಗೆ ತರಬೇಕೆಂದು ಆಗ್ರಹಿಸಿದ ಅವರು, ಸಫಾಯಿ ಕರ್ಮಚಾರಿಗಳ ಹಿತ ಕಾಯುವ ಕಾರ್ಯ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಮಾಡಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಸಂಘಟನೆಯ ಪ್ರಮುಖರಾದ ಗೀತಾ, ರಾಜೇಶ್ ಕುಮಾರ್ ಸೇರಿದಂತೆ ಅನೇಕರಿದ್ದರು.