2 ತಿಂಗಳಲ್ಲಿ ಡಿಕೆಶಿ ನಿಜಬಣ್ಣ ಬಯಲು
ರಾಯಚೂರು: ಪ್ರಾಮಾಣಿಕ ರಾಜಕಾರಣಿ, ಸಮಾಜವಾದಿ ಹಿನ್ನೆಲೆಯುಳ್ಳವರು ಎಂದು ಕರೆಯಿಸಿಕೊಂಡಿರುವ ಸಿಎಂ ಸಿದ್ದರಾಮಯ್ಯ ಅವರು ಡಿ.ಕೆ. ಶಿವಕುಮಾರ್ ಹಾಗೂ ರೋಷನ್ ಬೇಗ್ರಂಥ ಕಳಂಕಿತರನ್ನು ರಕ್ಷಿಸುತ್ತಿರುವುದು ವಿಷಾದನೀಯ ಎಂದಿರುವ ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್.ಆರ್. ಹಿರೇಮಠ ಅವರು, ತಾವು ನಡೆಸುತ್ತಿರುವ ಕಾನೂನಾತ್ಮಕ ಹೋರಾಟದಿಂದಾಗಿ ಮುಂದಿನ ಎರಡು ತಿಂಗಳಲ್ಲಿ ಕಳಂಕಿತ ಸಚಿವರ ನಿಜಬಣ್ಣ ಬಯಲಾಗಲಿದೆ ಎಂದು ಹೇಳಿದರು.
ನಗರದಲ್ಲಿ ಶುಕ್ರವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಿಎಂ ಸಿದ್ದರಾಮಯ್ಯ ಅವರು ತಮ್ಮ ಹುದ್ದೆ ಉಳಿಸಿಕೊಳ್ಳುವ ಭರದಲ್ಲಿ ಕಳಂಕಿತರನ್ನು ರಕ್ಷಿಸುವ ಕಾರ್ಯ ಮಾಡುತ್ತಿದ್ದಾರೆ. ಅವರು ತಮ್ಮ ಹಿಂದಿನ ಸಚ್ಚಾರಿತ್ರ್ಯ ಮುಖ್ಯವೋ ಅಥವಾ ಸಿಎಂ ಸ್ಥಾನ ಅವಶ್ಯಕವೋ ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳುವುದು ಹೆಚ್ಚು ಅಗತ್ಯತೆಯಿದೆ ಎಂದರು.
ಲೋಕಾಯುಕ್ತರಿಗೆ ವಹಿಸಿರುವುದು ಸರಿಯಲ್ಲ: ರಾಜಕೀಯವಾಗಿ ಯಾರು ಎಷ್ಟೇ ಪ್ರಭಾವಿಯಾಗಿದ್ದರೂ ಕಾನೂನಿನ ಮುಂದೆ ಎಲ್ಲರೂ ಸಮಾನರು ಎಂಬುದು ಈಗಾಗಲೇ ಅನೇಕ ಸಂದರ್ಭ ಸಾಬೀತಾಗಿದೆ. ಅದೇ ಹಿನ್ನೆಲೆಯಲ್ಲಿ ಕಾನೂನಾತ್ಮಕ ಹೋರಾಟ ನಡೆಸುತ್ತಿರುವ ಸಮಾಜ ಪರಿವರ್ತನಾ ಸಮುದಾಯದ ಪ್ರಯತ್ನದಿಂದಾಗಿ ಇನ್ನೆರಡು ತಿಂಗಳಲ್ಲಿ ಸಚಿವ ಡಿ.ಕೆ. ಶಿವಕುಮಾರ್ ನಡೆಸಿರುವ ಅಕ್ರಮದ ಹಿನ್ನೆಲೆ ನಿಜಬಣ್ಣ ಬಯಲಾಗಲಿದೆ ಎಂದರು.
ಬಳ್ಳಾರಿಯ ಜಿ. ಜನಾರ್ದನ ರೆಡ್ಡಿಯವರಿಗಿಂತ ಹಾಲಿ ಕಾಂಗ್ರೆಸ್ ಇಂಧನ ಸಚಿವ ಡಿ.ಕೆ. ಶಿವಕುಮಾರ್ ಅಕ್ರಮ ಗಣಿಗಾರಿಕೆ, ಭೂ ಒತ್ತುವರಿ ಮತ್ತಿತರೆ ಅಕ್ರಮಗಳಲ್ಲಿ ಮುಂಚೂಣಿಯಲ್ಲಿದ್ದಾರೆ. ಅಂಥವರನ್ನು ಸಂಪುಟಕ್ಕೆ ಸೇರಿಸಿಕೊಂಡಿರುವ ಸಿಎಂ ಸಿದ್ದರಾಮಯ್ಯ ಅವರು ಕಳಂಕಿತರ ವಿರುದ್ಧದ ಆರೋಪಗಳ ತನಿಖೆಯನ್ನು ಲೋಕಾಯುಕ್ತರಿಗೆ ವಹಿಸಿರುವುದು ಸರಿಯಲ್ಲ ಎಂದು ಟೀಕಿಸಿದರು.
ಸ್ವಜನಪಕ್ಷಪಾತ: ಸಿಎಂ ಸಿದ್ದರಾಮಯ್ಯ ಅವರು ಭ್ರಷ್ಟಾಚಾರ ಮುಕ್ತ ಆಡಳಿತ, ಪಾರದರ್ಶಕ ಕಾರ್ಯನಿರ್ವಹಣೆ ಮಾಡುವವರಾಗಿದ್ದರೆ ಸಚಿವ ಡಿ.ಕೆ. ಶಿವಕುಮಾರ್ ವಿರುದ್ಧ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕಿತ್ತು. ಸಿಎಂ ವರ್ತನೆಯು ಅವರು ಕಳಂಕಿತರನ್ನು ರಕ್ಷಿಸುತ್ತಿರುವುದನ್ನು ಸ್ಪಷ್ಟಗೊಳಿಸುತ್ತದೆ ಎಂದು ಆರೋಪಿಸಿದರು.
ಸಿಎಂ ಸಿದ್ದರಾಮಯ್ಯ ಅವರು ರಾಜಕೀಯ ಲಾಭಕ್ಕಾಗಿ ಒಂದೆಡೆ ಬೆಲೆಕೇರಿ ಅದಿರು ಅಕ್ರಮ ಸಾಗಣೆಯ ವಿಚಾರದ ತನಿಖೆ ಸಿಬಿಐಗೆ ಒಪ್ಪಿಸಿದ್ದರೆ, ಅದೇ ಮತ್ತೊಂದೆಡೆ ಮೈಸೂರು ಮಿನರಲ್ಸ್ನಲ್ಲಿ ಡಿ.ಕೆ. ಶಿವಕುಮಾರ್ ನಡೆಸಿರುವ ಕೋಟಿ ಕೋಟಿ ರು. ಲೂಟಿಯ ತನಿಖೆ ಲೋಕಾಯುಕ್ತರಿಗೆ ಒಪ್ಪಿಸಿದ್ದಾರೆ. ಇದು ಅವರು ತೋರಿದ ಸ್ವಜನಪಕ್ಷಪಾತಕ್ಕೆ ಉದಾಹರಣೆಯಾಗಿದೆ ಎಂದು ಲೇವಡಿ ಮಾಡಿದರು.
ಒತ್ತುವರಿ ಬಹಿರಂಗ: ರಾಜ್ಯದಲ್ಲಿ ಭೂ ಒತ್ತುವರಿಗೆ ಸಂಬಂಧಿಸಿ ಬಾಲಸುಬ್ರಹ್ಮಣ್ಯ ನೀಡಿರುವ 2004ರ ವರದಿಯಲ್ಲಿ 4 ಲಕ್ಷ ಎಕರೆ ಪ್ರದೇಶ ಬೆಂಗಳೂರು ಹಾಗೂ ಅದರ ಸುತ್ತಲಿನ ಪ್ರದೇಶದಲ್ಲಿ ಒತ್ತುವರಿಯಾಗಿರುವುದು ಬಹಿರಂಗವಾಗಿದೆ. ಆದರೆ ಈ ಬಗ್ಗೆ ಸರ್ಕಾರ ಗಂಭೀರ ಕಾರ್ಯಾಚರಣೆ ನಡೆಸುತ್ತಿಲ್ಲ ಎಂದು ಅವರು ಟೀಕಿಸಿದರು.
ಮಾಜಿ ಸ್ಪೀಕರ್ ಹಾಗೂ ಹಾಲಿ ಶಾಸಕ ರಮೇಶಕುಮಾರ್ ಅವರು 2003ರಿಂದ 61.39 ಎಕರೆ ಪ್ರದೇಶ ಒತ್ತುವರಿ ಮಾಡಿಕೊಂಡಿದ್ದಾರೆ. ಅದೇ ರೀತಿ ಅನಿಲ್ ಲಾಡ್ ಮತ್ತು ಕುಟುಂಬದವರು 47 ಎಕರೆ ಪ್ರದೇಶ ಒತ್ತುವರಿ ಮಾಡಿಕೊಂಡರೆ, ಮಾಜಿ ಸಿಎಂ ಎಸ್.ಎಂ. ಕೃಷ್ಣ ಅವರ ಅಳಿಯ ಸಿದ್ದಾರ್ಥ ಹೆಗಡೆ ಅವರೂ ಸಹ ಕೊಪ್ಪ ಬಳಿ 60ಕ್ಕಿಂತ ಹೆಚ್ಚು ಎಕರೆ ಅರಣ್ಯ ಜಮೀನು ಒತ್ತುವರಿ ಮಾಡಿದ್ದಾರೆಂದು ಆರೋಪಿಸಿದರು.
ಮತ್ತೆ ಜಾಗೃತಿ: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಕಳಂಕಿತ ಡಿ.ಕೆ. ಸುರೇಶ್ ಅವರೂ ಸೇರಿದಂತೆ ವಿವಿಧ ಪಕ್ಷಗಳು ಕಳಂಕಿತರಿಗೆ ಸ್ಪರ್ಧೆಗೆ ಅವಕಾಶ ನೀಡಿದಲ್ಲಿ ಮತದಾರರ ಜಾಗೃತಿ ಮಾಡುವ ಕಾರ್ಯ ಕೈಗೊಳ್ಳುವುದಾಗಿ ಹೇಳಿದ ಅವರು, ಆಮ್ ಆದ್ಮಿ ಪಾರ್ಟಿ ಸದ್ಯದ ಪರಿಸ್ಥಿತಿಗೆ ಏಕೈಕ ಪರ್ಯಾಯ ರಾಜಕೀಯ ಶಕ್ತಿಯಾಗಿದೆ. ಅಂಥ ರಾಜಕೀಯ ಆಂದೋಲನಕ್ಕೆ ತಮ್ಮ ಬೆಂಬಲವಿದೆ ಎಂದು ಹೇಳಿದರು.
ಜೆಡಿಎಸ್ ಬಗ್ಗೆ ತಮಗೆ ಯಾವುದೇ ಮೃದು ಧೋರಣೆಯಿಲ್ಲ. ತಾವು ಸೂಕ್ತ ದಾಖಲೆ ಆಧಾರವಿಲ್ಲದೇ ಆರೋಪ ಹೊರಿಸುವುದಿಲ್ಲ. ಜೆಡಿಎಸ್ ಪಕ್ಷದ ಹಿರಿಯ ನಾಯಕರ ವಿರುದ್ಧವೂ ಅಕ್ರಮಗಳ ದಾಖಲೆಗಳ ಕಲೆಹಾಕುತ್ತಿದ್ದು, ಶೀಘ್ರದಲ್ಲಿಯೇ ಅವರ ವಿರುದ್ಧವೂ ಕಾನೂನಾತ್ಮಕ ಹೋರಾಟ ನಿಶ್ಚಿತ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಜನಸಂಗ್ರಾಮ ಪರಿಷತ್ತಿನ ಪ್ರಮುಖರಾದ ಡಾ. ವಿ.ಎ. ಮಾಲಿಪಾಟೀಲ್, ಅಕ್ಬರ್ ಹುಸೇನ್, ಖಾಜಾ ಅಸ್ಲಂಪಾಷಾ, ಬಂದಪ್ಪಗೌಡ ಸೇರಿ ಅನೇಕರಿದ್ದರು.