ಪ್ರತಿಷ್ಠೆಗಾಗಿ ಇಂಗ್ಲಿಷ್ ವ್ಯಾಮೋಹ ಸಲ್ಲದು
ಚಿತ್ತಾಪುರ: ಕನ್ನಡಾಂಬೆಯ ಅನ್ನ, ಗಾಳಿ, ನೀರು ಕುಡಿದು ಕನ್ನಡದ ಹಿರಿಮೆಯ ಬಗ್ಗೆ ಹೆಮ್ಮೆ ಪಡುವ ಬದಲು ಇಂಗ್ಲೀಷ್ ವ್ಯಾಮೋಹಕ್ಕೆ ಒಳಗಾಗುತ್ತಿರುವ ಜನರು ಕನ್ನಡವನ್ನು ಮಾತನಾಡಿದರೆ ಪ್ರತಿಷ್ಠೆ ಕಡಿಮೆಯಾಗುತ್ತದೆ ಎಂಬ ಮನೋಭಾವ ಬೆಳೆಸಿಕೊಂಡು ಕನ್ನಡಕ್ಕೆ ಚ್ಯುತಿ ತರುತ್ತಿದ್ದಾರೆ. ಇದು ಸಲ್ಲದು ಎಂದು ಹಿರಿಯ ಸಾಹಿತಿ ಆರ್.ಕೆ. ಹುಡಗಿ ಹೇಳಿದರು.
ಅವರು ಗುರುವಾರ ರಾತ್ರಿ ಕನ್ನಡ ನುಡಿ ಜಾಗೃತಿ ಜಾಥಾದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಾ, ಕನ್ನಡ ಭಾಷೆಯು ವೈವಿಧ್ಯತೆಯಲ್ಲಿ ಹಾಗೂ ಸಂಸ್ಕೃತಿಯಲ್ಲಿ ಶ್ರೀಮಂತಿಕೆಯನ್ನು ಹೊಂದಿದೆ. ಇದಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಆದರೆ ಬ್ರಿಟಿಷರು ದೇಶ ಬಿಟ್ಟು ಹೋಗುವಾಗ ಬಿಟ್ಟುಹೋಗಿರುವ ಇಂಗ್ಲೀಷ್ ಭಾಷೆಗೆ ನಾವು ಮಾರುಹೋಗಿ ಅದರ ವ್ಯಾಮೋಹಕ್ಕೆ ಒಳಗಾಗಿ ಕನ್ನಡನಾಡಿಗೆ ದ್ರೋಹ ಮಾಡುತ್ತಿದ್ದೇವೆ. ನಾನು ಒಬ್ಬ ಅಂಗ್ಲ ಭಾಷೆ ಉಪನ್ಯಾಸಕನಾಗಿ ಸೇವೆ ಸಲ್ಲಿಸಿದ್ದರೂ ನನ್ನ ಮಕ್ಕಳಿಗೆ ಇಂಗ್ಲೀಷ್ ಮಾಧ್ಯಮ ಶಿಕ್ಷಣ ಕೋಡಿಸುವ ಅರ್ಥಿಕ ಸಾಮರ್ಥ್ಯ ಇದ್ದರೂ ಕೂಡಾ ನಾನು ಅದರ ವ್ಯಾಮೋಹಕ್ಕೆ ಒಳಗಾಗಾದೆ ನನ್ನ ಮಕ್ಕಳನ್ನು ಸರ್ಕಾರಿ ಕನ್ನಡ ಮಾಧ್ಯಮ ಶಾಲೆಯಲ್ಲಿ ಕಲಿಸಿದ್ದೇನೆ. ಇಂಗ್ಲೀಷ್ ಕಲಿಯುವುದು ತಪ್ಪಲ್ಲ. ಕನ್ನಡ ಭಾಷೆಗೆ ಮೊದಲ ಅದ್ಯತೆ ನೀಡಿವುದರ ಜೊತೆಗೆ ಅನ್ಯ ಭಾಷೆ ಕಲಿಯಿರಿ. ಕನ್ನಡ ಭಾಷೆ ಉಳಿಸಿ ಬೆಳೆಸಲು ಎಲ್ಲ ಪಾಲಕರು ತಮ್ಮ ಮಕ್ಕಳನ್ನು ಕನ್ನಡ ಭಾಷೆಯಲ್ಲಿ ಶಿಕ್ಷಣ ಕೊಡಿಸಿ ಭಾಷೆ ಬೆಳೆಸಬೇಕು ಎಂದು ಕರೆ ನೀಡಿದರು.
ಗ್ರಾಮಭಾಗದಲ್ಲಿ ಕನ್ನಡ: ಕಾರ್ಯಕ್ರಮದ ಉದ್ಘಾಟನೆ ಹಾಗೂ ಅಧ್ಯಕ್ಷತೆ ವಹಿಸಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ನಗರವಾಸಿಗಳು ಇಂಗ್ಲಿಷ್ ವ್ಯಾಮೋಹಕ್ಕೆ ಒಳಗಾಗಿದ್ದಾರೆ. ಆದರೆ ನಮ್ಮ ಗ್ರಾಮೀಣ ಭಾಗದಲ್ಲಿ ಕನ್ನಡವು ಇಂದಿಗೂ ಪ್ರಜ್ವಲಿಸುತ್ತಿದೆ. ಇದನ್ನು ಹೋಗಲಾಡಿಸಲು ಯಾರಿಂದಲೂ ಸಾಧ್ಯವಿಲ್ಲ. ಇದನ್ನು ನಗರವಾಸಿಗಳು ಅಳವಡಿಸಿಕೊಂಡು ಕನ್ನಡ ಉಳಿಸಿ ಬೆಳೆಸಲು ಕರೆ ನೀಡಿದರು.
ಪ್ರೋತ್ಸಾಹ: ಸರೋಜಿನಿ ಮಹಿಷಿ ವರದಿಯಂತೆ ಕನ್ನಡಿಗರಿಗೆ ಉದ್ಯೋಗವಕಾಶ ಒದಗಿಸಲು 150ಕ್ಕೂ ಹೆಚ್ಚಿನ ಕಾರ್ಖಾನೆಗಳಿಗೆ ಬೇಟಿ ನೀಡಿ ಪರೀಶಿಲಿಸಲಾಗಿದೆ. ರಾಜ್ಯದ್ಯಂತ ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿ ಅತಿ ಹೆಚ್ಚು ಅಂಕ ಗಳಿಸಿದ ಮಕ್ಕಳಿಗೆ ಪ್ರೋತ್ಸಾಹಿಸುವ ಕೆಲಸ ನಿರಂತರವಾಗಿ ಪ್ರಾಧಿಕಾರದಿಂದ ಮಾಡಲಾಗುತ್ತಿದೆ ಎಂದು ಹೇಳಿದರು.
ತಹಸೀಲ್ದಾರ ಮಲ್ಲೇಶ ತಂಗಾ ಸ್ವಾಗತಿಸಿದರು. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಕೆ. ಮುರಳೀಧರ ಹಾಗ ವಿಜಯಕುಮಾರ ಲೋಡ್ಡನೋರ ಮಾತನಾಡಿದರು. ಚಿತ್ತಾಪುರ ಪುರಸಭೆ ಅಧ್ಯಕ್ಷ ಶಿವಕಾಂತ ಬೆಣ್ಣೂರಕರ, ನಾಗರಾಜ ಕಡಬೂರ, ಹಸೀನಾ ಬೇಗಂ, ಭೀಮಣ್ಣ ಸಾಲಿ, ಬಸವರಾಜ ಜಿರಡೆ, ನಂದಕುಮಾರ ಕುಲ್ಕರ್ಣಿ, ಶಿವಶರಣಪ್ಪ ಬನ್ನಿಕಟ್ಟಿ ಸೇರಿದಂತೆ ಇನ್ನಿತರರು ವೇದಿಕೆಯಲ್ಲಿದ್ದರು. ಉಪನ್ಯಾಸಕ ಪಂಡಿತ ನಿರೂಪಿಸಿದರು. ಶಿರಸ್ತೆದಾರ ಶ್ರೀನಿವಾಸ ಚಾಪೆಲ್ ವಂದಿಸಿದರು.
ಕಾರ್ಯಕ್ರಮಕ್ಕೂ ಮುನ್ನ ವಿವಿಧ ಸಾಂಸ್ಕೃತಿಕ ತಂಡಗಳಿಂದ ಪೂಜಾ ಕುಣಿತ, ಬಿಲ್ಲುಗಾಸೆ, ಕರತಲಾ ಮೇಳ, ಡೊಳ್ಳು ಕುಣಿತದ ಪ್ರದರ್ಶನದ ಮೂಲಕ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಜನಮನ ಸೆಳೆಯಿತು.