ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಬೃಹತ್ ವಿದ್ಯುತ್ ಗೋಪುರ ಸ್ಥಳಾಂತರಕ್ಕೆ ಆಗ್ರಹಿಸಿ ಧರಣಿ

Vishwanath S
Updated On : 8 Feb 2014, 1:23 am

ಕ.ಪ್ರ. ವಾರ್ತೆ ,  ರಾಯಚೂರು ,  ಫೆ.7
ತಾಲೂಕಿನ ಹರಳಿಬೆಂಚಿ, ಆಶಾಪುರ ಗ್ರಾಮದ ಜನನಿಬಿಡ ಪ್ರದೇಶದಲ್ಲಿ ಪವರ್‌ಗ್ರಿಡ್ ಕಾರ್ಪೋರೇಷನ್‌ನ 765 ಕೆ.ವಿ. ವಿದ್ಯುತ್ ಗೋಪುರಗಳನ್ನು ಸ್ಥಾಪಿಸಿರುವುದನ್ನು ವಿರೋಧಿಸಿ ತಾಲೂಕಿನ ಅಸ್ಕಿಹಾಳ ಬಳಿ ಶುಕ್ರವಾರ ರಾಯಚೂರು ಲೋಕಸಭೆ ಯುವ ಕಾಂಗ್ರೆಸ್ ಸಮಿತಿಯ ಕಾರ್ಯಕರ್ತರು ಧರಣಿ ನಡೆಸಿದರು.
ಪವರ್‌ಗ್ರಿಡ್ ಕಾರ್ಪೋರೇಷನ್ ಆಫ್ ಇಂಡಿಯಾದ ವಿದ್ಯುತ್ ಕೇಂದ್ರದ ಎದುರು ಧರಣಿ ನಡೆಸಿ ಜಿಲ್ಲಾಧಿಕಾರಿ ಮೂಲಕ ಪವರ್‌ಗ್ರಿಡ್‌ನ ಮುಖ್ಯ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿ, ತಾಲೂಕಿನ ಹರಳಿಬೆಂಚಿ, ಆಶಾಪುರ ಗ್ರಾಮಗಳ ಜನನಿಬಿಡ ಪ್ರದೇಶಕ್ಕೆ ಹೊಂದಿಕೊಂಡಂತೆಯೇ ಪವರ್‌ಗ್ರಿಡ್‌ಗೆ ಸೇರಿದ 765 ಕೆ.ವಿ. ವಿದ್ಯುತ್ ತಂತಿಗಳಿರುವ ಬೃಹತ್ ಗೋಪುರಗಳನ್ನು ಅಳವಡಿಸಲಾಗಿದೆ ಎಂದು ದೂರಿದರು.
ಗ್ರಾಮಗಳ ಬ್ರಹ್ಮಯ್ಯ ನಗರ, ಬ್ರಹ್ಮಯ್ಯ ಗುಡಿ ದೇವಾಲಯ, ಆಂಜನೇಯ್ಯ ದೇವಸ್ಥಾನ ಮತ್ತು ಸರ್ಕಾರಿ ಶಾಲೆಗಳು, ಹರಿ ಜನರಿಗೆಂದು ಕೊರೆಯಿಸಿರುವ ಕೊಳವೆಬಾವಿಗಳ ಮೇಲ್ಭಾಗದಲ್ಲಿ ವಿದ್ಯುತ್ ಮಾರ್ಗದ ತಂತಿಗಳು ಹಾದುಹೋಗಿದ್ದು ಅದರಿಂದ ಜನತೆ ಭಯದಲ್ಲಿಯೇ ಬದುಕು ಸಾಗಿಸುವಂತಾಗಿದೆ ಎಂದು ದೂರಿದರು.
ಅವೈಜ್ಞಾನಿಕವಾಗಿ ವಿದ್ಯುತ್ ಗೋಪುರ: ಗ್ರಾಮದಲ್ಲಿ ಅಳವಡಿಸಿರುವ ವಿದ್ಯುತ್ ಮಾರ್ಗ ಮತ್ತು ಗೋಪುರಗಳಿಂದಾಗಿ ಜನತೆ ಭೀತಿಗೊಳಗಾಗಿ ಈಗಾಗಲೇ ಅನೇಕ ಬಾರಿ ಗೋಪುರಗಳನ್ನು ಸ್ಥಳಾಂತರಿಸುವಂತೆ ಒತ್ತಾಯಿಸಿ ಹೋರಾಟ ಮಾಡಿ ಪವರ್‌ಗ್ರಿಡ್ ಕಾರ್ಪೋರೇಷನ್ ಅಧಿಕಾರಿಗಳಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಟೀಕಿಸಿದರು.
ಅವೈಜ್ಞಾನಿಕವಾಗಿ ವಿದ್ಯುತ್ ಗೋಪುರಗಳನ್ನು ನಿರ್ಮಿಸಿದ್ದು, ಅದರಿಂದ ಗ್ರಾಮಸ್ಥರಿಗೆ ಮುಂದಿನ ದಿನಗಳಲ್ಲಿ ಅಪಾಯ ಎದುರಾಗುವ ಸಾಧ್ಯತೆಯಿದೆ. ಜಿಲ್ಲಾಧಿಕಾರಿ ಈಗಾಗಲೇ ಈ ಬಗ್ಗೆ ಪರಿಶೀಲಿಸಿದ್ದು, ವಾಸ್ತವದ ಬಗ್ಗೆ ಅವರ ಗಮನಕ್ಕೆ ಬಂದಿದೆ. ಅದರಂತೆ ಜಿಲ್ಲಾಧಿಕಾರಿ ಸಹ ಪವರ್‌ಗ್ರಿಡ್ ಕಾರ್ಪೋರೇಷನ್ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಯಿಸಿ ಸಮಸ್ಯೆಯ ದರ್ಶನ ಮಾಡಿದ್ದಾರೆ. ಆದರೆ ಕ್ರಮ ಮಾತ್ರ ಇದುವರೆಗೆ ಜರುಗಿಲ್ಲ ಎಂದು ಆರೋಪಿಸಿದರು.
ಉಗ್ರ ಹೋರಾಟದ ಎಚ್ಚರಿಕೆ: ಕೂಡಲೇ ಪವರ್‌ಗ್ರಿಡ್‌ಗೆ ಸೇರಿ ಗೋಪುರಗಳನ್ನು ಗ್ರಾಮಗಳಿಂದ ದೂರದಲ್ಲಿ ಜನರಹಿತ ಪ್ರದೇಶಕ್ಕೆ ಸ್ಥಳಾಂತರಿಸಬೇಕು. ಜನತೆಗೆ ಸುರಕ್ಷತೆಯ ಭಾವನೆ ಮೂಡುವಂಥ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ ಅವರು, ಈ ನಿಟ್ಟಿನಲ್ಲಿ ಈಗಾಗಲೇ ರಾಜ್ಯ ಇಂಧನ ಸಚಿವ ಡಿ.ಕೆ. ಶಿವಕುಮಾರ್ ಅವರಿಗೂ ಮನವಿ ಮಾಡಲಾಗಿದೆ ಎಂದು ತಿಳಿಸಿದರು.
ಈ ಬಗ್ಗೆ ಪವರ್‌ಗ್ರಿಡ್ ಕಾರ್ಪೋರೇಷನ್ ಆಫ್ ಇಂಡಿಯಾದ ಮೇಲಧಿಕಾರಿಗಳು ತಮ್ಮ ನಿರ್ಲಕ್ಷ್ಯದ ವರ್ತನೆ ಮುಂದುವರಿಸಿದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುತ್ತದೆ ಎಂದು ಎಚ್ಚರಿಸಿದರು.
ಲೋಕಸಭೆ ಯುವ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಎ. ವಸಂತಕುಮಾರ್, ಉಪಾಧ್ಯಕ್ಷ ರಾಜೇಶ್ ಮಡಿವಾಳ, ಪ್ರಧಾನ ಕಾರ್ಯದರ್ಶಿ ಹರಿಪ್ರಸಾದ್, ನಗರ ಅಧ್ಯಕ್ಷ ಅಪ್ಸರ್ ಹುಸೇನ್, ರಾಘವೇಂದ್ರ, ಪ್ರವೀಣಕುಮಾರ್, ನೀತಿರಾಜ್, ರಾಜೇಶ್, ವೆಂಕಟೇಶ್, ಮಲ್ಲಿಕಾರ್ಜುನ ಭಂಡಾರಿ, ಶಂಕರ್ ಹೊಸೂರು, ಅರುಣ್ ಧೋತರಬಂಡಿ ಸೇರಿ ಅನೇಕರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement