ಭೂ ಒತ್ತುವರಿ ಅಕ್ರಮ- ಕಳಂಕಿತರ ಸಭೆಗೆ ಸ್ಪೀಕರ್ ನೇತೃತ್ವ: ಆರೋಪ
ರಾಯಚೂರು: ಭೂ ಒತ್ತುವರಿ ಅಕ್ರಮಕ್ಕೆ ಸಂಬಂಧಿಸಿ ಆಡಳಿತರೂಢ ಕಾಂಗ್ರೆಸ್ ಪಕ್ಷದ ಸಚಿವರು, ಶಾಸಕರು ಹಾಗೂ ಪ್ರಮುಖರು ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರ ನೇತೃತ್ವದಲ್ಲಿ ಕಳೆದ ತಿಂಗಳು ಸಭೆ ಸೇರಿ ಒತ್ತುವರಿ ತೆರವು ವಿಳಂಬಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಲು ನಿರ್ಧರಿಸಿದ್ದಾರೆಂದು ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್.ಆರ್. ಹಿರೇಮಠ ಗಂಭೀರ ಆರೋಪ ಮಾಡಿದ್ದಾರೆ.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರನ್ನು ಹೊರತುಪಡಿಸಿ ಉಳಿದ ಬಹುತೇಕ ಎಲ್ಲ ಸಚಿವರು, ಶಾಸಕರು ಹಾಗೂ ಪ್ರಮುಖರು ಪಾಲ್ಗೊಂಡಿದ್ದಾರೆ. ಈ ಬಗ್ಗೆ ತಮ್ಮ ಬಳಿ ಆಧಾರಗಳಿದ್ದು, ಶೀಘ್ರದಲ್ಲಿಯೇ ಈ ಬಗ್ಗೆ ನ್ಯಾಯಾಲಯದ ಮುಂದೆ ದಾಖಲೆ ಹಾಜರುಪಡಿಸುವುದಾಗಿ ಹೇಳಿದರು.
2013ರ ಜೂ.11ರಂದು ಬೆಂಗಳೂರಿನಲ್ಲಿ ಸಭೆ: ಬಾಲಸುಬ್ರಹ್ಮಣ್ಯ ವರದಿಯಂತೆ ಬೆಂಗಳೂರು ಸುತ್ತಲೂ 4 ಲಕ್ಷ ಎಕರೆ ಭೂ ಒತ್ತುವರಿಯಾಗಿದೆ. ಅದರಲ್ಲಿ ಅನೇಕ ಪ್ರಭಾವಿ ರಾಜಕೀಯ ವ್ಯಕ್ತಿಗಳು ಶಾಮೀಲಾಗಿದ್ದಾರೆ. ಈ ಬಗ್ಗೆ ಗಂಭೀರ ಕಾರ್ಯಾಚರಣೆ ಕೈಗೊಳ್ಳುವತ್ತ ಸಿಎಂ ಸಿದ್ದರಾಮಯ್ಯ ಮುಂದಾಗುತ್ತಿಲ್ಲ ಎಂದು ಟೀಕಿಸಿದರು.
ಸ್ಪೀಕರ್ ಕಾಗೋಡು ತಿಮ್ಮಪ್ಪ ನೇತೃತ್ವದಲ್ಲಿ ಒತ್ತುವರಿಯ ಮಾಡಿಕೊಂಡಿರುವ ಎಲ್ಲರೂ 2013ರ ಜೂ.11ರಂದು ಬೆಂಗಳೂರಿನಲ್ಲಿ ಸಭೆ ಸೇರಿ ತೆರವು ಕಾರ್ಯಾಚರಣೆ ವಿಳಂಬ ಮಾಡುವಂತೆ ಅಧಿಕಾರಿಗಳ ಮೇಲೆ ಒತ್ತಡ ತರಲು ನಿರ್ಣಯ ಕೈಗೊಂಡಿದ್ದು, ಅದರಂತೆಯೇ ಸರ್ಕಾರ ವರ್ತಿಸುತ್ತಿದೆ ಎಂದು ಆರೋಪಿಸಿದರು.
ಸಂದಿಗ್ಧ ಪರಿಸ್ಥಿತಿ: ರಾಜ್ಯದ ವಿವಿಧೆಡೆ ರಾಜಕೀಯ ನಾಯಕರು ನಡೆಸಿರುವ ಅಕ್ರಮ ಒತ್ತುವರಿಗೆ ಸಂಬಂಧಿಸಿ ಅಧಿಕಾರಿಗಳು ನೀಡುವ ನೋಟಿಸ್ಗೆ ಕಿಮ್ಮತ್ತಿಲ್ಲದಂತೆ ಮಾಡಲಾಗಿದೆ. ಹಾಗೆಯೇ ಅಂಥ ಅಧಿಕಾರಿಗಳನ್ನು ವರ್ಗಾಯಿಸಲಾಗುತ್ತಿದೆ. ಇಂಥ ಸಂದಿಗ್ಧ ಪರಿಸ್ಥಿತಿಯಲ್ಲಿ ರಾಜ್ಯದ ಸಿಎಂ ಸಿದ್ದರಾಮಯ್ಯ ಅವರು ತಾವು 'ಶುದ್ಧ ಹಸ್ತ'ರು ಎಂಬುದು ಸಾಬೀತು ಮಾಡಲು ಸಕಾಲವಾಗಿದೆ. ಅವರು ತಮ್ಮ ಪ್ರಾಮಾಣಿಕತೆ ಸಾಬೀತು ಮಾಡುವಂತೆ ಒತ್ತಾಯಿಸಿದರು.
ರಾಜ್ಯ ಲೋಕಾಯುಕ್ತಕ್ಕೆ ಪ್ರಾಮಾಣಿಕ ಹಾಗೂ ದಕ್ಷ ಅಧಿಕಾರಿಗಳ ಅವಶ್ಯಕತೆಯಿದೆ. ಈ ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಲೋಕಾಯುಕ್ತದಲ್ಲಿದ್ದ ದಕ್ಷ ಅಧಿಕಾರಿಗಳಾದ ಪ್ರಣಬ್ ಮೊಹಂತಿ ಮತ್ತು ಜೀವನಕುಮಾರ್ ಗಾಂವಕರ್ ಅವರನ್ನು ವರ್ಗಾವಣೆ ಮಾಡಲಾಗಿತ್ತು. ಸದ್ಯ ಆ ಸ್ಥಾನದಲ್ಲಿ ಸತ್ಯನಾರಾಯಣ ಮತ್ತು ಚಕ್ರವರ್ತಿ ಎಂಬುವವರಿದ್ದು ಇವರ ವಿರುದ್ಧ ಕರ್ತವ್ಯಚ್ಯುತಿಯ ಆರೋಪಗಳಿವೆ. ಇಂಥವರ ಬದಲಿಗೆ ದಕ್ಷರನ್ನು ನೇಮಿಸುವಂತೆ ಸಿಎಂಗೆ ಮನವಿ ಮಾಡುವುದಾಗಿ ತಿಳಿಸಿದರು.