ಮುಂದುವರಿದ ಮುದಗಲ್ ಪಪಂ ಮುಖ್ಯಾಧಿಕಾರಿ, ಅಧ್ಯಕ್ಷರ ಜಟಾಪಟಿ
ಕ.ಪ್ರ. ವಾರ್ತೆ , ಮುದಗಲ್ , ಫೆ.7
ಸ್ಥಳೀಯ ಪಟ್ಟಣ ಪಂಚಾಯಿತಿ ಅಧ್ಯಕ್ಷ ಹಾಗೂ ಮುಖ್ಯಾಧಿಕಾರಿಗಳ ಮುಸುಕಿನ ಗುದ್ದಾಟ ಜಿಲ್ಲಾಧಿಕಾರಿಗಳ ಕಚೇರಿಗೆ ತಲುಪಿದ್ದು, ಚೆಕ್ ಬುಕ್ ರಾದ್ದಾಂತ ಮುಂದುವರಿದಿದೆ.
ಪಟ್ಟಣ ಪಂಚಾಯಿತಿ ಅಧ್ಯಕ್ಷ ರಜ್ಜಬಲಿ ಟಿಂಗ್ರಿಯವರು ಚೆಕ್‌ಬುಕ್ ಮತ್ತು ಲೆಕ್ಕದ ಪುಸ್ತಕವನ್ನು ಪರಿಶೀಲಿಸಬೇಕು. ಆದ್ದರಿಂದ ತಮ್ಮ ಸ್ವಾಧಿನಕ್ಕೆ ನೀಡಬೇಕು ಎಂದು ಮುಖ್ಯಾಧಿಕಾರಿ ಎಂ. ವಿಜಯಲಕ್ಷ್ಮಿಯವರಿಗೆ ಪತ್ರ ಮುಖೇನ ಕೇಳಿದ್ದರು. ಅಧ್ಯಕ್ಷರ ಪತ್ರವನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಅವರ ಸೂಚನೆಯ ಮೇರೆಗೆ ಚೆಕ್‌ಬುಕ್ ಮತ್ತು ಲೆಕ್ಕದ ಪುಸ್ತಕಗಳನ್ನು ತಮಗೆ ನೀಡುವುದಾಗಿ ಮುಖ್ಯಾಧಿಕಾರಿಗಳು ಅಧ್ಯಕ್ಷರಿಗೆ ಹೇಳಿದ್ದರು.
ಈ ಚೆಕ್‌ಬುಕ್ ವಿವಾದ ಅಧ್ಯಕ್ಷರು, ಸದಸ್ಯರು ಮತ್ತು ಮುಖ್ಯಾಧಿಕಾರಿಗಳ ನಡುವಿನ ಹೊಂದಾಣಿಕೆಯನ್ನು ದೂರ ಮಾಡಿದ್ದು, ಅಧ್ಯಕ್ಷರ ಮೇಲೆ ಮುಖ್ಯಾಧಿಕಾರಿಗಳು, ಮುಖ್ಯಾಧಿಕಾರಿಗಳ ಮೇಲೆ ಅಧ್ಯಕ್ಷರು, ಸದಸ್ಯರು ಜಿಲ್ಲಾಧಿಕಾರಿಗಳಿಗೆ ದೂರು ನೀಡುವ ಮೂಲಕ ಆಡಳಿತ ಮಂಡಳಿ ಅಧಿಕಾರಿಗಳ ನಡುವೆ ಪತ್ರ ಸಮರ ಆರಂಭವಾಗಿದೆ.
ಪರಿಶೀಲನೆ: ಸ್ಥಳೀಯ ಸಂಸ್ಥೆಗಳ ನಿಯಮದ ಪ್ರಕಾರ ಪ.ಪಂ. ಲೆಕ್ಕಪರಿಶೀಲನೆ ಮಾಡುವುದು, ನಿಗಾ ವಹಿಸುವುದು, ಪರಿಶೀಲನೆಗೆ ಚೆಕ್ ಮತ್ತು ಲೆಕ್ಕ ಪುಸ್ತಕವನ್ನು ಒಂದು ತಿಂಗಳವರೆಗೆ ಅವಕಾಶ ಇದೆ ಎನ್ನುವ ಕಾರಣಕ್ಕಾಗಿ ಪರಿಶೀಲನೆಗೆ ನೀಡುವಂತೆ ಕೇಳಲಾಗಿತ್ತು.
ಮುಖ್ಯಾಧಿಕಾರಿಗಳ ಮತ್ತು ಅಧ್ಯಕ್ಷರ ಪತ್ರಗಳನ್ನು ಪರಿಶೀಲನೆ ಮಾಡಿದ ಜಿಲ್ಲಾಧಿಕಾರಿಗಳು ಪುರಸಭೆ ಕಾಯ್ದೆ 1964ರ ಕಲಂ 43ರ ಪ್ರಕಾರ ನಗರ, ಸ್ಥಳೀಯ ಸಂಸ್ಥೆಗಳ ಆರ್ಥಿಕ ವ್ಯಹಾರಗಳ ನಿಯಂತ್ರಣಾ ಅಧಿಕಾರ ಸಂಸ್ಥೆಯ ಅಧ್ಯಕ್ಷರಿಗೆ ಇದೆ.
ಆರ್ಥಿಕ ವ್ಯವಹಾರ: ಆದರೆ ಸದರಿ ಅಧಿಕಾರದಂತೆ ಅಧ್ಯಕ್ಷರು ತಮಗೆ ಅಗತ್ಯವೆನಿಸಿದಾಗ ಕಚೇರಿಯ ವೇಳೆಯಲ್ಲಿ ಆರ್ಥಿಕ ವ್ಯವಹಾರಗಳ ಪರಿಶೀಲನೆಗೆ ಅಗತ್ಯವಿರುವ ಆರ್ಥಿಕ ದಾಖಲೆಗಳನ್ನು ತಮ್ಮ ಚೆಂಬರ್‌ಗೆ ತರಿಸಿಕೊಂಡು ಪರಿಶೀಲಿಸಬಹುದಾಗಿದೆ. ಆದರೆ ದಾಖಲೆಗಳನ್ನು ಅಧ್ಯಕ್ಷರ ಅಧೀನದಲ್ಲಿ ಇಟ್ಟುಕೊಳ್ಳಲು ಕಾಯ್ದೆ ಮತ್ತು ನಿಯಮಗಳಲ್ಲಿ ಅವಕಾಶವಿರುವುದಿಲ್ಲ.
ಸೂಚನಾ ಪತ್ರ: ನಿಯಮಾನುಸಾರ ಸಂಸ್ಥೆಯ ಅರ್ಥಿಕ ವ್ಯವಹಾರಗಳನ್ನು ಸಂಬಂದಿಸಿದ ಎಲ್ಲಾ ದಾಖಲೆಗಳ ಜವಾಬ್ದಾರಿ ಸಂಸ್ಥೆಯ ಮುಖ್ಯಸ್ಥರಾದ ಮುಖ್ಯಾಧಿಕಾರಿಗಳಿಗೆ ಇದ್ದು, ಕಚೇರಿ ನಿಯಮಾವಳಿ ಪ್ರಕಾರ ಮುಖ್ಯಾಧಿಕಾರಿಗಳ ಪರವಾಗಿ ಲೆಕ್ಕ ಶಾಖೆಯನ್ನು ನಿರ್ವಹಿಸುತ್ತಿರುವ ವಿಷಯ ನಿರ್ವಾಹಕ ಅಧೀನದಲ್ಲಿ ಇರತಕ್ಕದ್ದು ಎಂದು ಜಿಲ್ಲಾಧಿಕಾರಿಗಳು ಮುಖ್ಯಾಧಿಕಾರಿಗಳಿಗೆ ಮತ್ತು ಅಧ್ಯಕ್ಷರಿಗೆ ನೀಡಿದ ಸೂಚನಾ ಪತ್ರದಲ್ಲಿ ತಿಳಿಸಿದ್ದಾರೆ. ಇದರಿಂದಾಗಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ಮತ್ತು ಮುಖ್ಯಾಧಿಕಾರಿಗಳ ಚೆಕ್‌ಬುಕ್ ರಾದ್ದಾಂತಕ್ಕೆ ತೆರೆ ಬೀಳುವದೋ ಅಥವಾ ಮತ್ಯಾವ ತಗಾದೆ ಆರಂಭವಾಗುವುದೋ ಕಾದು ನೋಡಬೇಕಾಗಿದೆ.