ಸಮರ್ಪಕ ಕುಡಿವ ನೀರಿಗೆ ಆಗ್ರಹ
ಕ.ಪ್ರ. ವಾರ್ತೆ , ರಾಯಚೂರು , ಫೆ.7
ತಾಲೂಕಿನ ಗ್ರಾಮೀಣ ಮತ್ತು ನಗರ ಪ್ರದೇಶಕ್ಕೆ ಸಮರ್ಪಕ ಕುಡಿಯುವ ನೀರು ಮತ್ತು ಗುಣಮಟ್ಟದ ರಸ್ತೆ, ಮೂಲ ಸೌಲಭ್ಯಕ್ಕೆ ಆಗ್ರಹಿಸಿ ಶುಕ್ರವಾರ ನಗರದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ತಾಲೂಕು ಸಮಿತಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ಕಾರ್ಯಕರ್ತರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ, ರಾಯಚೂರು ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಬೇಸಿಗೆ ಆರಂಭಕ್ಕೂ ಮುನ್ನವೇ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದ್ದಾರೆಂದು ಆರೋಪಿಸಿದರು.
ನಗರ ಪ್ರದೇಶದಂತೆಯೇ ಗ್ರಾಮೀಣ ಭಾಗದಲ್ಲಿಯೂ ಅನೇಕ ಗ್ರಾಮಗಳಿಗೆ ಸಮರ್ಪಕ ಕುಡಿಯುವ ನೀರು ದೊರೆಯುತ್ತಿಲ್ಲ. ಅದರಿಂದ ಗ್ರಾಮಸ್ಥರು ಪರದಾಡುತ್ತಿದ್ದಾರೆ. ಇನ್ನು ನಗರದ ಗಂಜ್ ರಸ್ತೆ, ಸಿಟಿ ಟಾಕೀಸ್ ರಸ್ತೆ, ಹನುಮಾನ್ ಟಾಕೀಸ್ ರಸ್ತೆ ಸೇರಿ ವಿವಿಧ ರಸ್ತೆಗಳು ತೀರಾ ಹದಗೆಟ್ಟಿವೆ. ಅವುಗಳ ದುರಸ್ತಿಗೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.
ವಿದ್ಯಾರ್ಥಿಗಳು ಕಾಲ್ನಡಿಗೆ: ನಗರದ ರಸ್ತೆಗಳಂತೆಯೇ ಗ್ರಾಮೀಣ ಪ್ರದೇಶದಲ್ಲಿಯೂ ರಸ್ತೆಗಳು ತೀರಾ ಹದಗೆಟ್ಟಿದ್ದು ಅದರಿಂದ ಬಸ್ ಸಂಚಾರ ಅನೇಕ ಕಡೆ ಸ್ಥಗಿತಗೊಂಡಿದೆ. ತಾಲೂಕಿನ ಹಾಳವೆಂಕಟಾಪುರ ಗ್ರಾಮಕ್ಕೆ ರಸ್ತೆ ಸರಿಯಿಲ್ಲದ್ದರಿಂದ ಬಸ್ ಸಂಚಾರ ಸ್ಥಗಿತಗೊಂಡಿದೆ. ಅದರಿಂದಾಗಿ ಗ್ರಾಮದ ವಿದ್ಯಾರ್ಥಿಗಳು ಕಾಲ್ನಡಿಗೆಯಲ್ಲಿಯೇ ಹತ್ತಿರದ ಪಟ್ಟಣಗಳಿಗೆ ವ್ಯಾಸಂಗಕ್ಕಾಗಿ ತೆರಳುವಂತಾಗಿದೆ ಎಂದು ಆರೋಪಿಸಿದರು.
ಸದ್ಯ ಕೆಲವೆಡೆ ರಸ್ತೆಗಳಿಗೆ ದುರಸ್ತಿ ನೆಪದಲ್ಲಿ ಮರಂ ಹಾಕಿ ಬಿಡಲಾಗುತ್ತಿದ್ದು, ಮುಂದೆ ಮಳೆ ಸುರಿದರೆ ಮರಂ ಕಿತ್ತುಹೋಗಿ ಮತ್ತೆ ರಸ್ತೆಗೆ ದುರ್ಗತಿ ಒದಗಲಿದೆ. ಈ ಹಿನ್ನೆಲೆಯಲ್ಲಿ ಡಾಂಬರು ರಸ್ತೆ ನಿರ್ಮಿಸುವಂತೆ ಒತ್ತಾಯಿಸಿದ ಕಾರ್ಯಕರ್ತರು, ಸರ್ಕಾರದ ಅನ್ನಭಾಗ್ಯ ಯೋಜನೆಯ ಜಾರಿಯಲ್ಲಿಯೂ ಅಕ್ರಮ ನಡೆಯುತ್ತಿವೆ ಎಂದು ದೂರಿದರು.
ಪಡಿತರ ಚೀಟಿಗಾಗಿ ಅಲೆದಾಟ: ಗ್ರಾಮೀಣ ಭಾಗದಲ್ಲಿ ನ್ಯಾಯಬೆಲೆ ಅಂಗಡಿಯವರು ಒಂದೆರಡು ದಿನ ಮಾತ್ರ ತೆರೆದಿಟ್ಟು ಪಡಿತರ ವಿತರಿಸುತ್ತಿದ್ದಾರೆ. ಆನಂತರದಲ್ಲಿ ಪಡಿತರ ವಿತರಿಸದೇ ವಂಚಿಸುತ್ತಿದ್ದಾರೆ. ಇದರಿಂದಾಗಿ ಗ್ರಾಮೀಣ ಭಾಗದ ಬಡವರು ಪಡಿತರ ಧಾನ್ಯದಿಂದ ವಂಚಿತರಾಗುತ್ತಿದ್ದಾರೆಂದು ಆರೋಪಿಸಿದರು.
ಗ್ರಾಮೀಣ ಭಾಗದಲ್ಲಿ ಮೂಲ ಪಡಿತರ ಚೀಟಿ ವಿತರಣೆ ವಿಳಂಬವಾಗಿದ್ದು, ಕಳೆದ 8-10 ತಿಂಗಳಿನಿಂದ ಅನೇಕ ಬಡ ಕುಟುಂಬಗಳು ಪಡಿತರ ಚೀಟಿಗಾಗಿ ಅಲೆದಾಡುತ್ತಿದ್ದಾರೆ. ಕಾರಣ ಕೂಡಲೇ ಜಿಲ್ಲಾಧಿಕಾರಿ ಈ ಬಗ್ಗೆ ಕ್ರಮ ಕೈಗೊಳ್ಳಬೇಕು. ಬಡವರಿಗೆ ಪಡಿತರ ಚೀಟಿ ಸಮರ್ಪಕವಾಗಿ ದೊರೆಯುವಂತೆ ಮಾಡಲು ಆಗ್ರಹಿಸಿದರು.
ಗ್ರಾಮೀಣ ಭಾಗದಲ್ಲಿ ಮೂಲ ಸೌಲಭ್ಯಗಳನ್ನು ಸಮರ್ಪಕವಾಗಿ ಒದಗಿಸಬೇಕು. ಸುಸಜ್ಜಿತ ರಸ್ತೆ, ಸಮರ್ಪಕ ಕುಡಿಯುವ ನೀರೊದಗಿಸುವ ಮೂಲಕ ಜನತೆಗೆ ಅನುಕೂಲ ಕಲ್ಪಿಸುವಂತೆ ಹೋರಾಟಗಾರರು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸಂಘದ ಪ್ರಮುಖರಾದ ರಂಗಪ್ಪ ಯಾಪಲದಿನ್ನಿ, ಕೆ.ಜಿ. ವೀರೇಶ್, ಡಿ.ಎಸ್. ಶರಣಬಸವ, ಈರಮ್ಮ ವಕೀಲರು, ಮಲ್ಲಿಕಾರ್ಜುನ, ಶಿವಪ್ಪ, ಹನುಮೇಶ್, ಹನಮಂತರಾಯ, ರವಿ, ಶಾಂತಕುಮಾರ್ ಸೇರಿ ಅನೇಕರಿದ್ದರು.