ಸೇವಾ ಭದ್ರತೆಗೆ ಆಗ್ರಹ; ಸಿ, ಡಿ ಗ್ರೂಪ್ ನೌಕರರ ಪ್ರತಿಭಟನೆ
ರಾಯಚೂರು: ಹೊರಗುತ್ತಿಗೆ ನೌಕರರನ್ನು ಸೇವೆಯಿಂದ ತೆಗೆದು ಹಾಕದಂತೆ ಹಾಗೂ ಸೇವೆಯಲ್ಲಿ ಮುಂದುವರಿಸಿ ಸೇವಾ ಭದ್ರತೆ ಒದಗಿಸಲು ಆಗ್ರಹಿಸಿ ನಗರದಲ್ಲಿ ಶುಕ್ರವಾರ ಆಲ್ ಇಂಡಿಯಾ ಯುಟಿಯುಸಿ ಸಂಯೋಜಿತ ಕರ್ನಾಟಕ ರಾಜ್ಯ ಸಂಯುಕ್ತ ಆರೋಗ್ಯ ಇಲಾಖೆ ಸಿ ಮತ್ತು ಡಿ ಗ್ರೂಪ್ ಗುತ್ತಿಗೆ ನೌಕರರ ಸಂಘದಿಂದ ಪ್ರತಿಭಟನೆ ನಡೆಸಲಾಯಿತು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ಸಿಎಂಗೆ ಮನವಿ ಸಲ್ಲಿಸಿ, ಸರ್ಕಾರವು ಈಚೆಗೆ 2323 ಡಿ ದರ್ಜೆ ಹುದ್ದೆಗಳನ್ನು ನೇಮಿಸಿರುವ ಹಿನ್ನೆಲೆಯಲ್ಲಿ ಎಲ್ಲೆಡೆ ಅಧಿಕಾರಿಗಳು ಹೊರಗುತ್ತಿಗೆಯಲ್ಲಿ ನೇಮಕಗೊಂಡವರಿಗೆ ಸೇವೆ ಅಗತ್ಯವಿಲ್ಲ ಎಂದು ತಿಳಿಸುತ್ತಿದ್ದಾರೆ. ಕಾಯಂ ನೌಕರರು ಸೇವೆಗೆ ಹಾಜರಾಗಿದ್ದು, ಹೊರಗುತ್ತಿಗೆಯವರು ಸೇವೆಗೆ ಹಾಜರಾಗದಂತೆ ಸೂಚಿಸುತ್ತಿದ್ದಾರೆಂದು ಆರೋಪಿಸಿದರು.
ಆತಂಕ: ಈ ಹಿನ್ನೆಲೆಯಲ್ಲಿ ಹೊರಗುತ್ತಿಗೆಯಲ್ಲಿ ಇದುವರೆಗೆ ಕಾರ್ಯ ನಿರ್ವಹಿಸಿದವರು ಆತಂಕಕ್ಕೆ ಸಿಲುಕಿದ್ದಾರೆ. ಇಲಾಖೆಯಲ್ಲಿ ವಿವಿಧ ಏಜೆನ್ಸಿಗಳ ಅಡಿಯಲ್ಲಿ ಸುಮಾರು ಕಳೆದ 8-10 ವರ್ಷಗಳಿಂದ ನಿಷ್ಠೆಯಿಂದ ಸೇವೆ ಸಲ್ಲಿಸಿರುವ ನೌಕರರು ಇದರಿಂದ ಅತಂತ್ರರಾಗುತ್ತಾರೆ. ಅವರ ಕುಟುಂಬಗಳು ಬೀದಿ ಪಾಲಾಗುತ್ತವೆ ಎಂದು ಆತಂಕ ವ್ಯಕ್ತಪಡಿಸಿದರು.
ಹುಸಿ ಭರವಸೆ: ಈ ಹಿಂದೆ ಈ ವಿಚಾರಕ್ಕೆ ಸಂಬಂಧಿಸಿ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿದ ವೇಳೆ ಇಲಾಖೆಯ ನಿರ್ದೇಶಕರು ಸ್ಥಳಕ್ಕೆ ಆಗಮಿಸಿ ಈ ಬಗ್ಗೆ ತೊಂದರೆಯಾಗದಂತೆ ನೋಡಿಕೊಳ್ಳುವ ಭರವಸೆ ಕೊಟ್ಟಿದ್ದರು. ಆದರೆ ಸದ್ಯ ಕೆಲಸದಿಂದ ತೆಗೆದು ಹಾಕಲಾಗಿದೆ ಎಂದು ಆರೋಪಿಸಿದರು. ಕೂಡಲೇ ಎಲ್ಲಾ ನೌಕರರನ್ನು ಸೇವೆಯಲ್ಲಿ ಮುಂದುವರಿಸಬೇಕು. ಸೇವಾ ಭದ್ರತೆ ಒದಗಿಸುವಂತೆ ಹೋರಾಟಗಾರರು ಆಗ್ರಹಿಸಿದರು. ಸಂಘದ ಅಧ್ಯಕ್ಷ ವೀರೇಶ್ ಎನ್.ಎಸ್, ಶಿವಪ್ಪ, ರಂಗಪ್ಪ, ಅಲ್ಲಾಭಕ್ಷ, ವೀರಭದ್ರ, ಆನಂದ, ಯಲ್ಲಪ್ಪ ಸಿಂಧನೂರು, ಪಂಪಣ್ಣ, ಹುಲುಗಪ್ಪ, ನರಸಿಂಹ, ಬಸವರಾಜ ಇದ್ದರು.