ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ನಿಯಮೋಲ್ಲಂಘನೆ ಪ್ರವೃತ್ತಿ ತೊಲಗಿಸಿ

Vishwanath S
Updated On : 9 Feb 2014, 1:02 am

ರಾಯಚೂರು: ಭ್ರಷ್ಟಾಚಾರ ನಿರ್ಮೂಲನೆಗೆ ದೇಶದ ಪ್ರಜೆಗಳಲ್ಲಿ ಮನೆ ಮಾಡಿರುವ ನಿಯಮೋಲ್ಲಂಘನೆಯ ಪ್ರವೃತ್ತಿ ಹೋಗಲಾಡಿಸುವ ಅವಶ್ಯಕತೆಯಿದೆ. ಮನಸು ಬೆಳಗುವ ಶಿಕ್ಷಣ ನೀಡಿಕೆಯ ಮೂಲಕ ಅಕ್ರಮಕ್ಕೆ ಕಡಿವಾಳ ಹಾಕಬಹುದಾಗಿದೆ ಎಂದು ಹಿರಿಯ ಸಾಹಿತಿ, ನಾಡೋಜ ಕೋ. ಚನ್ನಬಸಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು.
ನಗರದ ರಂಗಮಂದಿರದಲ್ಲಿ ಶನಿವಾರ ಜನಸಂಗ್ರಾಮ ಪರಿಷತ್‌ನ ರಾಜ್ಯಮಟ್ಟದ ಮೊದಲ ಸಮ್ಮೇಳನ ಮತ್ತು ವಿಚಾರ ಸಂಕಿರಣ  ಉದ್ಘಾಟಿಸಿ, ಇಂದಿನ ದಿನಮಾನದಲ್ಲಿ ನ್ಯಾಯಾಂಗ, ಕಾರ್ಯಾಂಗ ಮತ್ತು ಶಾಸಕಾಂಗಗಳ ಮೇಲೆ ಜನತೆಗೆ ವಿಶ್ವಾಸವುಳಿದಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.
ಶಾಂತಿಯುತ ಹೋರಾಟ: ಭ್ರಷ್ಟಾಚಾರ ವ್ಯಾಪಕವಾಗಿ ಹರಡಿದ್ದು, ಅದಕ್ಕೆ ಕಡಿವಾಣ ಹಾಕಲು ಸ್ವಾತಂತ್ರ್ಯ ಪಡೆಯಲು ನಡೆಸಿದ ಹೋರಾಟದ ಮಾದರಿಯ ಚಳವಳಿಗಳ ಅವಶ್ಯಕತೆಯಿದೆ. ಈ ನಿಟ್ಟಿನಲ್ಲಿ ಅಂಹಿಸೆಯಿಂದ ಪರಿಹಾರ ಹುಡುಕಲಾಗದು. ಶಾಂತಿಯುತ ಹೋರಾಟದಿಂದ ಮಾತ್ರ ಸಮಸ್ಯೆಗೆ ಶಾಶ್ವತ ಪರಿಹಾರ ಸಾಧ್ಯ ಎಂದರು.
 ಜಾಗೃತ ಮನಸುಗಳಿಂದ ದೇಶಕ್ಕೆ ಭವಿಷ್ಯವಿದೆ. ಬಹುಜನರು ದೇಶದಲ್ಲಿ ಒಳ್ಳೆಯದರ ನಿರೀಕ್ಷೆಯಲ್ಲಿದ್ದಾರೆ. ಆದರೆ ಅಂಥವರ ಕೈಯಲ್ಲಿ ಅಧಿಕಾರವಿಲ್ಲದಂತಾಗಿದೆ. ಅದರಿಂದಾಗಿ ಭ್ರಷ್ಟಾಚಾರ ಎಲ್ಲೆಡೆ ಹರಡಿದೆ ಎಂದು ಹೇಳಿದರು.
ಅಕ್ರಮಕ್ಕೆ ಕಡಿವಾಣ: ಸರ್ಕಾರದ ಅನೇಕ ಯೋಜನೆಗಳು ರೂಪುಗೊಳ್ಳುವ ಹಂತದಿಂದಲೇ ಅನುಷ್ಠಾನದ ಹಂತದವರೆಗೆ ಅಕ್ರಮಕ್ಕೆ ದಾರಿ ಮಾಡುತ್ತಿವೆ. ಯೋಜನೆಗಳ ಫಲಾನುಭವಿಗಳಿಗೆ ಯೋಜನೆಗಳ ಲಾಭ ದೊರೆಯುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದ ಅವರು, ಕೆಳಹಂತದ ಭ್ರಷ್ಟಾಚಾರ ತಡೆಗೆ ಸಮಾಜದಲ್ಲಿರುವ ಎಲ್ಲರೂ ಪ್ರಾಮಾಣಿಕ ಪ್ರಯತ್ನ ಮಾಡುವ ಮೂಲಕ ಮೇಲಿನ ಹಂತದ ಅಕ್ರಮಕ್ಕೆ ಕಡಿವಾಣ ಹಾಕಬಹುದೆಂದರು. ಜನರಿಗೆ ಸಂವಿಧಾನದ ಕಾರ್ಯಾಂಗ, ಶಾಸಕಾಂಗ, ನ್ಯಾಯಾಂಗಗಳ ಮೇಲೆ ವಿಶ್ವಾಸ ಕಳೆದಿದೆ. ಇದೇ ಪರಿಸ್ಥಿತಿ ಮುಂದುವರಿದಲ್ಲಿ ಮುಂದೊಂದು ದಿನ ಅರಾಜಕತೆಯ ದರ್ಶನವಾಗುವುದರಲ್ಲಿ ಸಂದೇಹವಿಲ್ಲ. ಸಂವಿಧಾನದ ಕುಸಿತ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕ ಎಂದರು.
400 ಕೋಟಿ ವೆಚ್ಚದ...: ಹಿರಿಯ ಪತ್ರಕರ್ತ ಎಂ.ಕೆ. ಭಾಸ್ಕರರಾವ್ ಮಾತನಾಡಿ, ಚುನಾವಣೆಗಳು ಇಂದಿನ ದಿನಮಾನದಲ್ಲಿ ಬಂಡವಾಳ ಹೂಡಿಕೆಯ ಅವಕಾಶಗಳಾಗಿ ಮಾರ್ಪಟ್ಟಿದ್ದು, ಅದರಿಂದಾಗಿ ಇಡೀ ವ್ಯವಸ್ಥೆ ಅವ್ಯವಸ್ಥೆಯ ಗೂಡಾಗಿದೆ. ಬೆಂಗಳೂರಿನ 4 ಲೋಕಸಭೆ ಸ್ಥಾನಗಳಲ್ಲಿ ಮುಂಬರುವ ಚುನಾವಣೆಯಲ್ಲಿ ಸುಮಾರು 400 ಕೋಟಿ ವೆಚ್ಚವಾಗುವ ಲೆಕ್ಕಾಚಾರ ಈಗಿನಿಂದಲೇ ಕೇಳಿಬರುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಚುನಾವಣೆಯಲ್ಲಿ ಸ್ಪರ್ಧಿಸುವಂಥ ವ್ಯಕ್ತಿಗೆ ಕೋಟ್ಯಂತರ ರು. ವೆಚ್ಚ ಮಾಡಲು ಹೇಗೆ ಸಾಧ್ಯ. ಆ ಮಟ್ಟಿಗಿನ ಅಪಾರ ಹಣ ಎಲ್ಲಿಂದ ಅಭ್ಯರ್ಥಿಗೆ ಲಭ್ಯವಾಗುತ್ತದೆ ಎಂಬುದರ ಬಗ್ಗೆ ಮತದಾರರು ಜಾಗೃತಗೊಳ್ಳುವ ಅವಶ್ಯಕತೆಯಿದೆ. ಆಗ ಮಾತ್ರ ಚುನಾವಣೆಯಲ್ಲಿ ಸೇರಿರುವ ಭ್ರಷ್ಟಾಚಾರ ಕೊನೆಗಾಣುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಹೋರಾಟ: ಸಮಾಜ ಪರಿವರ್ತನಾ ಸಮುದಾಯದ ಮುಖಂಡ ಎಸ್.ಆರ್. ಹಿರೇಮಠ ಮಾತನಾಡಿ, ಭೂಕಬಳಿಕೆ ಮತ್ತು ಒತ್ತಾಯದ ಭೂಸ್ವಾಧೀನ, ಅಕ್ರಮ ಗಣಿಗಾರಿಕೆ ಮತ್ತು ಭ್ರಷ್ಟಾಚಾರದ ವಿರುದ್ಧ ಜನಸಂಗ್ರಾಮ ಪರಿಷತ್ ಹೋರಾಟ ಮುಂದುವರಿಸಲಿದೆ ಎಂದು ಹೇಳಿದರು. ಸಮಸ್ಯೆಗಳ ಬಗ್ಗೆ ಸಮಗ್ರ ಪರಿಕಲ್ಪನೆಯಿಲ್ಲದೇ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಿಲ್ಲ ಎಂದು ಎಚ್ಚರಿಸಿದರು.
ಅಧ್ಯಕ್ಷತೆ ವಹಿಸಿ ಪತ್ರಕರ್ತ ಗಂಗಾಧರ ಕುಷ್ಟಗಿ ಮಾತನಾಡಿದರು. ಸಮಾರಂಭದಲ್ಲಿ ಮಾಜಿ ಸಂಸದ ಕೋದಂಡರಾಮಯ್ಯ, ರಾಘವೇಂದ್ರ ಕುಷ್ಟಗಿ, ರಾಜ್ಯ ರೈತಸಂಘದ ಅಧ್ಯಕ್ಷ ಚಾಮರಸ ಮಾಲಿಪಾಟೀಲ್, ಡಾ. ರಜಾಕ್ ಉಸ್ತಾದ್, ಚಂದ್ರಶೇಖರ್ ಬಾಳೆ, ಪತ್ರಕರ್ತ ಯತಿರಾಜು, ಡಾ. ವಿ.ಎ. ಮಾಲಿಪಾಟೀಲ್ ಸೇರಿ ಅನೇಕರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement