ಹೈಕಮಾಂಡ್ ನಿರ್ಣಯಕ್ಕೆ ಬದ್ಧ: ಶಿವರಾಮಗೌಡ
ಸಿಂಧನೂರು: ನೆನೆಗುದಿಗೆ ಬಿದ್ದಿದ್ದ ಹಲವಾರು ರೇಲ್ವೆ ಅಭಿವೃದ್ಧಿ ಯೋಜನೆಗಳನ್ನು ಜಾರಿಗೆ ತರಲು ಪ್ರಾಮಾಣಿಕವಾಗಿ ಶ್ರಮಿಸಿರುವುದಾಗಿ ಕೊಪ್ಪಳ ಲೋಕಸಭಾ ಕ್ಷೇತ್ರದ ಶಿವರಾಮಗೌಡ ಹೇಳಿದರು.
ಖಾಸಗಿ ವಸತಿ ಗೃಹಮೊಂದರಲ್ಲಿ ತಮ್ಮ ಐದು ವರ್ಷಗಳ ಕೆಲಸಗಳ ಕುರಿತು, ಲೋಕಸಭೆಯಲ್ಲಿ ಸುಮಾರು 253 ಪ್ರಶ್ನೆಗಳನ್ನು ಹಾಕಿ ಸಂಬಂಧಪಟ್ಟ ಸಚಿವರಿಂದ ಉತ್ತರ ಪಡೆದುಕೊಂಡ ಸಿಡಿಗಳನ್ನು ಪ್ರದರ್ಶಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ಕಳೆದ 13 ಮತ್ತು 14 ನೇ ಕೊಪ್ಪಳ ಲೋಕಸಭಾ ಕ್ಷೇತ್ರದ ಸದಸ್ಯರು ತಮ್ಮ ಐದು ವರ್ಷದ ಅವಧಿಯಲ್ಲಿ ಕ್ರಮವಾಗಿ 61 ಹಾಗೂ 41 ಪ್ರಶ್ನೆಗಳನ್ನು ಮಾತ್ರ ಕೇಳಿದ್ದರು. ಆದರೆ ತಾವು 253 ಪ್ರಶ್ನೆಗಳನ್ನು ಕೇಳುವ ಮೂಲಕ ರಾಜ್ಯದಲ್ಲಿ 4ನೇ ಸ್ಥಾನದಲ್ಲಿರುವುದಾಗಿ ಹೇಳಿದರು.
ತಮ್ಮಿಂದ ಅನೇಕ ಕೆಲಸಗಳು: 253 ಪ್ರಶ್ನೆಗಳು ಎಲ್ಲಾ ಇಲಾಖೆಗಳಿಗೆ ಸಂಬಂಧಿಸಿದವುಗಳು. ಲೋಕಸಭೆಯಲ್ಲಿ ಕೇಳಿದ ಪ್ರಶ್ನೆಗಳಿಗೆ ಸಂಬಂಧಪಟ್ಟ ಸಚಿವರು ಉತ್ತರಿಸಿ ಕಾಮಗಾರಿಗಳನ್ನು ತುರ್ತಾಗಿ ನಿರ್ವಹಿಸಲು ಸೂಚಿಸಿದ್ದರು. ಇದರಿಂದಾಗಿ ಕೊಪ್ಪಳ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಕುಡಿಯವ ನೀರು, ರಸ್ತೆ, ಕೇಂದ್ರಿಯ ವಿದ್ಯಾಲಯ, ಬಸ್ ಶಿಲ್ಟರ, ಮೀನುಗಾರಿಕೆ, ಪ್ರಾಚ್ಯವಸ್ತು ಸಂಗ್ರಹ ಹೀಗೆ ಅನೇಕ ಕೆಲಸಗಳು ತಮ್ಮಿಂದಾಗಿವೆ ಎಂದು ಹೇಳಿಕೊಂಡರು.
ಅಧಿಕಾರಿಗಳ ಬೇಜವಾಬ್ದಾರಿ ಕಾರಣ: ಸಿಂಧನೂರು- ಮಸ್ಕಿ, ಸಿಂಧನೂರು- ಗಿಣಿಗೇರಾ ರಸ್ತೆ ಕಾಮಗಾರಿಗಳು ಪ್ರಾರಂಭವಾಗಿವೆ. ವಿಶೇಷವಾಗಿ ರೇಲ್ವೆ ಇಲಾಖೆಯ ಭೂಸ್ವಾಧೀನ ಪ್ರಕ್ರಿಯೆಗೆ 53 ಕೋಟಿ ಹಣ, ಸಿವಿಲ್ ಕಾಮಗಾರಿಗೆ 80 ಕೋಟಿ ಹಣ ಮಂಜೂರು ಮಾಡಿಸಿದ್ದು ತಮಗೆ ತೃಪ್ತಿ ತಂದಿದೆ. ಆದರೆ ಮಾನ್ವಿ ತಾಲೂಕಿನಲ್ಲಿ ಭೂಸ್ವಾಧೀನ ಪ್ರಕ್ರಿಯೆ ಆಮೆವೇಗದಲ್ಲಿ ನಡೆದಿರುವುದಕ್ಕೆ ರೇಲ್ವೆ ಇಲಾಖೆಯ ಅಧಿಕಾರಿಗಳ ಬೇಜವಾಬ್ದಾರಿ ಕಾರಣವಾಗಿದೆ ಎಂದರು. ಗಿಣಿಗೇರಾ- ಮಹಿಬೂಬನಗರ ರೇಲ್ವೆ ಕಾಮಗಾರಿ ಕೇವಲ ಐದು ವರ್ಷಗಳಲ್ಲಿ ಮುಗಿಯುವಂತದ್ದಲ್ಲ. ಇದು 25-30 ವರ್ಷಗಳ ಕಾಲ ಹಂತ ಹಂತವಾಗಿ ನಡೆಯುತ್ತದೆ. ಆದರೆ ತಮ್ಮ ಅವಧಿಯಲ್ಲಿ ಅತೀ ಹೆಚ್ಚು ಕೆಲಸ ಮಾಡಿಸಲಾಗಿದೆ. ಮಾನವಿ ತಾಲೂಕಿನ ಭೂಸ್ವಾಧೀನ ಪ್ರಕ್ರಿಯೆ ಮುಗಿದರೆ ರೇಲ್ವೆ ಹಳಿ ಕಾಮಗಾರಿ ಆರಂಭಗೊಳ್ಳುತ್ತದೆ. ಕೆಲ ಕಡೆ ವ್ಯಾಜ್ಯಗಳಿದ್ದಲ್ಲಿ ಪರಿಹಾರದ ಹಣ ಮಂಜೂರಾಗಿಲ್ಲ ಎಂದರು.
1 ಕೋಟಿ 85 ಲಕ್ಷ ಅನುದಾನ: ಮಲ್ಟಿವಿಲೆಜ್ ಕುಡಿಯುವ ನೀರಿನ ಯೋಜನೆ ಸರಿಯಾಗಿ ನಡೆಯುತ್ತಿಲ್ಲ. ಈ ಕುರಿತು ಗ್ರಾಮೀಣ ಅಭಿವೃದ್ಧಿ ಸಚಿವ ಹೆಚ್.ಕೆ. ಪಾಟೀಲ್‌ರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದೇನೆ ಎಂದು ಸುದ್ದಿಗಾರರ ಮತ್ತೊಂದು ಪ್ರಶ್ನೆಗೆ ಉತ್ತರಿಸಿದರು. ಸಿಂಧನೂರು ತಾಲೂಕಿಗೆ 1 ಕೋಟಿ 85 ಲಕ್ಷ ವಿವಿಧ ಕಾಮಗಾರಿಗಳಿಗೆ ಅನುದಾನ ನೀಡಲಾಗಿದೆ. ಬಿಎಸ್‌ಎನ್‌ಎಲ್ ತ್ರಿಜಿ ಕೆಲಸವನ್ನು ಸಿಂಧನೂರು ತಾಲೂಕಿಗೆ ವಿಸ್ತರಿಸುವ ಉದ್ದೇಶವನ್ನು ಹೊಂದಲಾಗಿದೆ. ಸಿಂಗಾಪೂರ ಡಿಸ್ಟಲರಿಜ್‌ನಿಂದ ಆಗುವ ತೊಂದರೆಗಳ ಕುರಿತು ಲೋಕಸಭೆಯಲ್ಲಿ ಧ್ವನಿ ಎತ್ತಿದ್ದು, ಈಗ ಅಲ್ಲಿ ಪರಿಸರಕ್ಕೆ ಧಕ್ಕೆಯಾಗದಂತೆ ಆಡಳಿತ ಮಂಡಳಿ ಕ್ರಮಕೈಗೊಂಡಿದೆ. ಸಿಎಸ್‌ಎಫ್‌ನ 7 ಸಾವಿರ ಎಕರೆ ಜಮೀನಿನಲ್ಲಿ ಕೃಷಿ ವಿಶ್ವ ವಿದ್ಯಾಲಯ ಸ್ಥಾಪನೆ ಮಾಡುವ ಉದ್ದೇಶ ಹೊಂದಲಾಗಿತ್ತು. ಅದರ ಭಾಗವಾಗಿ ಮೀನುಗಾರಿಕೆ ಅಭಿವೃದ್ಧಿಗಾಗಿ ಪ್ರಸ್ತಾವನೆ ಕಳುಹಿಸಲಾಗಿದೆ ಎಂದರು. ಬಿಜೆಪಿ ರಾಜ್ಯ ಸಮಿತಿ ಸದಸ್ಯ ವಿರುಪಾಪುರ ಅಮರೇಗೌಡ, ರಾಜ್ಯ ಪರಿಷತ್ ಸದಸ್ಯ ಶಿವಬಸನಗೌಡ ಗೊರೇಬಾಳ, ಜಿಲ್ಲಾಉಪಾಧ್ಯಕ್ಷ ಎನ್. ಶಿವನಗೌಡ ಗೊರೇಬಾಳ, ನಗರ ಘಟಕದ ಅಧ್ಯಕ್ಷ ಮಧ್ವರಾಜ ಆಚಾರ್ ಅಚ್ಚಡಕರ್, ಎಂ.ಡಿ. ಇಸ್ಮಾಯಿಲ್ ತುವರ್‌ಹಾಳ, ಮಲ್ಲಪ್ಪ ಅಂಕುಶದೊಡ್ಡಿ ಮತ್ತಿತರರು ಇದ್ದರು.