2020ರ ವೇಳೆಗೆ ಐಟಿ ರಫ್ತಿನ ಆದಾಯ ಏರಿಕೆ ಸಾಧ್ಯತೆ; ಸಚಿವ
ಕ.ಪ್ರ. ವಾರ್ತೆ ರಾಯಚೂರು ಫೆ.9
ಮಾಹಿತಿ ಮತ್ತು ತಂತ್ರಜ್ಞಾನ ಕ್ಷೇತ್ರದ ವಿಸ್ತರಣೆಗೆ ಸಂಬಂಧಿಸಿದ ಮೋಹನದಾಸ್ ಅವರು ನೀಡಿದ ವರದಿ ಸರ್ಕಾರಕ್ಕೆ ಸಲ್ಲಿಕೆಯಾಗಿದ್ದು, ವರದಿಯ ಶಿಫಾರಸುಗಳನ್ನು ಸರ್ಕಾರ ಜಾರಿ ಮಾಡಿದಲ್ಲಿ 2020ರ ವೇಳೆಗೆ ಮಾಹಿತಿ, ತಂತ್ರಜ್ಞಾನದ ರಫ್ತಿನ ಆದಾಯದ ಮೊತ್ತವು 4 ಲಕ್ಷ ಕೋಟಿಗೆ ಏರಿಕೆಯಾಗಲಿದೆ ಎಂದು ರಾಜ್ಯ ಮಾಹಿತಿ, ತಂತ್ರಜ್ಞಾನ ಸಚಿವ ಎಸ್.ಆರ್. ಪಾಟೀಲ್ ಹೇಳಿದರು.
ನಗರದಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸಿದ ವೇಳೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 2013- 14ನೇ ಸಾಲಿನಲ್ಲಿ ಮಾಹಿತಿ ತಂತ್ರಜ್ಞಾನ ರಫ್ತಿನಿಂದ ರಾಜ್ಯ 1.65 ಲಕ್ಷ ಕೋಟಿ ಆದಾಯ ಗಳಿಸಿದೆ. ಪ್ರಸ್ತುತ 10 ಲಕ್ಷ ನೇರ ಮತ್ತು 20 ಲಕ್ಷ ಪರೋಕ್ಷ ಉದ್ಯೋಗ ಸೃಜನೆಗೆ ಐಟಿ ಕ್ಷೇತ್ರ ನೆರವಾಗಿದೆ ಎಂದರು.
ಐಟಿ ಕ್ಷೇತ್ರ ವಿಸ್ತರಣೆಗೆ ಚಿಂತನೆ: ರಾಜ್ಯದ ಇನ್ನಿತರೆ ಜಿಲ್ಲೆಗಳಿಗೆ ಮಾಹಿತಿ ತಂತ್ರಜ್ಞಾನದ ಅಭಿವೃದ್ಧಿಯಾದಲ್ಲಿ 20 ಲಕ್ಷ ನೇರ ಹಾಗೂ 60 ಲಕ್ಷ ಪರೋಕ್ಷ ಉದ್ಯೋಗ ಸೃಷ್ಟಿಗೆ ದಾರಿಯಾಗಲಿದೆ. ರಾಜ್ಯ ಸರ್ಕಾರ ಈ ಹಿನ್ನೆಲೆಯಲ್ಲಿ ನಿರುದ್ಯೋಗಿ ಯುವಕರಿಗೆ ಉದ್ಯೋಗ ದೊರಕಿಸಲು ರಾಜ್ಯದ ಬೆಂಗಳೂರು ಹೊರತುಪಡಿಸಿ ಇನ್ನುಳಿದ ಜಿಲ್ಲೆಗಳಲ್ಲಿ ಐಟಿ ಕ್ಷೇತ್ರದ ವಿಸ್ತರಣೆಗೆ ಯೋಚಿಸಿದೆ ಎಂದು ತಿಳಿಸಿದರು.
ರಾಜ್ಯದ ಪ್ರಮುಖ ಜಿಲ್ಲೆಗಳಲ್ಲಿ ಐಟಿ ಪಾರ್ಕಿನ ಸ್ಥಾಪನೆಗೆ ಪೂರಕವಾಗಿ ವಿಮಾನ ನಿಲ್ದಾಣ, ರೇಲ್ವೆ ಸಂಪರ್ಕ, ಮೂಲ ಸೌಕರ್ಯಾಭಿವೃದ್ಧಿಗೆ ಸಂಬಂಧಿಸಿದ ಖಾತೆಯ ಸಚಿವರೊಂದಿಗೆ ಚರ್ಚಿಸಲಾಗುತ್ತದೆ ಎಂದ ಅವರು, ನಂಜುಂಡಪ್ಪ ವರದಿ ಶಿಫಾರಸಿನಂತೆ ರಾಯಚೂರಿನಲ್ಲಿ ಐಐಟಿ ಸ್ಥಾಪನೆಯ ಬೇಡಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ಈ ಬಗ್ಗೆ ಗಮನಹರಿಸಿ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.
ರಾಜಕೀಯ: ಕಾಂಗ್ರೆಸ್ ಪಕ್ಷಕ್ಕೆ ಸುದೀರ್ಘ ಇತಿಹಾಸವಿದೆ. ಸಚಿವ ಸ್ಥಾನಕ್ಕಾಗಿ ಯಾರೇ ಬೆದರಿಕೆಯೊಡ್ಡಿದರೂ ಅದರಿಂದ ಸ್ಥಾನಮಾನ ದೊರೆಯದು. ಹೈಕಮಾಂಡ್ ಯಾರಿಗೆ ಯಾವ ಸ್ಥಾನ, ಯಾವಾಗ ನೀಡಬೇಕೆಂಬುದನ್ನು ನಿರ್ಧರಿಸಿ ಕಾರ್ಯನಿರ್ವಹಣೆಗೆ ಅವಕಾಶ ನೀಡುತ್ತದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಈ ನಿಟ್ಟಿನಲ್ಲಿ ಹೆಚ್ಚಿನ ಅಧಿಕಾರವನ್ನು ಪಕ್ಷ ನೀಡಿದೆ ಎಂದರು.
ಗುಲ್ಬರ್ಗದ ಮಾಲೀಕಯ್ಯ ಗುತ್ತೇದಾರ್ ಅವರು ಸಚಿವ ಸ್ಥಾನಕ್ಕೆ ಕೋರಿ ಹೈಕಮಾಂಡ್‌ಗೆ ಪತ್ರ ಬರೆದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಗುತ್ತೇದಾರ್ ಅವರು ಪಕ್ಷದ ಹಿರಿಯ ರಾಜಕೀಯ ನಾಯಕರಾಗಿದ್ದು, ಅವರು ಹೈಕಮಾಂಡ್‌ಗೆ ಬೆದರಿಕೆ ರೀತಿಯಲ್ಲಿ ಒತ್ತಾಯಿಸಿದರೂ ಅದರ ಬಗ್ಗೆ ವರಿಷ್ಠರು ನಿರ್ಧರಿಸಲಿದ್ದಾರೆ. ಗುತ್ತೇದಾರ್ ೆಅವರೇ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪರ ಮತಯಾಚಿಸುವರೆಂದು ಹೇಳಿದರು.