ಜಿಲ್ಲಾಡಳಿತದ ಅಣಕು ಶವಯಾತ್ರೆ
ದೇವದುರ್ಗ: ತಾಲೂಕಿನ ಜಾಲಹಳ್ಳಿ ಗ್ರಾಮಕ್ಕೆ ಕುಡಿಯುವ ನೀರೊದಗಿಸಲು ಮಂಜೂರಾದ 36 ಲಕ್ಷ ಅನುದಾನದುರ್ಬಳಕೆಯಾಗಿದೆ ಎಂದು ಆರೋಪಿಸಿ ಗ್ರಾಮದಲ್ಲಿ ಪ್ರಗತಿಪರ ಹೋರಾಟಗಾರರು ಗ್ರಾಪಂ ಎದುರು ಶನಿವಾರ ಅಹೋರಾತ್ರಿ ಧರಣಿ, ಅಣಕು ಶವಯಾತ್ರೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಗ್ರಾಮಕ್ಕೆ ಕೃಷ್ಣಾ ನದಿಯಿಂದ ನೀರೊದಗಿಸುವ ನಿಟ್ಟಿನಲ್ಲಿ ಮಂಜೂರಾಗಿದ್ದ 36 ಲಕ್ಷ ಅನುದಾನವನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ. ಈ ಬಗ್ಗೆ ಸಮಗ್ರ ತನಿಖೆಯಾಗಬೇಕೆಂಬುದೂ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ನಡೆಸುತ್ತಿರುವ ಹೋರಾಟದ ಬಗ್ಗೆ ಜಿಲ್ಲಾಡಳಿತ ನಿರ್ಲಕ್ಷ್ಯ ತೋರಿದೆ ಎಂದು ಹೋರಾಟಗಾರರು ಆರೋಪಿಸಿದರು.
ಜಿಲ್ಲಾಡಳಿತ ಸಂಪೂರ್ಣ ವಿಫಲ: ಪ್ರಮುಖ ಬೇಡಿಕೆಗಳನ್ನು ಈಡೇರಿಸುವಲ್ಲಿ ಜಿಲ್ಲಾಡಳಿತ ಸಂಪೂರ್ಣ ವಿಫಲವಾಗಿರುವ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಸಂಘಟನೆಯಿಂದ ಜಿಲ್ಲಾಡಳಿತದ ಶವಯಾತ್ರೆಯನ್ನು ಗ್ರಾಪಂನಿಂದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಿ ಅಂಬೇಡ್ಕರ್ ವೃತ್ತದಲ್ಲಿ ದಹಿಸಲಾಯಿತು. ಈ ನಿಟ್ಟಿನಲ್ಲಿ ಜಿಲ್ಲಾಡಳಿತದ ನಿರ್ಲಕ್ಷ್ಯ ಮುಂದುವರಿದಲ್ಲಿ ಜಾಲಹಳ್ಳಿ ಗ್ರಾಮ ಬಂದ್‌ಗೆ ಕರೆ ನೀಡಲಾಗುತ್ತದೆ ಎಂದು ಹೋರಾಟಗಾರರು ಎಚ್ಚರಿಸಿದರು. ಈ ಸಂದರ್ಭದಲ್ಲಿ ಮುಖಂಡ ಕೆರಿಲಿಂಗಪ್ಪ ನಾಡಗೌಡ, ದಲಿತ ಮುಖಂಡರಾದ ಎನ್.ಲಿಂಗಪ್ಪ, ರಂಗಣ್ಣ ಕೋಲ್ಕಾರ, ಪಿ.ಗಿರಿಯಪ್ಪ, ನರಸಣ್ಣ ನಾಯಕ, ಶಬ್ಬೀರ ಅಹ್ಮದ್, ಭೀಮಣ್ಣ ಗುಮೇದಾರ, ಯಂಕಪ್ಪ ಯರಕಮಟ್ಟಿ, ಮಲ್ಲಪ್ಪ ಸೌದ್ರಿ, ಯಂಕಪ್ಪ ಬೈಚಬಾಳ, ಮೌನೇಶ ದಾಸರ, ಸಂಗಮೇಶ ಮೂಲಿಮನಿ, ಶಿವು ದೇಸಾಯಿ, ಬಸವರಾಜ ತೇಕೂರ ಸೇರಿ ಅನೇಕರಿದ್ದರು.