ಅರಣ್ಯ ಸಮಿತಿಯಿಂದ ವಸ್ತುಸ್ಥಿತಿ ಪರಿಶೀಲನೆ
ಹುಮನಾಬಾದ್: ಕರ್ನಾಟಕ ಅರಣ್ಯ ಇಲಾಖೆಯ ತಂಡವು, ಜಪಾನಿನ ಆರ್ಥಿಕ ನೆರವಿನಿಂದ ಕರ್ನಾಟಕ ಸುಸ್ಥಿರ ಅರಣ್ಯ ನಿರ್ವಹಣೆ ಮತ್ತು ಜೀವಿ ವೈವಿಧ್ಯ ಸಂರಕ್ಷಣಾ ಯೋಜನೆಯಡಿಯಲ್ಲಿ ಗುಲ್ಬರ್ಗ ಜಿಲ್ಲೆಯ ಗ್ರಾಮ ಅರಣ್ಯ ಸಮಿತಿ ಸದಸ್ಯರಿಗೆ ಹಾಗೂ ಅರಣ್ಯ ಪ್ರೇರಕರು ಮತ್ತು ಸ್ವಯಂ ಸೇವಕರ ಅಧ್ಯಯನ ಪ್ರವಾಸಕ್ಕಾಗಿ ತಾಲೂಕಿನ ಶಾಮತಾಬಾದ, ವಡ್ಡನಕೇರಾ, ರಾಂಪುರ ಅರಣ್ಯ ಪ್ರದೇಶಕ್ಕೆ ಭೇಟಿ ನೀಡಿ ವಸ್ತುಸ್ಥಿತಿಯ ಪರಿಶೀಲನೆ ನಡೆಸಿತು.
ಎಸ್ಇಪಿ ಯೋಜನೆಯಡಿಯಲ್ಲಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಗ್ರಾಮದ ಅರಣ್ಯ ಸಮಿತಿ ಸದಸ್ಯರಿಗೆ ನೀಡಿದ ಸೌರ ವಿದ್ಯುತ್ ದೀಪ ವೀಕ್ಷಿಸಿ, ವಿದ್ಯುತ್ ದೀಪಗಳ ಅಳವಡಿಕೆ ಕುರಿತು ತಂಡ ಮೆಚ್ಚುಗೆ ವ್ಯಕ್ತ ಪಡಿಸಿತ್ತು.
ಶಾಮತಾಬಾದ್ ಗ್ರಾಮಕ್ಕೆ ತಂಡ ಭೇಟಿ ನೀಡಿ ಗ್ರಾಮ ಅರಣ್ಯ ಸದಸ್ಯರು ಹಾಗೂ ಗ್ರಾಮಸ್ತರು ಮನೆಯಲ್ಲಿ ಗೋಬರ ಗ್ಯಾಸ್ ಘಟಕದ ಮೂಲಕ ಅಡುಗೆ ಮತ್ತಿತರ ಕಾರ್ಯಗಳನ್ನು ಮಾಡುತ್ತಿರುವುದನ್ನು ಪರಿಶಿಲಿಸಿತು.
ಗುಲ್ಬರ್ಗ ಪ್ರಾದೇಶಿಕ ಅರಣ್ಯ ಇಲಾಖೆಯ ಸಹಾಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಕೆ. ದಯಾನಂದ, ಬಸವಕಲ್ಯಾಣ ಅರಣ್ಯ ಉಪ ವಿಭಾಗದ ಕೆ.ಡಿ.ಶ್ರೀನಿವಾಸ, ವಲಯ ಅರಣ್ಯ ಅಧಿಕಾರಿ ಎಂ.ಎಂ.ಚಿಕ್ಕಮಠ, ಗುಲ್ಬರ್ಗಾದ ಅರಣ್ಯಾಧಿಕಾರಿ ಸಿದ್ರಾಮಪ್ಪ, ಚಿತ್ತಾಪುರ ವಲಯ ಅರಣ್ಯಾಧಿಕಾರಿ ಸುನೀಲ್ ಚವಾಣ, ಆಳಂದ ವಲಯ ಅರಣ್ಯಾಧಿಕಾರಿ ಬಾಬುರಾವ ಪಾಟೀಲ್, ಉಪವಲಯ ಅರಣ್ಯಾಧಿಕಾರಿ ವೀರಯ್ಯ ಪೂಜಾರಿ ಇದ್ದರು.