ಇಂದಿನಿಂದ ಜಿಲ್ಲಾ 8ನೇ ಕನ್ನಡ ಸಾಹಿತ್ಯ ಸಮ್ಮೇಳನ
ಅಮರೇಶಸ್ವಾಮಿ ಬಲ್ಲಟಗಿ
ಕ.ಪ್ರ. ವಾರ್ತೆ ಲಿಂಗಸ್ಗೂರು ಫೆ.10
ಐತಿಹಾಸಿಕ ಮಹತ್ವವುಳ್ಳ ಕ್ರಿ.ಪೂ. 256ರಲ್ಲಿ ಬ್ರಾಹ್ಮಿ ಲಿಪಿಯಲ್ಲಿ ಬರೆಯಲ್ಪಟ್ಟ, 8 ಸಾಲಿನ 'ದೇವನಾಂಪ್ರೀಯ' ಅಶೋಕನ ಶಿಲಾಶಾಸನ ದೊರೆತ ಸ್ಥಳ ಮಸ್ಕಿ ಪಟ್ಟಣದಲ್ಲಿ ಫೆ.11 ಮತ್ತು 12ರಂದು ನಡೆಯಲಿರುವ ರಾಯಚೂರು ಜಿಲ್ಲಾ 8ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ವೇದಿಕೆ ಭರದ ಸಿದ್ಧತೆ ನಡೆದಿದ್ದು, ಮಂಗಳವಾರ ಕನ್ನಡದ ಸೊಗಡು ಬೆರೆಯುವ ಘಳಿಗೆಗೆ ಸರ್ವ ಸನ್ನದ್ಧವಾಗಲಿದೆ.
ಪ್ರಾಚೀನ ನೆಲೆಗಳನ್ನು ಒಳಗೊಂಡ ಲಿಂಗಸ್ಗೂರು ತಾಲೂಕು ಸಾಹಿತ್ಯ, ಸಂಸ್ಕೃತಿಗಳು ವೈವಿಧ್ಯಮಯವಾಗಿವೆ. ಇತಿಹಾಸ ಪೂರ್ವ ಸ್ಥಳಗಳು, ಬುಡಕಟ್ಟು ಜನಾಂಗದ ಅಧ್ಯಯನ, ಚಿನ್ನದ ಗಣಿ, ಸ್ವಾತಂತ್ರ್ಯೋತ್ತರ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕ ಅಭಿವೃದ್ಧಿ ಸಂಶೋಧನೆಯ ವಸ್ತುಗಳಾಗಿದ್ದು, ಅಧ್ಯಯನಾಸಕ್ತರಿಗೆ ಒಳ್ಳೆಯ ಪ್ರದೇಶವಾಗಿದೆ. ಇತರ ಕ್ಷೇತ್ರಗಳಂತೆ ಸಾಹಿತ್ಯಕ್ಕೂ ಅಪೂರ್ವ ಕೊಡುಗೆ ನೀಡಿದ ಕೀರ್ತಿ ಲಿಂಗಸ್ಗೂರು ತಾಲೂಕಿಗೆ ಸಲ್ಲುತ್ತದೆ.
ದಾಸ ಸಾಹಿತ್ಯಕ್ಕೆ ಅಪಾರ ಕೊಡುಗೆ: ನವಿಲೆಯ ಶಂಕರ ದಾಸಿಮಯ್ಯ, ಢಕ್ಕೆಯ ಮಾರಯ್ಯ, ಉಳಿಮೇಶ್ವರ ಚಿಕ್ಕಯ್ಯ, ಅಮರೇಶ್ವರದ ಆಯ್ದಕ್ಕಿ ಮಾರಯ್ಯ-ಲಕ್ಕಮ್ಮ ಈ ಭಾಗದ ವಚನಕಾರರಾಗಿದ್ದಾರೆ. ಸಂತೆಕೆಲ್ಲೂರು ಘನಮಠೇಶ್ವರರು, ನೀರಲಕೇರಿ ಬಸವಲಿಂಗ ಶ್ರೀಗಳು, ಅಂಕಲಿಮಠದ ನಿರುಪಾದಿ ಶರಣರ ಸ್ವರ ವಚನಗಳು ಸಾಹಿತ್ಯದ ಸಂಪತ್ತಾಗಿವೆ. ವರದೇಂದ್ರ ವಿಠಲರು, ಪ್ರಾಣೇಶ ವಿಠಲರು, ಗೋನವಾರದ ರಾಮದಾಸರು, ಗೊರೇಬಾಳ ಹನುಮಂತರಾಯರು ದಾಸ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ.
ಆಧುನಿಕ ಕನ್ನಡ ಸಾಹಿತ್ಯದಲ್ಲಿ ದಿ. ಉಕ್ಲಿ ಕುಪ್ಪೇರಾವ್, ಹನುಮಂತರಾವ್, ಸೀಮಾಮಾ, ಬಸವಲಿಂಗಯ್ಯ ಪಂಚಾಕ್ಷರಿಮಠ, ಶಂಭಣ್ಣ ಕಾಡ್ಲೂರು, ಪಂಪನಗೌಡ ಮಾಕಾಪುರ, ಪರ್ವತಯ್ಯ ಶಿವಪುರ, ಡಾ. ಬಸವಲಿಂಗ ಸೊಪ್ಪಿಮಠ, ದುಂಡಯ್ಯಸ್ವಾಮಿ ಕಲ್ಮಠ, ಡಾ. ಸ್ವಾಮಿರಾವ್ ಕುಲಕರ್ಣಿ, ಗಿರಿರಾಜ ಹೊಸಮನಿ, ಡಾ. ಚನ್ನಬಸವ ಹಿರೇಮಠ, ಡಾ. ಅಮರೇಶ ಕುಂಬಾರ, ಡಾ. ಅಮರೇಶ ಯತಗಲ್, ಸಿ. ಶರಣಪ್ಪ, ಪಿ.ಎಸ್. ಪೈಲ್, ನೀಲಕಂಠಗೌಡ ಮುದಗಲ್, ಮಹಾಂತೇಶ ಮಸ್ಕಿ, ವೀರೇಶ ಸೌದ್ರಿ, ಡಾ. ಎನ್.ಎಚ್. ಪೂಜಾರ್, ಡಾ. ನಾಗರಾಜ ಹೀರಾ, ಶಿವಶರಣಯ್ಯ ಸೊಪ್ಪಿಮಠ, ಡಾ. ಕೆ. ಶಶಿಕಾಂತ, ಗುಂಡೇರಾವ್ ದೇಸಾಯಿ, ರಾ.ಶಿ. ಸರ್ಜಾಪುರ, ಡಾ. ಹೆ. ರಾಚಪ್ಪ ಸೇರಿದಂತೆ ಮುಂತಾದವರು ಕಾವ್ಯ, ಕಥೆ, ಕಾದಂಬರಿ, ನಾಟಕ, ಜೀವನ ಚರಿತ್ರೆ, ವಿಮರ್ಶೆ, ಸಂಶೋಧನೆ, ಸಂಪಾದನೆಯಲ್ಲಿ ತೊಡಗಿದ್ದಾರೆ.
ವಿಶಾಲ ವೇದಿಕೆ ನಿರ್ಮಾಣ: ಂತಹ ಸಾಹಿತ್ಯಿಕ ಹಿನ್ನೆಲೆ ಹೊಂದಿದ ಲಿಂಗಸ್ಗೂರು ತಾಲೂಕಿನಲ್ಲಿ 8ನೇ ಜಿಲ್ಲಾ ಸಮ್ಮೇಳನ ನಡೆಯುತ್ತಿರುವುದು ಈ ಭಾಗದ ಜನರಿಗೆ ಹೆಮ್ಮೆಯ ಸಂಗತಿಯಾಗಿದೆ. ಮಸ್ಕಿ ಪಟ್ಟಣದ ಭ್ರಮರಾಂಭ ಮಲ್ಲಿಕಾರ್ಜುನ ದೇವಸ್ಥಾನದ ಹತ್ತಿರ ವಿಶಾಲವಾದ ಪ್ರದೇಶದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದ್ದು, 180್ಢ120 ಅಳತೆಯ ವಿಶಾಲ ಮಂಟಪ ಹಾಗೂ 60್ಢ36 ಅಳತೆಯ ವೇದಿಕೆ ನಿರ್ಮಿಸಲಾಗಿದೆ. ವೇದಿಕೆಗೆ 8 ಮಹಾದ್ವಾರ ನಿರ್ಮಿಸಲಾಗಿದ್ದು, ವೇದಿಕೆಗೆ ಪ್ರಸಿದ್ಧ ಪ್ರವಚನಕಾರ, ಸಾಹಿತಿ ಬಸವಪ್ಪ ಶಾಸ್ತ್ರಿ ಅವರ ಹೆಸರಿಡಲಾಗಿದೆ. ಮಂಟಪಕ್ಕೆ ಸಂತೆಕೆಲ್ಲೂರಿನ ಕೃಷಿ ಋಷಿ ಘನಮಠೇಶ್ವರರ ಹೆಸರಿಡಲಾಗಿದೆ. ಸಮ್ಮೇಳನದ ಮಹಾದ್ವಾರಕ್ಕೆ ಮೌರ್ಯ ಸಾಮ್ರಾಟ ಅಶೋಕನ ಬಿರುದು 'ದೇವನಾಂಪ್ರೀಯ' ಎಂದು ಹೆಸರಿಡಲಾಗಿದೆ ಹಾಗೂ ಇನ್ನುಳಿದ ಮಹಾದ್ವಾರಗಳಿಗೆ ಸಾಹಿತಿಗಳಾದ ಶರಣಪ್ಪ ಗುಡದಿನ್ನಿ, ಎಂ.ಬಿ. ಪಾಟೀಲ್, ಶ್ಯಾಮರಾವ್ ಗಬ್ಬೂರ, ರಾಚಪ್ಪ ಗವಾಯಿಗಳು, ಶಿಕ್ಷಣಾಧಿಕಾರಿ ಅನ್ನಪೂರ್ಣದೇವಿ, ಧರ್ಮಣ್ಣ ನಾಯಕ, ಷಡಕ್ಷರಪ್ಪ ಶಿಕ್ಷಕರು, ಡಾ. ಖಲೀಲ ಅಹ್ಮದ್ ಅವರ ಹೆಸರು ಇಡಲಾಗಿದೆ.
ಮಸ್ಕಿ ಕ್ಷೇತ್ರದ ಶಾಸಕ ಪ್ರತಾಪಗೌಡ ಪಾಟೀಲ್ ಹಾಗೂ ಕಸಾಪ ಜಿಲ್ಲಾಧ್ಯಕ್ಷ ಮಹಾಂತೇಶ ಮಸ್ಕಿ ಫೆ.11ರಂದು ಬೆಳಗ್ಗೆ 7 ಗಂಟೆಗೆ ಧ್ವಜಾರೋಹಣ ನೆರವೇರಿಸಲಿದ್ದಾರೆ. ಸಮ್ಮೇಳನಾಧ್ಯಕ್ಷ ಸ್ವಾಮಿರಾವ್ ಕುಲಕರ್ಣಿ ನೇತೃತ್ವದಲ್ಲಿ ಭ್ರಮರಾಂಭ ದೇವಸ್ಥಾನದಿಂದ ಕನಕ ವೃತ್ತ, ದೈವದ ಕಟ್ಟೆ, ಅಗಸಿ, ಅಶೋಕ ವೃತ್ತ, ಹಳೇ ಬಸ್ ನಿಲ್ದಾಣ ಸೇರಿದಂತೆ ಪ್ರಮುಖ ಬೀದಿಗಳಲ್ಲಿ ಭುವನೇಶ್ವರಿ ದೇವಿ ಭಾವಚಿತ್ರವುಳ್ಳ ಕನ್ನಡದ ತೇರಿನ ಮೆರವಣಿಗೆ ಜರುಗಲಿದೆ. ಮೆರವಣಿಗೆಯಲ್ಲಿ ಡೊಳ್ಳು ಕುಣಿತ, ಹೆಜ್ಜೆ ಕುಣಿತ, ವೀರಗಾಸೆ, ಲಂಬಾಣಿ ನೃತ್ಯ, ಕಣಿ ಹಲಗೆ, ಭಜನೆ, ಸ್ಕೌಟ್ಸ್, ಭಾರತ ಸೇವಾದಳ, ಸ್ತಬ್ಧಚಿತ್ರಗಳು ನೋಡುಗರ ಮನಸೂರೆಗೊಳ್ಳಲಿವೆ.
ಶಿಕ್ಷಕರಿಗೆ ಒಒಡಿ ಸೌಲಭ್ಯ: ರಾಜ್ಯದ ವಿವಿಧ ಭಾಗಗಳಿಂದ ಸಾವಿರಾರು ಜನ ಸಾಹಿತ್ಯಾಸಕ್ತರು ಸಮ್ಮೇಳನದಲ್ಲಿ ಭಾಗವಹಿಸುವ ನಿರೀಕ್ಷೆ ಹೊಂದಲಾಗಿದ್ದು, ಬರುವ ಜನರಿಗೆ 3 ಸಾವಿರ ಆಸನ ವ್ಯವಸ್ಥೆ ಮಾಡಲಾಗಿದೆ. ನೆರೆ ತಾಲೂಕಿನ ಜನರಿಗೆ ವಸತಿ ಸೌಲಭ್ಯ ಕಲ್ಪಿಸಲಾಗಿದೆ. ಸಮ್ಮೇಳನ ದಿನದಂದು ಮಸ್ಕಿ ಪಟ್ಟಣದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಜಿಲ್ಲೆಯ ಶಿಕ್ಷಕರಿಗೆ ಒಒಡಿ ಸೌಲಭ್ಯ ನೀಡಲಾಗಿದೆ. ಸಮ್ಮೇಳನದಲ್ಲಿ 28 ಪುಸ್ತಕ ಮಳಿಗೆಗಳು, ಒಂದು ಖಾದಿ ಗ್ರಾಮೋದ್ಯೋಗ ಉತ್ಪನ್ನಗಳ ಮಾರಾಟ ಮಳಿಗೆ ನೋಂದಣಿಯಾಗಿದೆ. ಭ್ರಮರಾಂಭ ದೇವಸ್ಥಾನದಲ್ಲಿ ಈ ಭಾಗದ ಅಭಿರುಚಿಗೆ ತಕ್ಕಂತೆ ಊಟದ ವ್ಯವಸ್ಥೆ ಕಲ್ಪಿಸಲಾಗಿದೆ.
ರಾಜ್ಯ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪುಂಡಲೀಕ ಹಾಲಂಬಿ, 80ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷ ನಾ. ಡಿಸೋಜ, ಸಮ್ಮೇಳನಾಧ್ಯಕ್ಷ ಡಾ. ಸ್ವಾಮಿರಾವ್ ಕುಲಕರ್ಣಿ, ನಿವೃತ್ತ ನ್ಯಾಯಮೂರ್ತಿ ಶಿವರಾಜ್ ಪಾಟೀಲ್, ಜಿಲ್ಲಾ ಉಸ್ತುವಾರಿ ಸಚಿವ ಡಾ. ಶರಣಪ್ರಕಾಶ ಪಾಟೀಲ್, ಕನ್ನಡ ಮತ್ತು ಸಂಸ್ಕೃತಿ ಸಚಿವೆ ಉಮಾಶ್ರೀ, ಕೇಂದ್ರದ ಮಾಜಿ ಸಚಿವ ಬಸವರಾಜ ಪಾಟೀಲ್ ಆನ್ವರಿ, ಸಂಸದರಾದ ಸಣ್ಣ ಫಕೀರಪ್ಪ, ಶಿವರಾಮೇಗೌಡ, ಮಾಜಿ ಸಚಿವ ಅಮರೇಗೌಡ ಪಾಟೀಲ್ ಬಯ್ಯಾಪುರ, ಶಾಸಕರಾದ ಪ್ರತಾಪಗೌಡ ಪಾಟೀಲ್, ಹಂಪನಗೌಡ ಬಾದರ್ಲಿ, ಎ. ವೆಂಕಟೇಶ ನಾಯಕ, ಡಾ. ಶಿವರಾಜ ಪಾಟೀಲ್, ಜಿಪಂ ಅಧ್ಯಕ್ಷೆ ಲಲಿತಮ್ಮ ಲಿಂಗರಾಜು, ಜಿಪಂ ಸದಸ್ಯರಾದ ಮಹಾದೇವಪ್ಪಗೌಡ, ಮುರಾರಿ ಭಾಗವಹಿಸಲಿದ್ದಾರೆ.