'ಕಪ್ಪರಾಳ ತಿಪ್ಪಾ ಗ್ಯಾಂಗ್' ರಹಸ್ಯ ಬಯಲು
ಕ.ಪ್ರ. ವಾರ್ತೆ ಗುಲ್ಬರ್ಗ ಫೆ.10
ಜಿಲ್ಲೆಯ ವಾಡಿ ಪಟ್ಟಣದಲ್ಲಿ ಫೆ.3ರಂದು ನಡೆದಿದ್ದ ಟಿಪ್ಪರ್ ಚಾಲಕ ಇಸ್ಮಾಯಿಲ್ ಬಳಿಯಿದ್ದ 6.50 ಲಕ್ಷ ಹಣ ದೋಚಿ ಪರಾರಿಯಾಗಿದ್ದ ಬೈಕ್ ಸವಾರರಿಬ್ಬರ ಬೆನ್ನಟ್ಟಿದ್ದ ವಾಡಿ ಪೊಲೀಸರು, ಕೊನೆಗೂ ಈ ಪ್ರಕರಣವನ್ನಷ್ಟೇ ಅಲ್ಲ, ಮುಗ್ಧರನ್ನು ಯಾಮಾರಿಸಿ ಲಕ್ಷಾಂತರ ಹಣ ದೋಚುತ್ತಿದ್ದ ಆಂಧ್ರ ಮೂಲದ ಕಪ್ಪರಾಳ ತಿಪ್ಪಾ ಗ್ಯಾಂಗ್ ರಹಸ್ಯ ಭೇದಿಸುವಲ್ಲಿಯೂ ಯಶಸ್ವಿಯಾಗಿದ್ದಾರೆ.
ಸತತ ಕಾರ್ಯಾಚರಣೆಯಲ್ಲಿ ವಾಡಿ ಪೊಲೀಸರು ಕೊನೆಗೂ ಖದೀಮರನ್ನು ಬಂಧಿಸಿ ಟಿಪ್ಪರ್ ಚಾಲಕ ಇಸ್ಮಾಯಿಲ್ನ 6.50 ಲಕ್ಷ ದೋಚಲ್ಪಟ್ಟ ಹಣ ಮರಳುವಂತೆ ಮಾಡಿದ್ದಲ್ಲದೆ ಇನ್ನೂ ನಾಲ್ಕಾರು ಪ್ರಕರಣಗಳ ರಹಸ್ಯ ಭೇದಿಸಿದ್ದಾರೆ.
ಮಹಮ್ಮದ್ ಇಸ್ಮಾಯಿಲ್ ಪ್ರಕರಣದಲ್ಲಿ ದೋಚಲಾಗಿದ್ದ 6.50 ಲಕ್ಷ ನಗದು ಪೈಕಿ 6.42 ಲಕ್ಷ ಹಣ ಜಪ್ತಿ ಮಾಡಿದ್ದಾರೆ. ಆರೋಪಿಗಳಾದ ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯ ಕಾವಳಿ ತಾಲೂಕಿನ ಕಪ್ಪರಾಳ ತಿಪ್ಪಾ ಗ್ಯಾಂಗಿನ ಬಾಬು ಅಲಿಯಾಸ್ ಗೂಗಲ ಬಾಬು ತಂದೆ ಮೊರೀಶಶ್(28), ವಿಕ್ಟರ್ ತಂದೆ ರಾಮಬಾಬು(25) ಅವರನ್ನು ಬಂಧಿಸಿ ವಶಕ್ಕೆ ತೆಗೆದುಕೊಂಡಿದ್ದಾರೆ.
ಚಾಲಾಕಿ ಕಳ್ಳರು: ವಾಡಿಯಲ್ಲಿ ಅಕ್ಟೋಬರ್ 2013ರಂದು ದಾಖಲಾಗಿದ್ದ ಇನ್ನೊಂದು ಸುಲಿಗೆ ಪ್ರಕರಣದ 2 ಸಾವಿರ ಹಣ, ಬಸವಕಲ್ಯಾಣ ನಗರ ಠಾಣೆಯಲ್ಲಿ ಜ.31ರಂದು ವರದಿಯಾಗಿದ್ದ ಸುಲಿಗೆ ಪ್ರಕರಣದಲ್ಲಿ ಇದೇ ಆರೋಪಿಗಳು ಒಳಗೊಂಡಿದ್ದು, ಅದರಲ್ಲಿಯೂ ದೋಚಲಾಗಿದ್ದ 2 ಸಾವಿರ ಹಣ, ಒಂದು ಪಲ್ಸರ್ ಬೈಕ್(ಎಂ.ಎಚ್- 24 ಜಡ್-3557), ಹರಿದ ಹಳೆಯ ನೋಟುಗಳು(ಗಮನ ಬೇರೆ ಕಡೆಗೆ ಸೆಳೆಯುವ ಸಲುವಾಗಿ ಬಳಸುತ್ತಿದ್ದರು) ಹಾಗೂ 1 ಮೊಬೈಲ್ ವಶಪಡಿಸಿಕೊಂಡಿದ್ದಾರೆ.
ಕಪ್ಪರಾಳ ತಿಪ್ಪಾ ಗ್ಯಾಂಗಿನಲ್ಲಿದ್ದಾರೆ ಎಂದು ಹೇಳಲಾಗಿರುವ ರಾಜೇಶ ಅಲಿಯಾಸ್ ರಾಜು ತಂದೆ ಪೌಲ ಹಾಗೂ ಪವನ ತಂದೆ ನಾಗರಾಜ ಕಪ್ಪರಾಳ ತಿಪ್ಪಾ ಗ್ಯಾಂಗ್ ಇವರನ್ನು ಬಂಧಿಸಲು ಚಿತ್ತಾಪುರ ಪೊಲೀಸರ ಸಹಯೋಗದೊಂದಿಗೆ ವಾಡಿ ಪೊಲೀಸರು ಜಾಲ ಬೀಸಿದ್ದಾರೆ.
ಕುಡಿತದ ಚಟ ಪೊಲೀಸ್ ಬಲೆಗೆ ಬೀಳಿಸಿತು: ಫೆ.3ರಂದು ವಾಡಿಯಲ್ಲಿ ಪ್ರಕರಣ ದಾಖಲಾದ ನಂತರ ಡಿಎಸ್ಪಿ ಮಹೇಶ, ಚಿತ್ತಾಪುರ ಸಿಪಿಐ ಶಂಕರಗೌಡ ಪಾಟೀಲ್ ನೇತೃತ್ವದ ಪೊಲೀಸ್ ತಂಡ ಈ ಬಗ್ಗೆ ಚರ್ಚೆ ನಡೆಸಿತು. ಅಲ್ಲದೇ ಸಾರ್ವಜನಿಕರ ಸಹಕಾರದಿಂದ ಆರೋಪಿಗಳ ಚಹರೆ, ಅವರು ಸಾಗಿಹೋದ ದಿಕ್ಕಿನ ಮಾಹಿತಿ ಪಡೆಯುವಲ್ಲಿ ಯಶಸ್ವಿಯಾಗಿತ್ತು.
ಡಿಎಸ್ಪಿ ಮಹೇಶ 3 ತಂಡಗಳನ್ನು ರಚಿಸಿ ಕಾರ್ಯಾಚರಣೆಗೆ ಮುಂದಾಗಿ ಯಾದಗಿರಿ, ಗುಲ್ಬರ್ಗ ಹಾಗೂ ಚಿತ್ತಾಪುರ, ಸೇಡಂ, ತಾಂಡೂರು ಹೀಗೆ ನಾಲ್ಕಾರು ಪ್ರದೇಶಗಳಲ್ಲಿ ಈ ತಂಡಗಳು ಕಾರ್ಯಾಚರಣೆ ಆರಂಭಿಸಿದ್ದವು.
ಕುಂಬಾರಹಳ್ಳಿ ಗೇಟಿನ ಹತ್ತಿರ ಒಂದು ವೈನ್ಶಾಪಿನಲ್ಲಿ ಬಾಟಲಿಗಳನ್ನು ತೆಗೆದುಕೊಂಡು ಹೋಗಿರುತ್ತಾರೆ ಅಂತಾ ಯಾದಗಿರಿ ಕಡೆಗೆ ಹೋದ ತಂಡಕ್ಕೆ ಮಹತ್ವದ ಸುಳಿವು ಸಿಕ್ಕಿತ್ತು. ಈ ಸುಳಿವೇ ಪೊಲೀಸರು ಆರೋಪಿಗಳವರೆಗೂ ಲೀಲಾಜಾಲವಾಗಿ ಹೋಗಿ ತಲುಪುವಂತೆ ಮಾಡಿದ್ದು. ಈ ಕುಡಿತದ ಬಾಟಲ್ ಖರೀದಿಯ ಮಾಹಿತಿ ಅನುಸರಿಸಿ ನಾಲವಾರ, ಯಾದಗಿರಿ, ಶಹಾಪುರ ತಿರುಗಾಡಿ ನಿರಂತರ ಮಾಹಿತಿ ಸಂಗ್ರಹಿಸಿದ ಪೊಲೀಸರು, ಸದರಿ ಆರೋಪಿತರಿಗೆ ಬಿಡಲಾರದ ಕುಡಿತದ ಚಟ ಇರುವುದನ್ನು ಖಚಿತಪಡಿಸಿಕೊಂಡು ವೈನ್ಶಾಪ್ಗಳು, ರೈಲು ನಿಲ್ದಾಣಗಳಲ್ಲಿ ನಿರಂತರ 3 ದಿವಸ ಹುಡುಕಾಡಿದರು.
ಗುಲ್ಬರ್ಗ ಪಾರ್ಕಿಂಗ್ನಲ್ಲಿ ಕಂಡಿತು ಬೈಕ್: ಖದೀಮರ ಬೈಕ್ ಹುಡುಕಾಟದಲ್ಲಿದ್ದ ಗುಲ್ಬರ್ಗ ತಂಡಕ್ಕೆ ಸ್ಟೇಷನ್ನಲ್ಲಿನ ಪಾರ್ಕಿಂಗ್ನಲ್ಲೇ ಖದೀಮರು ಬಳಸುತ್ತಿದ್ದ ಬೈಕ್ ಕಂಡಿತು. ಮರೆಯಲ್ಲಿ ಅವಿತು ಕುಳಿತ ಚಿತ್ತಾಪುರ ಸಿಪಿಐ ಶಂಕರಗೌಡ ಪಾಟೀಲ್ ಹಾಗೂ ತಂಡದ ಸದಸ್ಯರು ಬಹುಹೊತ್ತಿನ ನಂತರ ಬೈಕ್ ಸವಾರಿಗೆಂದು ಇಬ್ಬರು ಯುವಕರು ಬರುತ್ತಿದ್ದಂತೆಯೇ ದಾಳಿ ಮಾಡಿದ್ದಾರೆ. ತಕ್ಷಣ ಅವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅವರ ಕೈಯಲ್ಲಿದ್ದ ಹಸಿರು ಚೀಲ(ಹಣ ಸಮೇತ) ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಗುಲ್ಬರ್ಗ, ಯಾದಗಿರಿ, ಶಹಾಪುರ, ಬೀದರ್, ಬಸವಕಲ್ಯಾಣ ಸೇರಿದಂತೆ ಅನೇಕ ನಗರ- ಪಟ್ಟಣಗಳಲ್ಲಿ ಈ ಗ್ಯಾಂಗ್ ಅಮಾಯಕರ ಸುಲಿಗೆಯಲ್ಲಿ ನಿರತವಾಗಿತ್ತು. ಪೊಲೀಸರಿಗೆ ಈ ಬೆಳವಣಿಗೆ ಬಹುದೊಡ್ಡ ತಲೆನೋವಾಗಿತ್ತು. ಅನೇಕ ಸುಲಿಗೆ ಪ್ರಕರಣಗಳು ಪತ್ತೆಯಾಗದೆ ಉಳಿದುಕೊಂಡಿದ್ದವು. ಈ ಗ್ಯಾಂಗ್ನ ಇಬ್ಬರು ಸದಸ್ಯರ ಬಂಧನದಿಂದ ನಾಲ್ಕು ಪ್ರಕರಣಗಳು ಪತ್ತೆಯಾಗಿವೆ. ಗ್ಯಾಂಗಿನ ಇನ್ನೂ ಮೂವರು ಸದಸ್ಯರ ಪತ್ತೆಗೆ ಜಾಲ ಬೀಸಲಾಗಿದ್ದು ಬಂಧಿಸುವ ವಿಶ್ವಾಸ ಸಿಪಿಐ ಶಂಕರಗೌಡ ವ್ಯಕ್ತಪಡಿಸಿದ್ದಾರೆ.
ಕಪ್ಪರಾಳ ತಿಪ್ಪಾ ಗ್ಯಾಂಗ್?
ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆ ಕಾವಲಿ ತಾಲೂಕಿನ ಕಪ್ಪರಾಳ ಹಳ್ಳಿಯ ನಿವಾಸಿಗಳು ಅಮಾಯಕರ ದೋಚುವ ಪ್ರಸಂಗಗಳಲ್ಲಿ ತೊಡಗಿಸಿಕೊಂಡಿದ್ದರಿಂದ ಆ ಗ್ಯಾಂಗ್ನ್ನೇ ಪೊಲೀಸರು 'ಕಪ್ಪರಾಳ ತಿಪ್ಪಾ ಗ್ಯಾಂಗ್' ಎಂದು ಹೆಸರಿಸಿದ್ದಾರೆ. ದಶಕದಿಂದ ಈ ಗ್ಯಾಂಗ್ ಗುಲ್ಬರ್ಗ, ಬೀದರ್, ಯಾದಗಿರಿ ಜಿಲ್ಲೆಗಳಲ್ಲಿ ಕಾರ್ಯೋನ್ಮುಖವಾಗಿತ್ತು. ಅಲ್ಲಲ್ಲಿ ನಡೆಯುತ್ತಿದ್ದ ಅಮಾಯಕರ ದೋಚುವ ಪ್ರಸಂಗಗಳಿಂದಲೇ ಸಾಬೀತಾಗಿದೆ. ಬಹಳಷ್ಟು ಬ್ಯಾಂಕುಗಳ ಹತ್ತಿರ ಹಳ್ಳಿಯ ಮುಗ್ಧ ಜನರ ಹಣ ದೋಚಿದ ಪ್ರಕರಣಗಳನ್ನು ಈ ಗ್ಯಾಂಗ್ ಸದಸ್ಯರೇ ಮಾಡಿರುವುದು ಬಂಧಿತ ಸದಸ್ಯರು ಒಪ್ಪಿಕೊಂಡಿದ್ದಾರೆ.
ಕಾರ್ಯಾಚರಣೆಯಲ್ಲಿ ಪೊಲೀಸರು
ಶಹಾಬಾದ್ ಡಿವೈಎಸ್ಪಿ ಮಹೇಶ ಮೇಘಣ್ಣನವರ, ಚಿತ್ತಾಪುರ ಸಿಪಿಐ ಶಂಕರಗೌಡ ವಿ. ಪಾಟೀಲ್, ವಾಡಿ ಪಿಎಸ್ಐ(ಅಪರಾಧ ವಿಭಾಗ) ನೀಲಮ್ಮ, ವಾಡಿ ಪೊಲೀಸ್ ಠಾಣೆಯ(ಕಾನೂನು ಸುವ್ಯವಸ್ಥೆ) ಪಿಎಸ್ಐ ನಟರಾಜ ಲಾಡೆ, ವಾಡಿ ಠಾಣೆ ಪೇದೆಗಳಾದ ಸದಾಶಿವ, ಶರಣಪ್ಪ, ಚಂದ್ರಶೇಖರ, ವೆಂಕಟರಾವ, ರಮೇಶ, ವೀರಾರೆಡ್ಡಿ, ಗುಂಡಪ್ಪ, ದೊಡ್ಡಪ್ಪ, ಸತೀಶ್ಚಂದ್ರ, ಮಹ್ಮದ ಯುಸೂಫ್, ರಮೇಶ, ರಾಜು, ಪ್ರಭು, ಚಂದ್ರಶೇಖರ.