ಸಾಹಿತ್ಯ ಬದುಕು ರೂಪಿಸುವಂತಿರಲಿ
ಜಗನ್ನಾಥ ಆರ್. ದೇಸಾಯಿ
(ಬಸವಪ್ಪಶಾಸ್ತ್ರಿ ವೇದಿಕೆ)
ಕ.ಪ್ರ. ವಾರ್ತೆ ಮಸ್ಕಿ ಫೆ.11
ಜನಸಾಮಾನ್ಯರ ಬದುಕು ಕಟ್ಟಿಕೊಡುವ ನಿಟ್ಟಿನಲ್ಲಿ ನೆರವಾಗುವಂಥ ಸಾಹಿತ್ಯದ ರಚನೆ ಇಂದಿನ ಅವಶ್ಯಕ. ಸಾಹಿತಿಗಳು ಇಂಥ ಸಾಹಿತ್ಯ ರಚನೆಗೆ ಹೆಚ್ಚಿನ ಒತ್ತು ನೀಡಬೇಕು. ಸಾಹಿತ್ಯ ಬೆಳಕು ನೀಡುವ ಕೆಲಸ ಮಾಡುತ್ತದೆ ಎಂದು ಅಖಿಲ ಭಾರತ 80ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಹಾಗೂ ಖ್ಯಾತ ಸಾಹಿತಿ ನಾ. ಡಿಸೋಜಾ ಅಭಿಪ್ರಾಯ ವ್ಯಕ್ತಪಡಿಸಿದರು.
ಮಸ್ಕಿಯಲ್ಲಿ ನಡೆಯುತ್ತಿರುವ ರಾಯಚೂರು ಜಿಲ್ಲಾ 8ನೇ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿ, ಸಾಹಿತ್ಯವು ಜನರ ಬದುಕಿಗೆ ಹೊಸ ಮೆರುಗು, ಸೊಬಗು ತಂದುಕೊಡುವ ಕಾರ್ಯ ಮಾಡಬೇಕು. ಈ ನಿಟ್ಟಿನಲ್ಲಿ ಸಾಹಿತಿಗಳು ಹೆಚ್ಚಿನ ಗಮನಹರಿಸುವುದು ಸೂಕ್ತ ಎಂದರು.
ಸಾಹಿತ್ಯವು ಅದರ ಭಾಷೆಯನ್ನು ಪ್ರತಿನಿಧಿಸುತ್ತದೆ. ಮಾಧ್ಯಮವು ಮನಸನ್ನು ಅರಳಿಸುತ್ತದೆ. ಅವಿದ್ಯಾವಂತ, ವಿದ್ಯಾವಂತರು ಎನ್ನದೇ ಎಲ್ಲರಿಗೆ ಸಾಹಿತ್ಯದಲ್ಲಿ ಆಸಕ್ತಿ ಮೂಡಲು ಅದು ಬದುಕು, ಬವಣೆಯನ್ನು ಒಳಗೊಂಡಿರುವುದೇ ಕಾರಣ ಎಂದು ಹೇಳಿದರು.
ಗಾದೆ ಮಾತುಗಳು ಮರೆ: ಕನ್ನಡ ಸಾಹಿತಿಗಳು ಕನ್ನಡತನವನ್ನು ಬೆಳೆಸುವ ಕಾರ್ಯ ಮಾಡಿದ್ದಾರೆ. ಸಾಹಿತ್ಯದಿಂದ ಜನರ ಬದುಕಿನ ಶ್ರೇಷ್ಠತೆಗೆ ದಾರಿಯಾಗುತ್ತದೆ. ಕನ್ನಡ ಭಾಷೆಯ ಶ್ರೀಮಂತಿಕೆಯು ಇಂದು ಸೊರಗುತ್ತಿದೆ. ಯಾಂತ್ರೀಕೃತ ಬದುಕಿನ ಭರದಲ್ಲಿ ಕನ್ನಡ ಮರೆಯಾಗುತ್ತಿದೆ. ಗ್ರಾಮೀಣ ಭಾಗದಲ್ಲಷ್ಟೇ ಸದ್ಯ ಕನ್ನಡತನ ಎಂಬುದು ಹಾಸುಹೊಕ್ಕಾಗಿದೆ. ಆದರೆ ಗ್ರಾಮೀಣ ಪ್ರದೇಶಕ್ಕೂ ಆಂಗ್ಲ ಮಾಧ್ಯಮ ಶಾಲೆಗಳು ಕಾಲಿಡುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಆಧುನಿಕ ಜಗತ್ತಿನಲ್ಲಿ ಬದುಕು ಪ್ರತಿಬಿಂಬಿಸುವ ಮಾತು ಇಂದು ಮಾಯವಾಗುತ್ತಿದ್ದು, ಮಾತುಗಳು ಆಳ, ವಿಸ್ತಾರವನ್ನು ಕಳೆದುಕೊಂಡಿವೆ. ಅರ್ಥವಿಲ್ಲದ ಮಾತುಗಳೇ ಹೆಚ್ಚಾಗಿವೆ. ಜನರ ಬದುಕಿನಿಂದ ಗಾದೆ ಮಾತುಗಳು ಮರೆಯಾಗುತ್ತಿವೆ ಎಂದು ಹೇಳಿದರು.
ಸಾಹಿತ್ಯ ಪ್ರಜ್ಞೆಗೆ ಸಮ್ಮೇಳನ ಪೂರಕ: ಸಾಹಿತ್ಯ ಪ್ರಜ್ಞೆ ಮೂಡಿಸಲು ಸಾಹಿತ್ಯ ಸಮ್ಮೇಳನಗಳು ಪೂರಕವಾಗಿವೆ. ಹೆಚ್ಚೆಚ್ಚು ಸಾಹಿತ್ಯ ಸಮ್ಮೇಳನಗಳು ನಡೆಯಬೇಕು. ಅದರಿಂದ ಭಾಷೆಯ ರಕ್ಷಣೆ ಮತ್ತು ಬೆಳವಣಿಗೆಗೆ ಸಹಾಯಕ. ಬೇರೆ ಭಾಷೆಯ ಪ್ರಭಾವದಿಂದ ಕನ್ನಡತನ ಮರೆಯಾಗುತ್ತಿರುವ ಅಪಾಯವಿದೆ. ಇಂಥ ಸಂದಿಗ್ಧ ಸ್ಥಿತಿಯಲ್ಲಿ ಕನ್ನಡ ಭಾಷೆಯ ಅಳಿವು- ಉಳಿವು ಸಾಹಿತ್ಯ ಮತ್ತು ಸಾಹಿತ್ಯ ರಚನೆಕಾರರ ಕೈಯಲ್ಲಿದೆ ಎಂದು ಹೇಳಿದರು.
ಪ್ರಜ್ಞಾವಂತರಾಗಿ ಬಾಳಿ: ಜಿಲ್ಲಾ ಉಸ್ತುವಾರಿ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ಮಾತನಾಡಿ, ಶ್ರೀಮಂತಿಕೆಯಿಂದ ಸಮೃದ್ಧಿ ಅಸಾಧ್ಯ. ವೈಚಾರಿಕತೆಯಿಂದ ಕೂಡಿದ ಸಮೃದ್ಧಿಯೇ ಶ್ರೀಮಂತಿಕೆ ಎಂಬುದನ್ನು ಎಲ್ಲರೂ ಅರಿಯಬೇಕಿದೆ. ವೈಚಾರಿಕತೆಯನ್ನು ಬೆಳೆಸಿಕೊಂಡು ಎಲ್ಲರೂ ಪ್ರಜ್ಞಾವಂತರಾಗಿ ಬಾಳುವ ಅವಶ್ಯಕತೆಯಿದೆ ಎಂದು ಹೇಳಿದರು.
ರಾಯಚೂರಿನಲ್ಲಿ ಸ್ಥಾಪಿಸಿರುವ ದಾಸ ಸಾಹಿತ್ಯ ಅಧ್ಯಯನ ಕೇಂದ್ರಕ್ಕೆ ಸರ್ಕಾರದಿಂದ ಸೂಕ್ತ ಅನುದಾನ ದೊರಕಿಸುವ ಕಾರ್ಯ ಮಾಡುವುದಾಗಿ ಭರವಸೆ ನೀಡಿದ ಅವರು, ದಾಸರು, ಶರಣರು ತಮ್ಮ ಸಾಹಿತ್ಯದಿಂದ ಸಮಾಜದ ಕಣ್ತೆರೆಸುವ ಕಾರ್ಯ ಮಾಡಿದ್ದಾರೆ. ಸಾಮಾಜಿಕ ಸಮಸ್ಯೆಗಳಿಗೆ ದಾಸ ಸಾಹಿತ್ಯ ಮತ್ತು ವಚನ ಸಾಹಿತ್ಯದಿಂದ ಮಾತ್ರ ಪರಿಹಾರ ಕಾಣಲು ಸಾಧ್ಯ ಎಂದರು.
ಕನ್ನಡ ಸಾಹಿತ್ಯ ಪರಿಷತ್ತಿನ ಎಲ್ಲ ಕಾರ್ಯಕ್ರಮಗಳಿಗೆ ರಾಜ್ಯ ಸರ್ಕಾರದಿಂದ ಅಗತ್ಯ ಹಣಕಾಸು ಸವಲತ್ತು ಒದಗಿಸಲಾಗುತ್ತದೆ. ಆ ಮೂಲಕ ಕನ್ನಡ ಬೆಳವಣಿಗೆಗೆ ಪೂರಕ ಪರಿಸರ ನಿರ್ಮಾಣ ಮಾಡುವಲ್ಲಿ ಸರ್ಕಾರ ಬದ್ಧವಾಗಿದೆ ಎಂದು ಸಚಿವರು ಭರವಸೆ ನೀಡಿದರು.
ರಾಜ್ಯ ಸರ್ಕಾರದಿಂದ 11 ಕೋಟಿ: ಸಮಾರಂಭದಲ್ಲಿ ಆಶಯ ನುಡಿಗಳನ್ನಾಡಿದ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಸಂಗಮೇಶ ಬಾದವಾಡಗಿ ಅವರು, ಪರಿಷತ್ತಿಗೆ 100 ವರ್ಷ ತುಂಬುತ್ತಿರುವ ಈ ಸಂದರ್ಭದಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿಯೂ ಸಾಹಿತ್ಯಿಕ ಕಾರ್ಯಕ್ರಮಗಳನ್ನು ಆಯೋಜಿಸಲು ನಿರ್ಧರಿಸಲಾಗಿದೆ ಎಂದರು.
ತಾಲೂಕು ಕೇಂದ್ರಕ್ಕೆ ಸೀಮಿತವಾಗಿದ್ದ ಸಾಹಿತ್ಯ ಸಮ್ಮೇಳನಗಳನ್ನು ಇನ್ನು ಮುಂದೆ ಹೋಬಳಿ ಕೇಂದ್ರಗಳಲ್ಲಿ ಆಯೋಜಿಸಿದರೆ ಕೇಂದ್ರ ಪರಿಷತ್ತು ಆರ್ಥಿಕ ನೆರವು ನೀಡಲಿದೆ. ಸಾಹಿತ್ಯ ಪರಿಷತ್ತಿನ ಶತಮಾನೋತ್ಸವದ ಅಂಗವಾಗಿ ರಾಜ್ಯ ಸರ್ಕಾರ 11 ಕೋಟಿ ನೀಡಿದ್ದು, ಈ ಹಣದಿಂದಲೇ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ ಎಂದು ತಿಳಿಸಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಹಾಂತೇಶ್ ಮಸ್ಕಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಮಾರಂಭದಲ್ಲಿ ಸಮ್ಮೇಳನಾಧ್ಯಕ್ಷ ಡಾ. ಸ್ವಾಮಿರಾವ್ ಕುಲಕರ ಿ, ಶಾಸಕ ಹಾಗೂ ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷ ಪ್ರತಾಪಗೌಡ ಪಾಟೀಲ್, ಶಾಸಕರಾದ ಮಾನಪ್ಪ ವಜ್ಜಲ್, ಹಂಪನಗೌಡ ಬಾದರ್ಲಿ, ಮಾಜಿ ಶಾಸಕ ಅಮರೇಗೌಡ ಬಯ್ಯಾಪುರ, ಜಿಪಂ ಅಧ್ಯಕ್ಷೆ ಲಲಿತಮ್ಮ ಪಾಟೀಲ್, ಮಾಜಿ ಎಂಎಲ್ಸಿ ಮನೋಹರ ಮಸ್ಕಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ವಸಂತಕುಮಾರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಡಾ. ಬಸವಲಿಂಗ ಸೊಪ್ಪಿಮಠ ಅವರ 'ಕಾಳಾಮುಖ ಚತುರಾಚಾರ್ಯರು ಮತ್ತು ಇತರೆ ಸಂಶೋಧನಾ ಲೇಖನಗಳು' ಸೇರಿದಂತೆ ವಿವಿಧ ಕೃತಿಗಳನ್ನು ಬಿಡುಗಡೆಗೊಳಿಸಲಾಯಿತು.
ಜಿಲ್ಲೆಯ ವಿವಿಧೆಡೆಯಿಂದ ಆಗಮಿಸಿದ್ದ ಸಾವಿರಾರು ಸಂಖ್ಯೆಯ ಸಾಹಿತ್ಯಾಸಕ್ತರು ಪಾಲ್ಗೊಂಡಿದ್ದರು.