ನಾಮಫಲಕ ಹಾಕಲು ಒತ್ತಾಯ
ಸಿಂಧನೂರು: ನಗರದ ಪ್ರಮುಖ ವೃತ್ತಗಳಲ್ಲಿ ಬೇರೆ ಬೇರೆ ಊರಿಗೆ ಹೋಗುವ ಮಾರ್ಗಸೂಚಿ ಫಲಕಗಳನ್ನು ಹಾಕುವಂತೆ ಮನುಜಮತ ಬಳಗದ ಕಾರ್ಯದರ್ಶಿ ಬಸವರಾಜ ಬಾದರ್ಲಿ ಒತ್ತಾಯಿಸಿದ್ದಾರೆ. ಈ ಕುರಿತು ಹೇಳಿಕೆ ನೀಡಿರುವ ಅವರು, ಸಿಂಧನೂರು ನಗರದ ಜನಸಂಖ್ಯೆ, ವಾಹನಗಳ ಓಡಾಟ ದಿನನಿತ್ಯ ಹೆಚ್ಚುತ್ತಿವೆ. ಪ್ರಮುಖ ವೃತ್ತಗಳಲ್ಲಿ ಕೆಲವು ಬಾರಿ ಪೊಲೀಸ್ ಪೇದೆಗಳೆ ನಿಂತಿರುವುದಿಲ್ಲ. ದೂರದ ಹೈದ್ರಾಬಾದ್, ಬೀದರ್, ಬೆಂಗಳೂರು, ಮಂಗಳೂರು ಕಡೆಯಿಂದ ಬರುವ ಖಾಸಗಿ ವಾಹನಗಳ ಪ್ರಯಾಣಿಕರು ಗಾಂಧಿ ವೃತ್ತ, ಚನ್ನಮ್ಮ ವೃತ್ತ, ಅಂಬೇಡ್ಕರ್ ವೃತ್ತಗಳಲ್ಲಿ ದಿನ ನಿತ್ಯವು ವಾಹನಗಳನ್ನು ನಿಲ್ಲಿಸಿ ರಸ್ತೆಯ ಕುರಿತು ಮಾಹಿತಿ ಕೇಳುವುದು ಸಾಮಾನ್ಯವಾಗಿದೆ. ಮೊದಲೇ ವಾಹನಗಳ ಭರಾಟೆ ಹೆಚ್ಚಿರುವುದರಿಂದ ರಸ್ತೆಯ ಪಕ್ಕದಲ್ಲಿ ಖಾಸಗಿ ವಾಹನಗಳು ಕೆಲ ಕಾಲ ನಿಂತರೂ ಸಹ ಟ್ರಾಫಿಕ್ ಜಾಮ್ ಆಗುವುದು ಸಹಜ. ಆದ್ದರಿಂದ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಮುತುವರ್ಜಿ ವಹಿಸಿ ಪ್ರಮುಖ ವೃತ್ತಗಳಲ್ಲಿ ದೊಡ್ಡ ಅಕ್ಷರಗಳಲ್ಲಿ ನಾಮಫಲಕ ಹಾಕಬೇಕು. ಮಾರ್ಗಸೂಚಿ ಚಿಹ್ನೆಗಳನ್ನು ಹಾಕಬೇಕೆಂದು ಮನವಿ ಮಾಡಿದ್ದಾರೆ.