ಮಾ.31ರವರೆಗೆ ಕಾಲುವೆಗೆ ನೀರು; ರೈತರು ಆತಂಕಪಡಬೇಕಿಲ್ಲ- ಶಾಸಕ
ಸಿಂಧನೂರು: ಬೇಸಿಗೆಯ ಬೆಳೆಗಳಿಗೆ ನೀರಿನ ಕೊರತೆಯಾಗದಂತೆ ಭದ್ರಾ ಜಲಾಶಯದಿಂದ 4 ಟಿಎಂಸಿ ನೀರನ್ನು ತುಂಗಾ ನದಿಗೆ ಬಿಡಲು ರಾಜ್ಯ ಸರ್ಕಾರ ಒಪ್ಪಿಗೆ ನೀಡಿದೆ ಎಂದು ಶಾಸಕ ಹಂಪನಗೌಡ ಬಾದರ್ಲಿ ತಿಳಿಸಿದರು.
ನಗರ ಶಾಸಕರ ಕಾರ್ಯಾಲಯದಲ್ಲಿ ಬುಧವಾರ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮುನಿರಾಬಾದ್ ಕಾಡಾ ಕಚೇರಿಯಲ್ಲಿ ಫೆ.7ರಂದು ನಡೆದ ಐಸಿಸಿ ಸಭೆಯಲ್ಲಿ, ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಭದ್ರಾ ಜಲಾಶಯದಿಂದ ತುಂಗಭದ್ರಾ ನದಿಗೆ 6ರಿಂದ 8 ಟಿಎಂಸಿ ನೀರು ಬಿಡಲು ಕೊಪ್ಪಳ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ, ಎರಡು ಜಿಲ್ಲೆಯ ಶಾಸಕರು, ಅಧಿಕಾರಿಗಳು ಹಾಗೂ ರೈತರ ಮುಖಂಡರು ಒತ್ತಾಯಿಸಿದ್ದರು.
ಇದಕ್ಕೆ ಅಧಿಕಾರಿಗಳು ಮುಂದಿನ ದಿನಗಳಲ್ಲಿ ಹೆಚ್ಚಿನ ನೀರು ಬಿಡಲು ಭರವಸೆ ನೀಡಿ ಸದ್ಯಕ್ಕೆ 4 ಟಿಎಂಸಿ ನೀರು ಬಿಡಲು ನಿರ್ಧರಿಸಿದ್ದರು. ಅದರನ್ವಯ ನೀರು ಬಿಡಲು ಸರ್ಕಾರ ಫೆ.11ರಂದು ಆದೇಶ ಹೊರಡಿಸಿದೆ. ಇದರಿಂದಾಗಿ ಮಾ.31ರವರೆಗೆ ಟಿಬಿ ಎಡದಂಡೆ ನಾಲೆಗೆ ನೀರು ಹರಿಯುತ್ತದೆ. ರೈತರು ಆತಂಕಕ್ಕೆ ಒಳಗಾಗಬೇಕಿಲ್ಲ.
ಈ ಭಾಗದ ರೈತರಿಗೆ ಬೇಸಿಗೆ ಬೆಳೆಗೆ ನೀರಿನ ಕೊರತೆಯಾಗದಂತೆ ರಾಜ್ಯ ಸರ್ಕಾರ ಕಾಳಜಿ ವಹಿಸಿದೆ ಎಂದು ತಿಳಿಸಿದರು.
ಪ್ರಚಾರಪ್ರಿಯನಲ್ಲ: ಇತ್ತೀಚೆಗೆ ಕೆಲ ಮುಖಂಡರು ತಮ್ಮ ಅಭಿವೃದ್ಧಿ ಕೆಲಸ ಕಾರ್ಯಗಳನ್ನು ಸಹಿಸಲಾಗದೆ ಶಾಸಕರು ಪ್ರಚಾರ ಪ್ರೀಯರು ಎಂದು ಹೇಳಿಕೆ ನೀಡುತ್ತಿದ್ದಾರೆ. ಅದು ಶುದ್ಧ ಸುಳ್ಳು. ತಾವು ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದೇನೆ. ಅಭಿವೃದ್ಧಿ ಕೆಲಸಗಳಿಗೆ ಪ್ರತಿಪಕ್ಷದವರು ಕೈ ಜೋಡಿಸಬೇಕೇ ವಿನಃ ಸಾರ್ವಜನಿಕರನ್ನು ದಿಕ್ಕು ತಪ್ಪಿಸುವ ಹೇಳಿಕೆಗಳನ್ನು ನೀಡಬಾರದು ಎಂದು ಹೇಳಿದರು.
ಈ ಸಂದರ್ಭದಲ್ಲಿ ತಾಪಂ ಉಪಾಧ್ಯಕ್ಷ ನಾಗಪ್ಪ ಗೋಮರ್ಸಿ, ಗಾಂಧಿನಗರದ ಗ್ರಾ.ಪಂ. ಅಧ್ಯಕ್ಷ ಗೋಪಿನಿಡಿ ಕೃಷ್ಣ ಇದ್ದರು.