ಪ್ಲಾಸ್ಟಿಕ್ ನಿಷೇಧಕ್ಕೆ ಆಗ್ರಹಿಸಿ ಇಂದು ರ್ಯಾಲಿ
ರಾಯಚೂರು: ನಗರದಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧಿಸಿ ನಗರಸಭೆ ನಿರ್ಧಾರ ಕೈಗೊಂಡಿದ್ದರೂ ಪ್ಲಾಸ್ಟಿಕ್ ಬಳಕೆ ಯಥಾರೀತಿ ಮುಂದುವರಿದಿದ್ದು, ಇದನ್ನು ಖಂಡಿಸಿ ಹಾಗೂ ಪ್ಲಾಸ್ಟಿಕ್ ಬಳಕೆ ನಿಷೇಧಕ್ಕೆ ಒತ್ತಾಯಿಸಿ ಫೆ.14ರಂದು ಜಾಗೋ ರಾಯಚೂರು ಜಾಗೋ ಸಂಘಟನೆಯಿಂದ ಆಂದೋಲನ ಆಯೋಜಿಸಲಾಗಿದೆ.
ನಗರದಲ್ಲಿ ಗುರುವಾರ ಜಾಗೋ ರಾಯಚೂರು ಜಾಗೋ ಸಂಘಟನೆಯಿಂದ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಜಂಬುನಾಥ ಯಾದವ್ ಅವರು, ಪ್ಲಾಸ್ಟಿಕ್ ಹಟಾವೋ, ಪರಿಸರ್ ಬಚಾವೋ ಎಂಬ ಘೋಷಣೆಯೊಂದಿಗೆ ನಡೆಯಲಿರುವ ಆಂದೋಲನದಲ್ಲಿ ಫೆ.14ರಂದು ನಗರದಲ್ಲಿ ಬೃಹತ್ ರ್ಯಾಲಿಯನ್ನು ಆಯೋಜಿಸಲಾಗಿದೆ ಎಂದರು.
ನಗರಸಭೆ ನಿರ್ಲಕ್ಷ್ಯ: ನಗರದ ಚಂದ್ರಮೌಳೇಶ್ವರ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿನವರೆಗೆ ಈ ರ್ಯಾಲಿ ನಡೆಸಲಾಗುತ್ತಿದ್ದು, ನಗರಸಭೆಯು 2011ರಲ್ಲಿಯೇ ನಗರದಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧಿಸಿ ಸಾಮಾನ್ಯ ಸಭೆಯಲ್ಲಿ ಅನುಮೋದಿಸಿದೆ. ಆದರೆ ನಗರಸಭೆಯ ಅಧಿಕಾರಿಗಳು ಆಡಳಿತ ಮಂಡಳಿಯ ನಿರ್ಧಾರವನ್ನು ಕಟ್ಟುನಿಟ್ಟಾಗಿ ಜಾರಿಗೆ ತರದೇ ನಿರ್ಲಕ್ಷ್ಯ ತೋರಿದೆ ಎಂದು ಆರೋಪಿಸಿದರು.
ಇತ್ತೀಚೆಗೆ ಮಲಿಯಾಬಾದ್‌ನ ಗೋಶಾಲೆಯಲ್ಲಿ ಪ್ಲಾಸ್ಟಿಕ್ ಸೇವನೆಯಿಂದಲೇ ಅನೇಕ ಗೋವುಗಳು ಸಾವನ್ನಪ್ಪಿದ್ದು, ಪಶುಸಂಗೋಪನಾ ಇಲಾಖೆಯ ಮರಣೋತ್ತರ ವರದಿಯಿಂದ ಬಹಿರಂಗಗೊಂಡಿದೆ. ಈ ಘಟನೆಯು ನಗರದಲ್ಲಿ ಪ್ಲಾಸ್ಟಿಕ್ ಬಳಕೆಯ ಪ್ರಮಾಣವನ್ನು ಹೊರಹಾಕಿದೆ. ಇಂಥ ಆತಂಕದ ಪರಿಸ್ಥಿತಿಯಿದ್ದರೂ ನಗರಸಭೆ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿದರು.
ಪರಿಸರ ಸಂರಕ್ಷಣೆಗೆ ಒತ್ತಾಯ: ದೇಶದ ಸರ್ವೋಚ್ಚ ನ್ಯಾಯಾಲಯ ಮತ್ತು ರಾಜ್ಯ ಸರ್ಕಾರದಿಂದ ಈ ನಿಟ್ಟಿನಲ್ಲಿ ನಿರ್ದೇಶನಗಳಿದ್ದರೂ ಅಧಿಕಾರಿಗಳು ಅವುಗಳ ಪಾಲನೆಗೆ ಕ್ರಮ ಕೈಗೊಳ್ಳುತ್ತಿಲ್ಲ. ಅದರಿಂದ ಪರಿಸರಕ್ಕೆ ತೀವ್ರ ಹಾನಿಯಾಗಿದೆ ಎಂದು ಆರೋಪಿಸಿದ ಅವರು, ನಗರದ ಜನತೆಯಲ್ಲಿ ಅರಿವು ಮೂಡಿಸಿ ಪರಿಸರ ಸಂರಕ್ಷಣೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಫೆ.14ರಂದು ನಗರದಲ್ಲಿ ಸಂಘಟನೆ ಯಿಂದ ರ್ಯಾಲಿ ಆಯೋಜಿಸಲಾಗಿದೆ ಎಂದು ಹೇಳಿದರು.
ಪ್ಲಾಸ್ಟಿಕ್ ಬಳಕೆಯಿಂದಾಗುವ ಅಪಾಯ ಮತ್ತು ಪರಿಸರಕ್ಕಾಗುವ ಹಾನಿಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಮೂಲಕ ಸಮಸ್ಯೆ ಪರಿಹರಿಸುವ ಕಾರ್ಯ ಆಗಬೇಕಿದೆ. ಹಾಗೆಯೇ ಪ್ಲಾಸ್ಟಿಕ್ ಚೀಲ ಬಳಕೆಗೆ ಅವಕಾಶ ನೀಡದಂತೆ ಅಧಿಕಾರಿಗಳೂ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಹೋರಾಟದ ಮೂಲಕ ಒತ್ತಾಯಿಸಲಾಗುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಂಘಟನೆಯ ಪ್ರಮುಖರಾದ ಕಿರಣ್ ಕುಮಾರ್, ಸೋಮನಾಥ ಯಾದವ್, ರಾಜೇಂದ್ರ ಕುಮಾರ್, ರಾಘವೇಂದ್ರ ಯಾದವ್, ಶಬ್ಬೀರ್ ಅಹ್ಮದ್, ರಾಕೇಶ್, ಸಂದೀಪ್ ಸೇರಿ ಅನೇಕರಿದ್ದರು.