ಮುದಗಲ್: ಉಚಿತ ನೇತ್ರ ಶಸ್ತ್ರಚಿಕಿತ್ಸಾ ಶಿಬಿರ
ಮುದಗಲ್: ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಜಿಲ್ಲಾ ಅಂಧತ್ವ ನಿವಾರಣಾ ಸಂಸ್ಥೆ, ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಸಂಚಾರಿ ನೇತ್ರ ಚಿಕಿತ್ಸಾ ಘಟಕದ ಸಹಯೋಗದೊಂದಿಗೆ ಉಚಿತ ನೇತ್ರ ಶಸ್ತ್ರಚಿಕಿತ್ಸಾ ಶಿಬಿರ ಜರುಗಿತು. ರಾಯಚೂರಿನ ಡಾ. ಪ್ರಣತಿ ನೇತೃತ್ವದಲ್ಲಿ ನೇತ್ರ ಚಿಕಿತ್ಸಾ ಶಿಬಿರವನ್ನು ಕೈಗೊಳ್ಳಲಾಗಿತ್ತು. ಶಿಬಿರದಲ್ಲಿ 25ಕ್ಕೂ ಹೆಚ್ಚು ಜನರಿಗೆ ಕಣ್ಣಿನ ತಪಾಸಣೆ ಮಾಡಿ 18ಕ್ಕೂ ಹೆಚ್ಚು ಜನರಿಗೆ ಶಸ್ತ್ರಚಿಕಿತ್ಸೆಗೆ ಮಾಡಲಾಯಿತು ಎಂದು ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ. ರಾಜೇಂದ್ರಕುಮರ್ ಮನಗೊಳಿ ತಿಳಿಸಿದರು. ಪ.ಪಂ. ಸದಸ್ಯ ಶಿವರಾಜ ತಳವಾರ ಶಿಬಿರದಲ್ಲಿನ ರೋಗಿಗಳಿಗೆ ಊಟ ಮತ್ತು ಉಪಾಹಾರದ ವ್ಯವಸ್ಥೆಯನ್ನು ಮಾಡಿದ್ದರು. ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕಣ್ಣು ತಪಾಸಣೆ ಮಾಡುವ ಮೈಕ್ರೋಸ್ಕೋಪ್ ಇತ್ಯಾದಿ ಸಲಕರಣೆಗಳನ್ನು ದಾನದ ರೂಪದಲ್ಲಿ ನೀಡಿದರೆ ಬಹಳ ಅನುಕೂಲವಾಗಲಿದೆ ಎಂದು ಡಾ. ಮನಗೊಳಿ ನಿವೇದನೆ ಮಾಡಿದರು. ಡಾ. ಈಶ್ವರ ಸವಡಿ, ಮೆದಿಕಿನಹಾಳ ಕೇಂದ್ರದ ಮಹಿಳಾ ವೈದ್ಯಾಧಿಕಾರಿ ಡಾ. ನೇತ್ರಾವತಿ, ಸುಶಿಲೇಂದ್ರ ಇದ್ದರು.