ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ವೇತನ ಪಾವತಿಗೆ ಆಗ್ರಹಿಸಿ ಮನವಿ

Rashmi Kasaragodu
Updated On : 14 Feb 2014, 12:09 pm

ದೇವದುರ್ಗ: ತಾಲೂಕಿನ ಅತಿಥಿ ಶಿಕ್ಷಕರ ಐದು ತಿಂಗಳ ವೇತನ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಅತಿಥಿ ಶಿಕ್ಷಕರು ಒತ್ತಾಯಿಸಿದ್ದಾರೆ. ಇತ್ತೀಚೆಗೆ ಪಟ್ಟಣದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮನವಿ ಸಲ್ಲಿಸಿ, ಕಳೆದ ವರ್ಷದ ಸೆಪ್ಟೆಂಬರ್‌ನಿಂದ ಇದುವರೆಗೆ ಸರ್ಕಾರಿ ಶಾಲೆಗಳಲ್ಲಿ ಅತಿಥಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಕಳೆದ ಐದು ತಿಂಗಳಿನಿಂದ ವೇತನ ಪಾವತಿಯಾಗಿಲ್ಲ. ಪ್ರತಿ ಅತಿಥಿ ಶಿಕ್ಷಕರಿಗೆ ಕೃಪಾಂಕ ನೀಡಬೇಕು. ಸೇವಾ ಪ್ರಮಾಣ ಪತ್ರ ಹಾಗೂ ಕನಿಷ್ಠ 10 ಸಾವಿರ ಗೌರವಧನ ನೀಡಬೇಕು. ಸರ್ಕಾರಿ ಶಿಕ್ಷಕರ ನೇಮಕದ ವೇಳೆ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳುವಂತೆ ಅತಿಥಿ ಶಿಕ್ಷಕರಾದ ಮಲ್ಲಿಕಾರ್ಜುನ ಕರಿಗುಡ್ಡ, ಜಿಂದಪ್ಪ ಗೋವಿಂದಪಲ್ಲಿ, ರಸೂಲ್ ಖಾನ್ ನಾಗಡದಿನ್ನಿ, ಶಂಕರಲಿಂಗ ಜೇರಬಂಡಿ, ಶಿವರಾಜ್ ನಾಯಕ ಮಲದಕಲ್, ಚನ್ನಪ್ಪ ರಾಠೋಡ ಮಜ್ಜಿಗೇರದೊಡ್ಡಿ ಒತ್ತಾಯಿಸಿದ್ದಾರೆ.
ಪ್ರಶಸ್ತಿ ಪ್ರದಾನ
ರಾಯಚೂರು: ರಾಯಚೂರು ಕೃಷಿ ವಿವಿಯ ವಿಸ್ತರಣಾ ನಿರ್ದೇಶಕ ಡಾ. ಕೆ.ಪಿ. ವಿಶ್ವನಾಥ ಅವರಿಗೆ ತಳಿ ಅಭಿವೃದ್ಧಿ ಹಾಗೂ ಕೃಷಿ ವಿಸ್ತರಣೆಯಲ್ಲಿನ ಅತ್ಯುತ್ತಮ ಸಾಧನೆಗೆ ಉತ್ತರ ಪ್ರದೇಶ ರಾಜ್ಯದ ಝಾನ್ಸಿಯ ಕೃಷಿ ವಿಸ್ತರಣಾ ಶಿಕ್ಷಣ ಮತ್ತು ನಿರ್ವಹಣಾ ಸಂಸ್ಥೆ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಿದೆ. ಹಾಗೆಯೇ ಮೀರತ್‌ನಲ್ಲಿರುವ ಚರಣಸಿಂಗ್ ವಿವಿಯು ಕೃಷಿಯಲ್ಲಿ ವೈಜ್ಞಾನಿಕ ಅಭಿವೃದ್ಧಿ ಮತ್ತು ತಂತ್ರಜ್ಞಾನ ಸಂಸ್ಥೆಯಿಂದ ಕೊಡಮಾಡುವ ಅತಿಥ್ಯ ಗೌರವ್ ಪ್ರಶಸ್ತಿಯೂ ಇವರಿಗೆ ಲಭಿಸಿದೆ ಎಂದು ಕೃಷಿ ವಿವಿ ತಿಳಿಸಿದೆ.
ಕಾಂಗ್ರೆಸ್‌ಗೆ ನೇಮಕ
ಲಿಂಗಸ್ಗೂರು: ಬ್ಲಾಕ್ ಕಾಂಗ್ರೆಸ್‌ನ ಪರಿಶಿಷ್ಟ ಜಾತಿ ವಿಭಾಗದ ಅಧ್ಯಕ್ಷರನ್ನಾಗಿ ಪರಶುರಾಮ ನಗನೂರು ಅವರನ್ನು ಪ. ಜಾತಿ ವಿಭಾಗದ ಜಿಲ್ಲಾಧ್ಯಕ್ಷ ಲಿಂಗರಾಜ್ ಕೋಟೆ ನೇಮಕ ಮಾಡಿ ಆದೇಶ ಹೊರಡಿಸಿರುತ್ತಾರೆ.
ಸಾಧನಶೀಲ ಪ್ರಶಸ್ತಿ
ಲಿಂಗಸ್ಗೂರು: ವೀರಶೈವ ಲಿಂಗಾಯತ ಪಂಚಮಸಾಲಿ ಹರಿಹರ ಪೀಠದಿಂದ ಪ್ರತಿವರ್ಷ ನೀಡುವ ರಾಜ್ಯಮಟ್ಟದ ಸಾಧನಶೀಲ ಪ್ರಶಸ್ತಿಗೆ ಲಿಂಗಸ್ಗೂರಿನ ಅಮರೇಶ ತಾವರಗೇರಾ ಆಯ್ಕೆಗೊಂಡಿದ್ದಾರೆ. ಶಿವಮೊಗ್ಗ ಜಿಲ್ಲೆಯ ಶಿಖಾರಿಪುದಲ್ಲಿ ಫೆ.18 ರಂದು ನಡೆಯುವ ಪಂಚಮಸಾಲಿ ಶ್ರೀ ಪೀಠಾರೋಹಣದ 6ನೇ ವಾರ್ಷೀಕೋತ್ಸವ ಸಮಾರಂಭದಲ್ಲಿ ಅಮರೇಶ ತಾವರಗೇರಾ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುವುದು.
ಇಂದು ರಥೋತ್ಸವ
ಮಸ್ಕಿ: ಪಟ್ಟಣದಲ್ಲಿ ಫೆ.14ರಂದು ಇತಿಹಾಸ ಪ್ರಸಿದ್ಧ ಮಲ್ಲಿಕಾರ್ಜುನ ದೇವರ ರಥೋತ್ಸವ ನಡೆಯಲಿದೆ. ಅಂದು ಸಂಜೆ 4.30ಕ್ಕೆ ಆರಾಧ್ಯದೈವ ಮಲ್ಲಿಕಾರ್ಜುನ ದೇವರ ರಥೋತ್ಸವ ವಿಜೃಂಭಣೆಯಿಂದ ನಡೆಯಲಿದ್ದು, ಸುತ್ತಲಿನ ಗ್ರಾಮಗಳವರು ಹಾಗೂ ನೆರೆಯ ರಾಜ್ಯಗಳಿಂದ ಆಗಮಿಸುವ ಸಾವಿರಾರು ಸಂಖ್ಯೆಯ ಭಕ್ತರು ಮಹಾರಥೋತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement