ಸದಾಶಿವ ವರದಿ ಜಾರಿಗೆ ಆಗ್ರಹಿಸಿ ಮಾ.12ಕ್ಕೆ ಸಿಎಂ ಮನೆಗೆ ಮುತ್ತಿಗೆ
ರಾಯಚೂರು: ನ್ಯಾ. ಸದಾಶಿವ ಆಯೋಗದ ವರದಿಗೆ ಸಂಬಂಧಿಸಿ ರಾಜ್ಯದ ಕಾಂಗ್ರೆಸ್ ಸರ್ಕಾರ ಅನಗತ್ಯವಾಗಿ ಗೌಪ್ಯತೆ ಕಾಯುತ್ತಿದ್ದು, ವರದಿ ಬಹಿರಂಗಗೊಳಿಸಿ ಚರ್ಚೆಗೆ ಅವಕಾಶ ನೀಡಬೇಕು ಎಂಬುದು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮಾ.12ರಂದು ಬೆಂಗಳೂರಿನಲ್ಲಿ ಸಿಎಂ ಸಿದ್ದರಾಮಯ್ಯ ಅವರ ಮನೆಗೆ ಮುತ್ತಿಗೆ ಹಾಕುವುದಾಗಿ ಮಾದಿಗ ಮೀಸಲಾತಿ ಹೋರಾಟ ಸಮಿತಿ ಎಚ್ಚರಿಸಿದೆ.
ನಗರದಲ್ಲಿ ಗುರುವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಸಮಿತಿಯ ರಾಜ್ಯ ಗೌರವಾಧ್ಯಕ್ಷ ಎಸ್. ಮಾರೆಪ್ಪ ಅವರು, ಕಳೆದ ಅವಧಿಯಲ್ಲಿ ಬಿಜೆಪಿ ಸರ್ಕಾರಕ್ಕೆ ನ್ಯಾ. ಸದಾಶಿವ ಅವರು ಮೀಸಲಾತಿ ವರ್ಗೀಕರಣಕ್ಕೆ ಸಂಬಂಧಿಸಿ ತಮ್ಮ ವರದಿ ಸಲ್ಲಿಸಿದ್ದು, ಆ ವರದಿಯ ಜಾರಿಗೆ ಸಂಬಂಧಿಸಿ ವಿವಾದಗಳು ಎದ್ದಿವೆ ಎಂದು ಆರೋಪಿಸಿದರು.
ಮುಕ್ತ ಚರ್ಚೆಗೆ ಅವಕಾಶ ಕಲ್ಪಿಸಿ: ಪರಿಶಿಷ್ಟ ಜಾತಿಯಲ್ಲಿರುವ ಜಾತಿಗಳ ಮಧ್ಯೆ ವೈಷಮ್ಯಕ್ಕೆ ನ್ಯಾ. ಸದಾಶಿವ ಆಯೋಗದ ವರದಿ ದಾರಿ ಮಾಡುತ್ತಿದ್ದು, ಈ ಹಿನ್ನೆಲೆಯಲ್ಲಿ ವರದಿಯಲ್ಲಿರುವ ಅಂಶಗಳನ್ನು ಕೂಡಲೇ ರಾಜ್ಯ ಸರ್ಕಾರ ಬಹಿರಂಗಗೊಳಿಸಬೇಕು. ಮುಕ್ತ ಚರ್ಚೆಗೆ ಅವಕಾಶ ಕಲ್ಪಿಸಬೇಕು ಎಂದು ಆಗ್ರಹಿಸಿದರು.
ಕಾಂಗ್ರೆಸ್ ಸರ್ಕಾರ ತಾನು ಜಾತ್ಯತೀತವಾಗಿ ಕಾರ್ಯನಿರ್ವಹಿಸುವುದಾಗಿ ಹೇಳುತ್ತಲೇ ಜಾತಿ ವ್ಯವಸ್ಥೆಗೆ ಪರೋಕ್ಷವಾಗಿ ಬೆಂಬಲಿಸುತ್ತಿದೆ. ನ್ಯಾ. ಸದಾಶಿವ ಆಯೋಗದ ವರದಿ ಜಾರಿಗೆ ಕಳೆದ ಅನೇಕ ತಿಂಗಳುಗಳಿಂದ ಮಾದಿಗ ಜನಾಂಗದ ವಿವಿಧ ಸಂಘಟನೆಗಳು ಹೋರಾಟ ನಡೆಸುತ್ತಿದ್ದರೂ ಸರ್ಕಾರ ಕಿವಿಗೊಟ್ಟಿಲ್ಲ ಎಂದು ಟೀಕಿಸಿದರು.
ಕುಟುಂಬ ಆತಂಕದಲ್ಲಿ: ವರದಿಯಲ್ಲಿರುವ ಶಿಫಾರಸುಗಳ ಬಗ್ಗೆಯೂ ಸರ್ಕಾರ ಗೌಪ್ಯತೆ ಕಾಪಾಡುತ್ತಿದೆ. ಈ ಮಟ್ಟಿಗಿನ ಗೌಪ್ಯತೆ ಹಿಂದೆಂದೂ ಯಾವುದೇ ಆಯೋಗದ ವರದಿಗೆ ಸಂಬಂಧಿಸಿ ಕಾಯ್ದುಕೊಂಡಿರಲಿಲ್ಲ. ಸರ್ಕಾರದ ಈ ರೀತಿಯ ವರ್ತನೆಯಿಂದಾಗಿ ವಿವಾದಗಳೇಳುತ್ತಿವೆ. ಕಾರಣ ಕೂಡಲೇ ವರದಿಯಲ್ಲಿನ ಶಿಫಾರಸುಗಳ ಬಗ್ಗೆ ಚರ್ಚೆಗೆ ಅವಕಾಶ ಮಾಡಿಕೊಡುವಂತೆ ಸರ್ಕಾರವನ್ನು ಒತ್ತಾಯಿಸಿದರು.
ಕೆಪಿಎಸ್ಸಿಯಲ್ಲಿ ನಡೆದಿದೆ ಎಂದು ಆರೋಪಿಸುತ್ತಿರುವ ಹಗರಣಕ್ಕೆ ಸಂಬಂಧಿಸಿ ಗೋನಾಳ ಭೀಮಪ್ಪ ಅವರನ್ನು ಅನಗತ್ಯ ಗುರಿಯಾಗಿಸಿಕೊಂಡು ಲೋಕಸತ್ತಾದಂಥ ಪಾರ್ಟಿಗಳು ಹೋರಾಟಕ್ಕಿಳಿಯುತ್ತಿದ್ದು, ಗೋನಾಳ ಭೀಮಪ್ಪ ಅವರ ಮನೆ ಬಳಿ ಹೋರಾಟ ಮಾಡಿರುವುದು ಅವರ ಕುಟುಂಬದವರನ್ನು ಆತಂಕಕ್ಕೆ ಸಿಲುಕಿಸಿದೆ ಎಂದು ಟೀಕಿಸಿದರು.
ದೌರ್ಜನ್ಯ ನಿಲ್ಲುತ್ತಿಲ್ಲ: ಕೆಪಿಎಸ್ಸಿ ಅಕ್ರಮದ ಬಗ್ಗೆ ಪ್ರಕರಣ ದಾಖಲಾದ ನಂತರದಲ್ಲಿ ಹೋರಾಟ ನಡೆಸುವುದು ಸರಿಯಲ್ಲ. ಹಾಗೆಯೇ ಬೇನಾಮಿ ಪತ್ರದ ಆಧಾರದಲ್ಲಿ ಭೀಮಪ್ಪ ಅವರನ್ನೇ ಹೊಣೆಯಾಗಿಸಿ ತನಿಖೆಗೆ ಆದೇಶಿಸಿದ್ದು ಸರಿಯಾದ ಕ್ರಮವಲ್ಲ ಎಂದ ಅವರು, ಗೋನಾಳ ಭೀಮಪ್ಪ ಅವರನ್ನು ಅಕ್ರಮದಲ್ಲಿ ಸಿಲುಕಿಸುವ ಷಡ್ಯಂತ್ರ ಇದಾಗಿದೆ ಎಂದು ಆರೋಪಿಸಿದರು.
ಯಾದಗಿರಿ ಜಿಲ್ಲೆಯ ಕನ್ಯಾಕೋಳೂರು ಗ್ರಾಮದಲ್ಲಿ ಈಚೆಗೆ ನಡೆದ ಸವರ್ಣೀಯರ ದಾಳಿ ವೇಳೆ ದಲಿತ ದೇವೀಂದ್ರಪ್ಪ ದಳಪತಿ ಕೊಲೆಗೆ ಕಾರಣರಾದವರನ್ನು ಕೂಡಲೇ ಬಂಧಿಸಿ ಅವರಿಗೆ ಮರಣ ದಂಡನೆ ಶಿಕ್ಷೆ ವಿಧಿಸಬೇಕು. ದೇಶದಲ್ಲಿ ದಲಿತರ ರಕ್ಷಣೆಗೆಂದು ರೂಪಿಸಿದ ಕಾನೂನುಗಳು ಸಮರ್ಪಕವಾಗಿ ಜಾರಿಯಾಗುತ್ತಿಲ್ಲ. ಅದರಿಂದಾಗಿ ದಲಿತರ ಮೇಲೆ ದೌರ್ಜನ್ಯ ಪ್ರಕರಣಗಳು ನಿಲ್ಲುತ್ತಿಲ್ಲ ಎಂದು ಟೀಕಿಸಿದರು.
ಲೋಕಸಭೆ ಚುನಾವಣೆಯಲ್ಲಿ ತಕ್ಕಪಾಠ: ವಿವಿಧ ವಿವಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ದಲಿತ ಜನಾಂಗದ ಕುಲಸಚಿವರನ್ನು ಯಾವುದೇ ನೋಟಿಸ್ ಜಾರಿಗೊಳಿಸದೇ ಆ ಸ್ಥಾನದಿಂದ ಕೆಳಗಿಳಿಸಿದ್ದು ಸರ್ಕಾರದ ದಲಿತ ವಿರೋಧಿ ನೀತಿ ಸ್ಪಷ್ಟಗೊಳಿಸಿದೆ. ಸಮಾಜ ಕಲ್ಯಾಣ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಗುತ್ತಿಗೆ ಆಧಾರದಲ್ಲಿ ದುಡಿಯುತ್ತಿರುವವರ ಸೇವೆ ಕಾಯಂಗೊಳಿಸಬೇಕು. ಗುತ್ತಿಗೆ ಪದ್ಧತಿ ರದ್ದುಗೊಳಿಸಬೇಕೆಂದು ಒತ್ತಾಯಿಸಿದರು.
ರಾಜ್ಯ ಸರ್ಕಾರ ದಲಿತರನ್ನು ಕಡೆಗಣಿಸುತ್ತಿದ್ದು, ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಪಕ್ಷಕ್ಕೆ ತಕ್ಕಪಾಠ ಕಲಿಸುವುದಾಗಿ ಎಚ್ಚರಿಸಿದ ಅವರು, ಸಿಎಂ ಸಿದ್ದರಾಮಯ್ಯ ಕೂಡಲೇ ಸಮಿತಿಯ ಬೇಡಿಕೆಗಳನ್ನು ಈಡೇರಿಸದಿದ್ದಲ್ಲಿ ಮಾ.12ರಂದು ಬೆಂಗಳೂರಿನಲ್ಲಿ ಅವರ ಮನೆಗೆ ಮುತ್ತಿಗೆ ಹಾಕಲಾಗುತ್ತದೆ ಎಂದು ಎಚ್ಚರಿಸಿದರು.
ಸಂಘಟನೆಯ ಪ್ರಮುಖರಾದ ತಿಮ್ಮಪ್ಪ ಗುಂಜಳ್ಳಿ, ರವಿ ರಾಘವೇಂದ್ರ, ಹನುಮಂತ ಮನ್ನಾಪುರ, ಶಿವರಾಯ ಅಕ್ಕರಕಿ ಅನೇಕರಿದ್ದರು.