ಆಡಳಿತದಿಂದ ಹುಸಿ ಭರವಸೆ; 25ರಂದು ರಸ್ತೆ ತಡೆ ಚಳವಳಿ
ರಾಯಚೂರು: ಅಕ್ರಮ ಕಲ್ಲು, ಮರಳು, ಮದ್ಯ ಮಾರಾಟ ಮಾಫಿಯಾಗಳ ವಿರುದ್ಧ ಪ್ರಕರಣ ದಾಖಲಿಸುವುದು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಸಂಬಂಧಿಸಿ ಮಾನವಿಯಲ್ಲಿ ಕಳೆದ ತಿಂಗಳು ಪ್ರಗತಿಪರ ಸಂಘಟನೆಗಳ ಒಕ್ಕೂಟದ ಕಾರ್ಯಕರ್ತರಿಗೆ ಆಡಳಿತ ನೀಡಿದ್ದ ಭರವಸೆ ಹುಸಿಯಾಗಿದೆ. ಈ ಹಿನ್ನೆಲೆಯಲ್ಲಿ ಫೆ.25ರಂದು ಮಾನವಿ ಪಟ್ಟಣದ ಬಸವ ವೃತ್ತದಲ್ಲಿ ರಸ್ತೆ ತಡೆ ಚಳವಳಿ ಹಮ್ಮಿಕೊಳ್ಳಲಾಗಿದೆ ಎಂದು ಒಕ್ಕೂಟದ ಸಂಚಾಲಕ ಕೆ. ನಾಗಲಿಂಗಸ್ವಾಮಿ ಹೇಳಿದರು.
ನಗರದಲ್ಲಿ ಶುಕ್ರವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮಾನವಿ ತಾಲೂಕಿನಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ, ಅಕ್ರಮ ಮರಳು ಸಾಗಾಣಿಕೆ, ಗ್ರಾಮೀಣ ರಸ್ತೆಗಳ ನಿರ್ಮಾಣ ಸೇರಿ ವಿವಿಧ ಬೇಡಿಕೆಗಳನ್ನಿರಿಸಿಕೊಂಡು ಕಳೆದ ತಿಂಗಳು ಸಂಘಟನೆಯಿಂದ ಮಾನವಿ ಬಂದ್‌ಗೆ ಕರೆ ನೀಡಲಾಗಿತ್ತು. ಆದರೆ ಆ ಸಂದರ್ಭದಲ್ಲಿ ಅಧಿಕಾರಿಗಳು ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದ್ದರಿಂದ ಬಂದ್ ಹಿಂಪಡೆಯಲಾಗಿತ್ತು ಎಂದು ತಿಳಿಸಿದರು.
ಆಗ ಅಧಿಕಾರಿಗಳು 15 ದಿನದಲ್ಲಿ ಬೇಡಿಕೆಗಳ ಈಡೇರಿಸುವುದಾಗಿ ಹೇಳಿದ್ದರು. ಆದರೆ ಯಾವುದೇ ಭರವಸೆಗಳು ಈವರೆಗೆ ಈಡೇರಿಲ್ಲ. ಭರವಸೆ ನೀಡಿ ತಿಂಗಳಾಗುತ್ತಾ ಬಂದರೂ ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ ಎಂದ ಅವರು ಮಾನವಿ ತಾಲೂಕಿನಲ್ಲಿ ಅಕ್ರಮ ಮರಳು, ಕಲ್ಲು ಗಣಿಗಾರಿಕೆ, ಮದ್ಯ ಮಾರಾಟ ಅವ್ಯಾಹತವಾಗಿ ಮುಂದುವರಿದಿದೆ ಎಂದು ಆರೋಪಿಸಿದರು.
ನಿವಾಸಿಗಳ ಬದುಕು ಅತಂತ್ರ: ಅದೇ ರೀತಿ ಮಾನವಿ ತಾಲೂಕಿನ ಗ್ರಾಮೀಣ ಭಾಗಕ್ಕೆ ಹದಗೆಟ್ಟಿರುವ ರಸ್ತೆ ದುರಸ್ತಿಗೆ ಕ್ರಮ ಕೈಗೊಳ್ಳಲು ಒತ್ತಾಯಿಸಲಾಗಿತ್ತು. ಆದರೆ ರಸ್ತೆಗಳ ಸ್ಥಿತಿ ಸುಧಾರಣೆ ಕಂಡಿಲ್ಲ. ಅದೇ ರೀತಿ ತಾಲೂಕಿನಲ್ಲಿ ನೈಸರ್ಗಿಕ ಸಂಪತ್ತು ಲೂಟಿ ಜಾರಿಯಲ್ಲಿದ್ದರೂ ಅಕ್ರಮ ದಲ್ಲಿ ಶಾಮೀಲಾದವರ ವಿರುದ್ಧ ಕ್ರಮ ಕೈಗೊಂಡಿಲ್ಲ. ಮಾನವಿ ಪಟ್ಟಣದ ಸೋನಿಯಾ ಗಾಂಧಿ ಕಾಲೋನಿ ಸೇರಿ ಇತರೆ ಕಾಲೋನಿಗಳಲ್ಲಿ ನಿವಾಸಿಗಳ ಬದುಕು ಅತಂತ್ರವಾಗಿದೆ. ಅವರಿಗೆ ಹತ್ತಾರು ವರ್ಷಗಳಿಂದ ಹಕ್ಕುಪತ್ರ ವಿತರಿಸಿಲ್ಲ. ಮೂಲ ಸೌಲಭ್ಯಗಳನ್ನೂ ಒದಗಿಸಿಲ್ಲ ಎಂದು ಆರೋಪಿಸಿದರು.
ಮಾನವಿಯಲ್ಲಿ ಸುಸಜ್ಜಿತ ಆಸ್ಪತ್ರೆಯಿದ್ದರೂ ವೈದ್ಯರ ಕೊರತೆಯಿದೆ. ಕುಡಿಯುವ ನೀರು ಸೇರಿ ವಿವಿಧ ಮೂಲ ಸೌಕರ್ಯಗಳಿಲ್ಲ. ಎಪಿಎಂಸಿಯಲ್ಲಿ ಅಕ್ರಮವಾಗಿ ನಿವೇಶನ ಪಡೆದಿರುವವರು ಅವುಗಳನ್ನು ಬಾಡಿಗೆ ನೀಡಿದ್ದು ಸರ್ಕಾರದ ಜಾಗದಿಂದಲೇ ಬಾಡಿಗೆ ವಸೂಲಿಯಂಥ ಕೃತ್ಯ ನಡೆದಿದೆ ಎಂದು ದೂರಿದರು.
ಈ ಎಲ್ಲ ಬೇಡಿಕೆಗಳನ್ನು ಮುಂದಿರಿಸಿಕೊಂಡು ಕ್ರಮಕ್ಕೆ ಒತ್ತಾಯಿಸಿ ಕಳೆದ ತಿಂಗಳು ಮಾನವಿ ಬಂದ್‌ಗೆ ಕರೆ ನೀಡಲಾಗಿತ್ತು. ಆದರೆ ಆಡಳಿತ ಈ ಬಗ್ಗೆ ನಿಷ್ಕ್ರೀಯವಾಗಿದೆ ಎಂದು ಆರೋಪಿಸಿದ ಅವರು, ಕೂಡಲೇ ಅಕ್ರಮದಲ್ಲಿ ತೊಡಗಿರುವ ಗುತ್ತಿಗೆದಾರರನ್ನು ಕಪ್ಪು ಪಟ್ಟಿಯಲ್ಲಿರಿಸಬೇಕು ಎಂದು ಆಗ್ರಹಿಸಿದರು.
ಹೋರಾಟ ಚುರುಕು: ಈ ನಿಟ್ಟಿನಲ್ಲಿ ಮಾನವಿ ತಾಲೂಕು ಆಡಳಿತ ಎಚ್ಚರಿಸಲು ಫೆ.25ರಂದು ರಸ್ತೆ ತಡೆ ಚಳವಳಿ ಆಯೋಜಿಸಲಾಗಿದೆ. ತಾಲೂಕು ಆಡಳಿತ ಸಂಘಟನೆಗಳ ಎಲ್ಲ ಬೇಡಿಕೆ ಈಡೇರಿಸುವವರೆಗೆ ಹೋರಾಟ ಹಿಂಪಡೆಯುವುದಿಲ್ಲ ಎಂದು ಎಚ್ಚರಿಸಿದ ಅವರು, ಈ ನಿಟ್ಟಿನಲ್ಲಿ ಕೂಡಲೇ ಕ್ರಮ ಕೈಗೊಂಡು ಕಾನೂನು ಕ್ರಮ ಜರುಗಿಸದಿದ್ದಲ್ಲಿ ಹಾಗೂ ಅಭಿವೃದ್ಧಿ ಕಾರ್ಯಕ್ಕೆ ಚಾಲನೆ ನೀಡದಿದ್ದಲ್ಲಿ ಹೋರಾಟ ಚುರುಕುಗೊಳಿಸಲಾಗುತ್ತದೆ ಎಂದು ಹೇಳಿದರು.
ಸಂಘಟನೆಯ ಪ್ರಭುರಾಜ್ ಕೊಡ್ಲಿ, ಮುದುಕಪ್ಪ ನಾಯಕ, ಶ್ರೀಕಾಂತ ಪಾಟೀಲ್ ಗೂಳಿ, ಸುಧಾನಂದ, ಲಕ್ಷ್ಮಣ ಜಾನೇಕಲ್, ಶಾನವಾಜ್, ನರಸಪ್ಪ ಜೂಕೂರು ಅನೇಕರಿದ್ದರು.