ಗಣಿ ಸರ್ವೇ ಪೂರ್ಣ: ಶಿಸ್ತು ಕ್ರಮ ಯಾವಾಗ?
ಮುದಗಲ್: ಪಟ್ಟಣ ಸೇರಿದಂತೆ ತಾಲೂಕಿನ ಮಾಕಾಪುರ, ನಾಗರಹಾಳ, ಆದಾಪುರ, ತೋರಲಬೆಂಚಿ ಸೇರಿದಂತೆ ವಿವಿಧ ಕಡೆಗಳಲ್ಲಿ ನಡೆಯುತ್ತಿರುವ ಗಣಿಗಾರಿಕೆ ಪ್ರದೇಶಗಳ ಸರ್ವೇ ಕಾರ್ಯ ಪೂರ್ಣಗೊಂಡಿದೆ.
ಸರ್ವೇ ಕಾರ್ಯದಿಂದ ಗಣಿ ಪ್ರದೇಶಗಳಲ್ಲಿ ನಡೆದ ಅಕ್ರಮ ಸಕ್ರಮ ಗಳು ಬಯಲಾಗಿದ್ದು, ವರದಿಯಲ್ಲಿ ನಮೂದಾಗಿವೆ. ಈಗಾಗಲೇ ಅಕ್ರಮಕ್ಕೆ ಸಂಬಂಧಪಟ್ಟಂತೆ ಗಣಿ ಮಾಲೀಕರ ವಿರುದ್ಧ ಸಮಗ್ರ ವರದಿ ತಯಾರಾಗಿದ್ದು, ಮೇಲಾಧಿಕಾರಿಗಳಿಗೆ ಸಲ್ಲಿಕೆಯಾಗಿದೆ. ಸದನದಲ್ಲಿ ಗಣಿ ಗಲಾಟೆಯಾದರೂ ಸರ್ಕಾರದ ದಿವ್ಯ ನಿರ್ಲಕ್ಷ್ಯದಿಂದ ಅಕ್ರಮಕ್ಕೆ ಕುಮ್ಮಕ್ಕು ನೀಡಿದಂತಾಗಿದೆ. ಗಣಿ ಅಕ್ರಮದಲ್ಲಿ ಯಾರೇ ಇರಲಿ ಅವರ ವಿರುದ್ಧ ಶಿಸ್ತು ಕ್ರಮ ಜರುಗಿಸಲೇಬೇಕೆಂಬುದು ನಾಗರೀಕರ ಒತ್ತಾಸೆ.
ಒಟ್ಟಾರೆ ತಾಲೂಕಿನಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ ಪ್ರದೇಶಗಳ ಸರ್ವೇ ಕಾರ್ಯ ಪೂರ್ಣಗೊಂಡಿದ್ದು, ವರದಿ ಕೂಡ ಸರ್ಕಾರಕ್ಕೆ ತಲುಪಿದೆ. ಗಣಿ ಸರ್ವೇಯಿಂದಾಗಿ ಅಕ್ರಮಕ್ಕೆ ಬ್ರೇಕ್ ಹಾಕಿದಂತಾದರೂ ತಾತ್ಕಾಲಿಕ ತಡೆ ಹೇರಿದಂತಾಗಿದೆ.
ಚೆಕ್‌ಪೋಸ್ಟ್ ಮಾಡಿಲ್ಲ: ಗಣಿ ಸರ್ವೇ ಕಾರ್ಯ ಪ್ರಕ್ರಿಯೆ ನಡೆದಾಗ ಮತ್ತು ನಂತರದಲ್ಲಿ ಜಿಲ್ಲಾಧಿಕಾರಿಗಳು ಗಣಿ ಪ್ರದೇಶಗಳಿಗೆ ಭೇಟಿ ನೀಡಿ ಅಕ್ರಮವನ್ನು ತಡೆಗಟ್ಟುವ ನಿಟ್ಟಿನಲ್ಲಿ ಕಾನೂನು ಕ್ರಮಗಳನ್ನು ಅನುಸರಿಸುವುದರ ಜೊತೆಗೆ ಚೆಕ್‌ಪೋಸ್ಟ್ ನಿರ್ಮಾಣ, ಸಿಸಿ ಟಿವಿ ಅಳವಡಿಕೆ ಮಾಡುವಂತೆ ತನಿಖೆ ಮುಖ್ಯಸ್ಥರಾಗಿದ್ದ ಸಹಾಯಕ ಆಯುಕ್ತರಿಗೆ ಚೆಕ್‌ಪೋಸ್ಟ್ ನಿರ್ಮಿಸಲು ಸೂಚನೆ ನೀಡಿದ್ದರು.
ಮಾಕಾಪುರ, ಆದಾಪುರ, ಕಿಲಾರಹಟ್ಟಿ ಸೇರಿದಂತೆ ನಾನಾ ಕಡೆಗಳಲ್ಲಿ ಅಕ್ರಮ ಗಣಿ ಕಂಪನಿಗಳು ಹಾಗೂ ಗಣಿ ಒತ್ತುವರಿ ಮಾಡಿರುವುದು ಸ್ಪಷ್ಟ ಚಿತ್ರಣವನ್ನು ಇಲಾಖಾಧಿಗಳು ನೀಡಿರುವ ವರದಿಯಿಂದ ತಿಳಿದುಬಂದಿದೆ.
ರಾಜಧನಕ್ಕೆ ಕತ್ತರಿ: ಗಣಿ ಶಿಲೆಗಳನ್ನು ಹೊತ್ತು ಸಾಗಿಸುವ ಹಾಗೂ ಶಿಲೆಗಳಿಗೆ ವಿಧಿಸಲಾದ ರಾಜಧನಕ್ಕೆ ಕತ್ತರಿ ಬೀಳುತ್ತಿದೆ. ಚೆಕ್‌ಪೋಸ್ಟ್ ನಿರ್ಮಾಣವಾದರೆ ಅಕ್ರಮಕ್ಕೆ ಶಾಶ್ವತವಾಗಿ ಬ್ರೇಕ್ ಹಾಕಬಹುದಾಗಿದೆ. ಆದರೆ ತನಿಖೆ ನಡೆಸಿದ ತನಿಖಾ ತಂಡದ ಅಧಿಕಾರಿಗಳು ಯಾವ ರೀತಿ ಸರ್ಕಾರಕ್ಕೆ ವರದಿ ಸಲ್ಲಿಸುವರು ಎನ್ನುವುದರ ಮೇಲೆ ಅವಲಂಬಿತವಾಗಿದೆ. ಸದ್ಯ ಮಟ್ಟಿಗೆ ಅಕ್ರಮ ಗಣಿಗಾರಿಕೆಗೆ ಬ್ರೇಕ್ ಬಿದ್ದಿದೆ. ಮುಂದಿನ ದಿನಗಳಲ್ಲಿ ಯಾರ ಮೇಲೆ ಕ್ರಮ ಜರುಗಿಸುತ್ತದಯೋ ಎನ್ನುವುದನ್ನು ಕಾದು ನೋಡಬೇಕಾಗಿದೆ.